ICC World Cup 2023: ಭದ್ರತಾ ಪರಿಶೀಲನೆಗೆ ಭಾರತಕ್ಕೆ ಬರಲಿದೆ ಪಾಕ್ ಭದ್ರತಾ ನಿಯೋಗ..!

|

Updated on: Jul 02, 2023 | 8:58 AM

ICC World Cup 2023: ಪಾಕಿಸ್ತಾನದ ಭದ್ರತಾ ನಿಯೋಗ ಭಾರತಕ್ಕೆ ಯಾವಾಗ ಬರಲಿದೆ ಅನ್ನೋದು ವಿದೇಶಾಂಗ ಮತ್ತು ಆಂತರಿಕ ಸಚಿವಾಲಯಗಳ ಜೊತೆಗೆ ಚರ್ಚಿಸಿದ ಬಳಕಷ್ಟೇ ಪಿಸಿಬಿ ತೀರ್ಮಾನಿಸಲಿದೆ.

ICC World Cup 2023: ಭದ್ರತಾ ಪರಿಶೀಲನೆಗೆ ಭಾರತಕ್ಕೆ ಬರಲಿದೆ ಪಾಕ್ ಭದ್ರತಾ ನಿಯೋಗ..!
ಪಾಕಿಸ್ತಾನ ತಂಡ
Follow us on

ಏಕದಿನ ವಿಶ್ವಕಪ್ (ICC ODI World Cup) ವೇಳಾಪಟ್ಟಿ ಪ್ರಕಟವಾದ ಬಳಿಕ ಭಾರತದಲ್ಲಿ ಈ ಟೂರ್ನಿ ಆಯೋಜನೆಗೆ ಸಿದ್ಧತೆಗಳು ಕೂಡ ವೇಗ ಪಡೆದುಕೊಂಡಿವೆ. ಅಲ್ಲದೆ ವಿಶ್ವಕಪ್ ಇತಿಹಾಸದಲ್ಲಿ ಏಕಾಂಗಿಯಾಗಿ ಭಾರತದ ನೆಲದಲ್ಲಿ ವಿಶ್ವಕಪ್ ಆಯೋಜಿಸುತ್ತಿರುವ ಬಿಸಿಸಿಐ (BCCI) ಪಂದ್ಯಗಳು ನಡೆಯುವ ಎಲ್ಲಾ 10 ಸ್ಥಳಗಳ ಸಿದ್ಧತೆ ಮೇಲೆ ಗಮನ ಕೇಂದ್ರಿಕರಿಸಿದೆ. ಆದರೆ, ಈ ನಡುವೆ ಪಾಕಿಸ್ತಾನದ ಭದ್ರತಾ ನಿಯೋಗವೊಂದು (security delegation) ಭಾರತಕ್ಕೆ ಭೇಟಿ ನೀಡಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ವರದಿ ಪ್ರಕಾರ ಈ ನಿಯೋಗದಲ್ಲಿರುವ ಅಧಿಕಾರಿಗಳು ಪಾಕಿಸ್ತಾನ ತನ್ನ ಪಂದ್ಯಗಳನ್ನು ಆಡಬೇಕಾದ ಸ್ಥಳಗಳಿಗೆ ಭೇಟಿ ನೀಡಲ್ಲಿದ್ದು ಎಲ್ಲಾ ಸ್ಥಳಗಳ ಭದ್ರತೆ ಮತ್ತು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸುತ್ತದೆ. ಎಲ್ಲಾ ಸ್ಥಳಗಳಲ್ಲಿ ತಮ್ಮ ಆಟಗಾರರು, ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಯಾವ ಸೌಲಭ್ಯಗಳಿವೆ ಎಂಬುದನ್ನು ಅವಲೋಕಿಸಿ ತಮ್ಮ ವರದಿಯನ್ನು ಪಾಕಿಸ್ತಾನ ಸರ್ಕಾರಕ್ಕೆ ಹಸ್ತಾಂತರಿಸುತ್ತದೆ. ಈ ನಿಯೋಗದ ವರದಿ ಆಧರಿಸಿ ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ವಿಶ್ವಕಪ್ ಆಡಲು ಅವಕಾಶ ನೀಡುವುದರ ಬಗ್ಗೆ ಪಾಕ್ ಸರ್ಕಾರ (Pakistan Government) ತೀರ್ಮಾನಿಸಲಿದೆ ಎಂದು ತಿಳಿದು ಬಂದಿದೆ.

ಸ್ಥಳ ಬದಲಾಯಿಸಲು ಬೇಡಿಕೆ ಇಡಬಹುದು

ಪಾಕಿಸ್ತಾನದ ಈ ನಿಯೋಗವು ಯಾವುದೇ ಸ್ಥಳದ ಭದ್ರತೆ ಅಥವಾ ಇತರ ಸೌಲಭ್ಯಗಳಿಂದ ತೃಪ್ತರಾಗದಿದ್ದರೆ, ಅದು ಅದನ್ನು ತನ್ನ ವರದಿಯಲ್ಲಿ ಬರೆದು ಪಾಕಿಸ್ತಾನದ ಸರ್ಕಾರಕ್ಕೆ ನೀಡುತ್ತದೆ. ಇದಾದ ಬಳಿಕ ಪಾಕಿಸ್ತಾನ ಸರ್ಕಾರ ಈ ಬಗ್ಗೆ ಪಿಸಿಬಿಗೆ ಮಾಹಿತಿ ನೀಡಲಿದೆ. ಕೊನೆಯಲ್ಲಿ, ಪಿಸಿಬಿ ತನ್ನ ತಂಡ ಆಡುವ ಸ್ಥಳಗಳನ್ನು ಬದಲಾಯಿಸುವಂತೆ ಐಸಿಸಿ ಅಥವಾ ಬಿಸಿಸಿಐಗೆ ಲಿಖಿತ ಬೇಡಿಕೆಯನ್ನು ಇಡಲಿದೆ. ವಾಸ್ತವವಾಗಿ ಪಾಕ್ ನಿಯೋಗ ಸ್ಥಳ ಬದಲಾವಣೆಗೆ ಒತ್ತಾಯಿಸುವ ಸಾಧ್ಯತೆಗಳಿವೆ. ಏಕೆಂದರೆ ಈ ಹಿಂದೆಯೇ ಪಾಕ್ ಮಂಡಳಿ 2 ಪಂದ್ಯಗಳು ನಡೆಯುವ ಸ್ಥಳಗಳನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ಇದೀಗ ಪಾಕ್ ನಿಯೋಗದ ಬೆಂಬಲದೊಂದಿಗೆ ಆ 2 ಸ್ಥಳಗಳನ್ನು ಬದಲಿಸುವಂತೆ ಐಸಿಸಿಗೆ ಒತ್ತಡ ಹೇರುವ ಸಾಧ್ಯತೆಗಳಿವೆ.

ODI World Cup 2023: ‘ನಾವು ಯಾವ ಪಂದ್ಯದಲ್ಲೂ’; ತಂಡದ ಸೋಲಿಗೆ ವಿಂಡೀಸ್ ನಾಯಕ ದೂರಿದ್ದು ಯಾರನ್ನು ಗೊತ್ತಾ?

2 ಸ್ಥಳಗಳನ್ನು ಬದಲಿಸಿ ಎಂದಿದ್ದ ಪಾಕ್

ಅಫ್ಘಾನಿಸ್ತಾನ ವಿರುದ್ಧ ಚೆನ್ನೈನಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕಾಗಿ ಪಿಸಿಬಿ ಐಸಿಸಿಗೆ ಪತ್ರವನ್ನೂ ಬರೆದಿತ್ತು. ಆದರೆ ವೇಳಾಪಟ್ಟಿಯನ್ನು ಪ್ರಕಟಿಸಿದಾಗ, ಪಿಸಿಬಿಯ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದೆ ಎಂಬುದು ಸ್ಪಷ್ಟವಾಗಿತ್ತು. ಆದಾಗ್ಯೂ, ಈಗ ತನ್ನ ಭದ್ರತಾ ನಿಯೋಗವನ್ನು ಬಳಸಿಕೊಂಡು, ಪಾಕಿಸ್ತಾನವು ಮತ್ತೊಮ್ಮೆ ಪಂದ್ಯಗಳ ಸ್ಥಳವನ್ನು ಬದಲಾಯಿಸಲು ಒತ್ತಾಯಿಸಬಹುದು.

ಯಾವಾಗ ಬರುತ್ತೆ ಭದ್ರತಾ ನಿಯೋಗ

ಪಾಕಿಸ್ತಾನದ ಭದ್ರತಾ ನಿಯೋಗ ಭಾರತಕ್ಕೆ ಯಾವಾಗ ಬರಲಿದೆ ಅನ್ನೋದು ವಿದೇಶಾಂಗ ಮತ್ತು ಆಂತರಿಕ ಸಚಿವಾಲಯಗಳ ಜೊತೆಗೆ ಚರ್ಚಿಸಿದ ಬಳಕಷ್ಟೇ ಪಿಸಿಬಿ ತೀರ್ಮಾನಿಸಲಿದೆ. ಅಂತೂ, ಭಾರತಕ್ಕೆ ಬರುವ ಪಾಕ್​ ಸೆಕ್ಯುರಿಟಿ ಟೀಮ್​, ಪಾಕಿಸ್ತಾನದ ಪಂದ್ಯಗಳು ನಡೆಯೋ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಅಹ್ಮದಾಬಾದ್​​ ತಾಣಗಳನ್ನು ಪರಿಶೀಲಿಸಲಿದೆ. ಭಾರತಕ್ಕೆ ತಂಡ ಕಳಿಸೋಕೂ ಮುನ್ನ ಸರ್ಕಾರದ ಅನುಮತಿ ಪಡೆಯಲು ಪಿಸಿಬಿ ನಿಯೋಗವನ್ನು ಕಳಿಸೋದು ಸಾಮಾನ್ಯ ಅಭ್ಯಾಸವಾಗಿದೆ ಅಂತ BCCI ಮೂಲ ತಿಳಿಸಿದೆ.

ಪಾಕಿಸ್ತಾನದ ವಿಶ್ವಕಪ್ ವೇಳಾಪಟ್ಟಿ

2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು 5 ಸ್ಥಳಗಳಲ್ಲಿ 9 ಲೀಗ್ ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನದ ಮೊದಲ ಪಂದ್ಯ ಅಕ್ಟೋಬರ್ 6 ರಂದು ಕ್ವಾಲಿಫೈಯರ್ 1 ವಿರುದ್ಧ ಮತ್ತು ಎರಡನೇ ಪಂದ್ಯ ಅಕ್ಟೋಬರ್ 12 ರಂದು ಕ್ವಾಲಿಫೈಯರ್ 2 ತಂಡದ ವಿರುದ್ಧ ನಡೆಯಲಿದೆ. ಪಾಕಿಸ್ತಾನ ತಂಡ ಅಕ್ಟೋಬರ್ 15 ರಂದು ಟೀಂ ಇಂಡಿಯಾ ವಿರುದ್ಧ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಪಾಕಿಸ್ತಾನದ 5ನೇ ಪಂದ್ಯ ಅಫ್ಘಾನಿಸ್ತಾನ ವಿರುದ್ಧ ಅಕ್ಟೋಬರ್ 23 ರಂದು ಚೆನ್ನೈನಲ್ಲಿ ನಡೆಯಲಿದೆ. ಪಾಕಿಸ್ತಾನದ ಆರನೇ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅಕ್ಟೋಬರ್ 27 ರಂದು ಚೆನ್ನೈನಲ್ಲಿ ನಡೆಯಲಿದೆ. ಅಕ್ಟೋಬರ್ 31 ರಂದು ಕೋಲ್ಕತ್ತಾದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ನವೆಂಬರ್ 4 ರಂದು ಪಾಕಿಸ್ತಾನ ತಂಡ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ನವೆಂಬರ್ 12 ರಂದು ಕೋಲ್ಕತ್ತಾದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

 

Published On - 8:55 am, Sun, 2 July 23