ಸೌತ್ ಆಫ್ರಿಕಾ ತಂಡವನ್ನು ಮಕಾಡೆ ಮಲಗಿಸಿದ ನೆದರ್ಲೆಂಡ್ಸ್
Netherlands vs South Africa: ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಕ್ವಿಂಟನ್ ಡಿಕಾಕ್ 20 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಟೆಂಬಾ ಬವುಮಾ 16 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ರಾಸ್ಸಿ ವಂಡೆರ್ ಡಸ್ಸೆನ್ (4) ಹಾಗೂ ಐಡೆನ್ ಮಾರ್ಕ್ರಾಮ್ (1) ಬಂದ ವೇಗದಲ್ಲೇ ಹಿಂತಿರುಗಿದರು.
ಏಕದಿನ ವಿಶ್ವಕಪ್ನ 15ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ನೆದರ್ಲೆಂಡ್ಸ್ ಅಮೋಘ ಗೆಲುವು ದಾಖಲಿಸಿದೆ. ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದಾಗಿ ತಲಾ 43 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಕೇವಲ 50 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನೆದರ್ಲೆಂಡ್ಸ್ ತಂಡಕ್ಕೆ ನಾಯಕ ಸ್ಕಾಟ್ ಎಡ್ವರ್ಡ್ಸ್ ಆಸರೆಯಾದರು. ಅದ್ಭುತ ಇನಿಂಗ್ಸ್ ಕಟ್ಟಿದ ಎಡ್ವರ್ಡ್ಸ್ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 69 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಎಡ್ವರ್ಡ್ಸ್ ಅಜೇಯ 78 ರನ್ ಬಾರಿಸಿದರು.
ಇನ್ನು ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆರ್ಯನ್ ದತ್ 9 ಎಸೆತಗಳಲ್ಲಿ 3 ಸಿಕ್ಸ್ಗಳೊಂದಿಗೆ ಅಜೇಯ 23 ರನ್ ಸಿಡಿಸಿದರು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ಸ್ ತಂಡವು ನಿಗದಿತ 43 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಕ್ವಿಂಟನ್ ಡಿಕಾಕ್ 20 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಟೆಂಬಾ ಬವುಮಾ 16 ರನ್ಗಳಿಸಿ ಕ್ಲೀನ್ ಬೌಲ್ಡ್ ಆದರು. ಆ ಬಳಿಕ ರಾಸ್ಸಿ ವಂಡೆರ್ ಡಸ್ಸೆನ್ (4) ಹಾಗೂ ಐಡೆನ್ ಮಾರ್ಕ್ರಾಮ್ (1) ಬಂದ ವೇಗದಲ್ಲೇ ಹಿಂತಿರುಗಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 28 ರನ್ಗಳಿಸಿ ಆಪಾಯಕಾರಿಯಾಗುವ ಸೂಚನೆ ನೀಡಿದ್ದ ಕ್ಲಾಸೆನ್ ಅವರನ್ನು ಔಟ್ ಮಾಡುವಲ್ಲಿ ವ್ಯಾನ್ ಬೀಕ್ ಯಶಸ್ವಿಯಾದರು.
ಪರಿಣಾಮ 89 ರನ್ಗಳಿಗೆ ಸೌತ್ ಆಫ್ರಿಕಾ ತಂಡವು 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ಮಾರ್ಕೊ ಯಾನ್ಸನ್ 9 ರನ್ಗಳಿಸಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಇದಾಗ್ಯೂ ಮತ್ತೊಂದೆಡೆ ಡೇವಿಡ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು. 52 ಎಸೆತಗಳಲ್ಲಿ 43 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ಡೇವಿಡ್ ಮಿಲ್ಲರ್ನನ್ನು ಕೊನೆಗೂ ಬೌಲ್ಡ್ ಮಾಡುವಲ್ಲಿ ವ್ಯಾನ್ ಬೀಕ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಜೆರಾಲ್ಡ್ ಕೋಟ್ಝಿ (22) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಕಗಿಸೊ ರಬಾಡ ಇನಿಂಗ್ಸ್ 9 ರನ್ಗಳಿಗೆ ಸೀಮಿತವಾಗಿತ್ತು.
ಅಂತಿಮವಾಗಿ 42.5 ಓವರ್ಗಳಲ್ಲಿ 207 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೌತ್ ಆಫ್ರಿಕಾ ತಂಡವು 38 ರನ್ಗಳಿಂದ ಸೋಲೊಪ್ಪಿಕೊಂಡಿತು. ಅತ್ತ ಈ ಐತಿಹಾಸಿಕ ಗೆಲುವಿನೊಂದಿಗೆ ನೆದರ್ಲೆಂಡ್ಸ್ ತಂಡವು ಏಕದಿನ ವಿಶ್ವಕಪ್ 2023 ರಲ್ಲಿ ಗೆಲುವಿನ ಖಾತೆ ತೆರೆದಿರುವುದು ವಿಶೇಷ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜೆರಾಲ್ಡ್ ಕೋಟ್ಝಿ.
ಇದನ್ನೂ ಓದಿ: ಚೇಸ್ ಮಾಸ್ಟರ್…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ
ನೆದರ್ಲೆಂಡ್ಸ್ (ಪ್ಲೇಯಿಂಗ್ XI): ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್ತ್, ಪಾಲ್ ವ್ಯಾನ್ ಮೀಕೆರೆನ್.
Published On - 11:01 pm, Tue, 17 October 23