ICC World Cup 2023: ನೆದರ್ಲ್ಯಾಂಡ್ಸ್ ‘ಬಾಸ್’: ವಿಶ್ವಕಪ್ಗೆ ಎಂಟ್ರಿಕೊಟ್ಟ ಡಚ್ಚರು
Netherlands vs Scotland: ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಸ್ಕಾಟ್ಲ್ಯಾಂಡ್ ತಂಡವು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಇಲ್ಲಿ ನಿಗದಿತ ಓವರ್ಗಳಲ್ಲಿ ನೆದರ್ಲ್ಯಾಂಡ್ಸ್ಗೆ ಚೇಸ್ ಮಾಡಲು ಸಾಧ್ಯವಾಗದಿದ್ದರೆ, ಗೆದ್ದರೂ ಸೋತರೂ ಸ್ಕಾಟ್ಲ್ಯಾಂಡ್ ವಿಶ್ವಕಪ್ಗೆ ಅರ್ಹತೆ ಪಡೆಯುತ್ತಿತ್ತು.
ICC World Cup Qualifiers 2023: ಝಿಂಬಾಬ್ವೆಯ ಬುಲವಾಯೊದಲ್ಲಿ ನಡೆದ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ (Scotland) ವಿರುದ್ಧ ನೆದರ್ಲ್ಯಾಂಡ್ಸ್ (Netherlands)ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನೆದರ್ಲ್ಯಾಂಡ್ಸ್ವು ತಂಡವು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ತಂಡ ಕೂಡ ಕಾಣಿಸಿಕೊಳ್ಳಲಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಕಾಟ್ಲ್ಯಾಂಡ್ ಪರ ಬ್ರಾಂಡನ್ ಮೆಕ್ಮುಲ್ಲೆನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಕ್ಮುಲ್ಲೆನ್ ಆಕರ್ಷಕ ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಬಾರಿಸಿದರು.
ಪರಿಣಾಮ ಮುಲ್ಲೆನ್ ಬ್ಯಾಟ್ನಿಂದ 106 ಎಸೆತಗಳಲ್ಲಿ ಶತಕ ಮೂಡಿಬಂತು. ಆದರೆ ಸೆಂಚುರಿ ಬೆನ್ನಲ್ಲೇ 110 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 11 ಫೋರ್ನೊಂದಿಗೆ 106 ರನ್ಗಳಿಸಿ ಮೆಕ್ಮುಲ್ಲೆನ್ ಔಟಾದರು.
ಆ ಬಳಿಕ ಕ್ರೀಸ್ಗೆ ಆಗಮಿಸಿದ ನಾಯಕ ರಿಚಿ ಬೆರಿಂಗ್ಟನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 84 ಎಸೆತಗಳಲ್ಲಿ 64 ರನ್ ಬಾರಿಸುವ ಮೂಲಕ ಬೆರಿಂಗ್ಟನ್ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಥಾಮಸ್ ಮ್ಯಾಕಿಂತೋಷ್ 28 ಎಸೆತಗಳಲ್ಲಿ 38 ರನ್ ಬಾರಿಸುವ ಮೂಲಕ ಸ್ಕಾಟ್ಲ್ಯಾಂಡ್ ತಂಡದ ಸ್ಕೋರ್ ಅನ್ನು 9 ವಿಕೆಟ್ ನಷ್ಟಕ್ಕೆ 277 ಕ್ಕೆ ತಂದು ನಿಲ್ಲಿಸಿದರು.
ಆದರೆ ಸ್ಕಾಟ್ಲ್ಯಾಂಡ್ಗಿಂತ ಹೆಚ್ಚಿನ ರನ್ ರೇಟ್ ಪಡೆದು ವಿಶ್ವಕಪ್ಗೆ ಅರ್ಹತೆ ಪಡೆಯಲು ನೆದರ್ಲ್ಯಾಂಡ್ಸ್ ತಂಡವು ಕೇವಲ 44 ಓವರ್ಗಳಲ್ಲಿ ಈ ಗುರಿಯನ್ನು ಚೇಸ್ ಮಾಡಬೇಕಿತ್ತು. ಅದರಂತೆ 278 ರನ್ಗಳ ಟಾರ್ಗೆಟ್ನೊಂದಿಗೆ ಇನಿಂಗ್ಸ್ ಆರಂಭಿಸಿದ ನೆದರ್ಲ್ಯಾಂಡ್ಸ್ ತಂಡಕ್ಕೆ ವಿಕ್ರಮ್ಜಿತ್ ಸಿಂಗ್ (40) ಬಿರುಸಿನ ಆರಂಭ ಒದಗಿಸಿದ್ದರು. ಆದರೆ ಮತ್ತೊಂದು ಬದಿಯಲ್ಲಿ ಉತ್ತಮ ಸಾಥ್ ದೊರೆತಿರಲಿಲ್ಲ. ಪರಿಣಾಮ 23 ಓವರ್ಗಳಲ್ಲಿ ನೆದರ್ಲ್ಯಾಂಡ್ಸ್ ತಂಡವು 108 ರನ್ಗಳಿಸಿದರೂ 4 ವಿಕೆಟ್ ಕಳೆದುಕೊಂಡಿತು.
ನೆದರ್ಲ್ಯಾಂಡ್ಸ್ ಪರ ಬಾಸ್ ಈಸ್ ಬಾಸ್:
ಈ ಹಂತದಲ್ಲಿ ಕಣಕ್ಕಿಳಿದ ಬಾಸ್ ಡಿ ಲೀಡೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬಾಸ್ ಡಿ ಸ್ಕಾಟ್ಲ್ಯಾಂಡ್ ಬೌಲರ್ಗಳ ಬೆಂಡೆತ್ತಿದರು. ಈ ಮೂಲಕ ಕೇವಲ 83 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಹಂತದಲ್ಲಿ ಉತ್ತಮ ನೆಟ್ ರನ್ ರೇಟ್ನೊಂದಿಗೆ ವಿಶ್ವಕಪ್ಗೆ ಅರ್ಹತೆ ಪಡೆಯಲು ನೆದರ್ಲ್ಯಾಂಡ್ಸ್ ತಂಡವು 4 ಓವರ್ಗಳಲ್ಲಿ 45 ರನ್ಗಳಿಸಬೇಕಿತ್ತು.
41ನೇ ಓವರ್ನಲ್ಲಿ ಸಾಖಿಬ್ ಝುಲ್ಫಿಕರ್ ಹಾಗೂ ಬಾಸ್ ಡಿ ಲೀಡೆ ಜೊತೆಗೂಡಿ ಮಾರ್ಕ್ ವ್ಯಾಟ್ ಓವರ್ನಲ್ಲಿ 22 ರನ್ ಚಚ್ಚಿದರು. ಇನ್ನು 42ನೇ ಓವರ್ನಲ್ಲಿ ಬಾಸ್ ಡಿ 20 ರನ್ ಬಾರಿಸಿದರು. ಅಲ್ಲದೆ 42.5 ಓವರ್ಗಳಲ್ಲಿ ನೆದರ್ಲ್ಯಾಂಡ್ಸ್ ತಂಡವು 6 ವಿಕೆಟ್ ನಷ್ಟಕ್ಕೆ 278 ರನ್ಗಳ ಗುರಿ ತಲುಪಿತು. ಈ ಮೂಲಕ ಸ್ಕಾಟ್ಲ್ಯಾಂಡ್ ಅನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ನೆದರ್ಲ್ಯಾಂಡ್ಸ್ ತಂಡವು ವಿಶ್ವಕಪ್ಗೆ ಅರ್ಹತೆಗಿಟ್ಟಿಸಿಕೊಂಡಿತು.
ನೆದರ್ಲ್ಯಾಂಡ್ಸ್ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ 92 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ನೊಂದಿಗೆ 123 ರನ್ ಬಾರಿಸಿದ ಬಾಸ್ ಡಿ ಲೀಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್..!
ಸ್ಕಾಟ್ಲ್ಯಾಂಡ್ಗೆ ಬಿಗ್ ಶಾಕ್:
ಇದಕ್ಕೂ ಮುನ್ನ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಸ್ಕಾಟ್ಲ್ಯಾಂಡ್ ತಂಡವು ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಇಲ್ಲಿ ನಿಗದಿತ ಓವರ್ಗಳಲ್ಲಿ ನೆದರ್ಲ್ಯಾಂಡ್ಸ್ಗೆ ಚೇಸ್ ಮಾಡಲು ಸಾಧ್ಯವಾಗದಿದ್ದರೆ, ಗೆದ್ದರೂ ಸೋತರೂ ಸ್ಕಾಟ್ಲ್ಯಾಂಡ್ ವಿಶ್ವಕಪ್ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಕೇವಲ 44 ಓವರ್ಗಳಲ್ಲಿ ಬೃಹತ್ ಗುರಿ ಬೆನ್ನತ್ತಿ ನೆದರ್ಲ್ಯಾಂಡ್ಸ್ ತಂಡ ಸ್ಕಾಟ್ಲ್ಯಾಂಡ್ಗೆ ಶಾಕ್ ನೀಡಿರುವುದು ವಿಶೇಷ. ಈ ಮೂಲಕ 10ನೇ ತಂಡವಾಗಿ ಏಕದಿನ ವಿಶ್ವಕಪ್ಗೆ ಎಂಟ್ರಿ ಕೊಟ್ಟಿದೆ.
Published On - 7:45 pm, Thu, 6 July 23