10 ಎಸೆತಗಳಲ್ಲಿ 3 ವಿಕೆಟ್; ಜಡೇಜಾ ಮ್ಯಾಜಿಕ್ಗೆ ಕಾಂಗರೂಗಳ ಪೆವಿಲಿಯನ್ ಪರೇಡ್..!
ICC World Cup 2023: ವಾರ್ನರ್ ವಿಕೆಟ್ ಬಳಿಕ ಬಂದ ಲಬುಶೇನ್, ಸ್ಮಿತ್ಗೆ ಸಾಥ್ ನೀಡುವ ಮೂಲಕ ಆಸೀಸ್ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಇಬ್ಬರ ನಡುವೆ 44 ರನ್ಗಳ ಜೊತೆಯಾಟ ಕೂಡ ಏರ್ಪಟ್ಟಿತ್ತು. ಈ ವೇಳೆ ದಾಳಿಗಿಳಿದ ಜಡೇಜಾ, ಕೇವಲ ಎರಡೇ ಎರಡು ಓವರ್ಗಳ ಅಂತರದಲ್ಲಿ ಪ್ರಮುಖ ಮೂರು ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದರು.

ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಚೆನ್ನೈನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನ (World Cup 2023) ಐದನೇ ಪಂದ್ಯದಲ್ಲಿ, ಟೀಂ ಇಂಡಿಯಾ, ಕಾಂಗರೂ ಪಡೆಯನ್ನು ಕೇವಲ 199 ರನ್ಗಳಿಗೆ ಆಲೌಟ್ ಮಾಡಿದೆ. ಟೀಂ ಇಂಡಿಯಾ (Team India) ವೇಗಿಗಳ ಕರಾರುವಕ್ಕಾದ ದಾಳಿಯಿಂದ ಕಾಂಗರೂಗಳಿಗೆ ಸಂಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅದರಲ್ಲೂ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾರ (Ravindra Jadeja) ಸ್ಪಿನ್ ಮ್ಯಾಜಿಕ್ಗೆ ದಿಕ್ಕೆಟ್ಟ ಕಮ್ಮಿನ್ಸ್ ಪಡೆಯ ಬ್ಯಾಟರ್ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಚೆಪಾಕ್ ಮೈದಾನ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವುದರ ಲಾಭ ಪಡೆದ ಜಡೇಜಾ ದಾಳಿಗಿಳಿದ ಕೂಡಲೇ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಲಾರಂಭಿಸಿದರು. ಈ ನಡುವೆ 28 ಮತ್ತು 30ನೇ ಓವರ್‌ನಲ್ಲಿ ತನ್ನ ಜಾದು ತೋರಿದ ಜಡೇಜಾ ಕೇವಲ 10 ಎಸೆತಗಳಲ್ಲಿ ಆಸೀಸ್ ಪಾಳಯದ ಪ್ರಮುಖ 3 ವಿಕೆಟ್ ಉರುಳಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಮಿಚೆಲ್ ಮಾರ್ಷ್ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ಆದರೆ ಆ ಬಳಿಕ ಜೊತೆಯಾದ ವಾರ್ನರ್ ಹಾಗೂ ಸ್ಮಿತ್ ಅರ್ಧಶತಕದ ಜೊತೆಯಾಟ ಆಡುವ ಮೂಲಕ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಈ ವೇಳೆ 17ನೇ ಓವರ್‌ನಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್, ಅರ್ಧಶತಕದ ಸನಿಹದಲ್ಲಿದ್ದ ವಾರ್ನರ್ (41 ರನ್) ಅವರನ್ನು ಕೆಡ್ಡಾಕೆ ಕೆಡುವಿದರು.
ಏಕದಿನ ವಿಶ್ವಕಪ್ನಲ್ಲಿ ಧೋನಿ- ರಾಹುಲ್ರನ್ನು ಹಿಂದಿಕ್ಕಿದ ರೋಹಿತ್ ಶರ್ಮಾ..!
2 ಓವರ್ಗಳ ಅಂತರದಲ್ಲಿ 3 ವಿಕೆಟ್
ವಾರ್ನರ್ ವಿಕೆಟ್ ಬಳಿಕ ಬಂದ ಲಬುಶೇನ್, ಸ್ಮಿತ್ಗೆ ಸಾಥ್ ನೀಡುವ ಮೂಲಕ ಆಸೀಸ್ ಮೊತ್ತವನ್ನು 100ರ ಗಡಿ ದಾಟಿಸಿದರು. ಈ ಇಬ್ಬರ ನಡುವೆ 44 ರನ್ಗಳ ಜೊತೆಯಾಟ ಕೂಡ ಏರ್ಪಟ್ಟಿತ್ತು. ಈ ವೇಳೆ ದಾಳಿಗಿಳಿದ ಜಡೇಜಾ, ಕೇವಲ ಎರಡೇ ಎರಡು ಓವರ್ಗಳ ಅಂತರದಲ್ಲಿ ಪ್ರಮುಖ ಮೂರು ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದರು.
ಜಡೇಜಾ ಮ್ಯಾಜಿಕ್
28ನೇ ಓವರ್‌ನಲ್ಲಿ ಸ್ಟೀವ್ ಸ್ಮಿತ್ ಅವರನ್ನು ಔಟ್ ಮಾಡಿದ ಜಡೇಜಾ, ಇದರ ನಂತರ, ಮುಂದಿನ ಓವರ್‌ನಲ್ಲಿ ಮಾರ್ನಸ್ ಲಬುಶೇನ್ ಮತ್ತು ಅಲೆಕ್ಸ್ ಕ್ಯಾರಿ ಅವರ ವಿಕೆಟ್ ಪಡೆದರು. ಮೊದಲು 28ನೇ ಓವರ್ನ ಮೊದಲ ಎಸೆತದಲ್ಲಿ ಸ್ಮಿತ್ರನ್ನು ಜಡೇಜಾ ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕ 30ನೇ ಓವರ್‌ನಲ್ಲಿ ಜಡೇಜಾ ಅವರ ಎರಡನೇ ಎಸೆತವನ್ನು ಸ್ವೀಪ್ ಆಡಲು ಪ್ರಯತ್ನಿಸಿದ ಲಬುಶೇನ್, ವಿಕೆಟ್ ಕೀಪರ್ ರಾಹುಲ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದೇ ಓವರ್ನ ಎರಡು ಎಸೆತಗಳ ಬಳಿಕ ಅಲೆಕ್ಸ್ ಕ್ಯಾರಿಯನ್ನು ಎಲ್ ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಜಡೇಜಾ ಕೇವಲ10 ಎಸೆತಗಳಲ್ಲಿ 3 ವಿಕೆಟ್ ಉರುಳಿಸಿದರು.
ಆಸೀಸ್ ಇನ್ನಿಂಗ್ಸ್ ಹೀಗಿತ್ತು
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ 199 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದೆ. ತಂಡದ ಪರ ಆರಂಭಿಕ ಡೇವಿಡ್ ವಾರ್ನರ್ 41 ರನ್ ಹಾಗೂ ಸ್ಟೀವ್ ಸ್ಮಿತ್ 46 ರನ್ ಬಾರಿಸಿದರೆ, ಲಬುಶೇನ್ 27 ರನ್ ಹಾಗೂ ಮಿಚೆಲ್ ಸ್ಟಾರ್ಕ್ 28 ರನ್ಗಳ ಕೊಡುಗೆ ನೀಡಿದರು. ಇವರ ಹೊರತಾಗಿ ಮ್ಯಾಕ್ಸ್‌ವೆಲ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ 17 ರನ್ ಸಿಡಿಸಿದರು. ಟೀಂ ಇಂಡಿಯಾ ಪರ ಜಡೇಜಾ 3 ವಿಕೆಟ್, ಬುಮ್ರಾ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಪಡೆದರು. ಉಳಿದಂತೆ ಸಿರಾಜ್, ಪಾಂಡ್ಯ, ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
