Kar Vs Jk
ರಣಜಿ ಟೂರ್ನಿಯ 91ನೇ ಸೀಸನ್ನ ಫೈನಲ್ ಪಂದ್ಯ ಶುರುವಾಗಿದೆ. ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಬಾರಿಯ ಫೈನಲ್ನಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಜಮ್ಮು-ಕಾಶ್ಮೀರ ತಂಡದ ನಾಯಕ ಪರಸ್ ಡೋಗ್ರಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಮೊದಲ ಇನಿಂಗ್ಸ್ ಆಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಭೋಜನಾ ವಿರಾಮದ ವೇಳೆಗೆ 34 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ. ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿರುವ ಕಾಶ್ಮೀರಿ ಪಡೆ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿದೆ.
ಹೀಗೆ ಬೃಹತ್ ಮೊತ್ತ ಪೇರಿಸಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಯಾರಿಗೆ ಚಾಂಪಿಯನ್ ಪಟ್ಟ ಒಲಿಯಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ..
- ರಣಜಿ ಟ್ರೋಫಿ ಫೈನಲ್ ಪಂದ್ಯವು ಡ್ರಾ ಆದಲ್ಲಿ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
- ಒಂದು ವೇಳೆ ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಮೊದಲ ಇನಿಂಗ್ಸ್‌ನಲ್ಲಿ 400 ರನ್ ಕಲೆಹಾಕಿ, ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 399 ರನ್ಗಳಿಸಿ ಪಂದ್ಯ ಡ್ರಾ ಆದರೆ, ಮೊದಲ ಇನಿಂಗ್ಸ್‌ನಲ್ಲಿ 1 ರನ್ಗಳ ಮುನ್ನಡೆ ಹೊಂದಿರುವ ಜಮ್ಮು-ಕಾಶ್ಮೀರ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
- ಜಮ್ಮು-ಕಾಶ್ಮೀರ ತಂಡ ಮೊದಲ ಇನಿಂಗ್ಸ್‌ನಲ್ಲಿ 400 ರನ್ಗಳಿಸಿ, ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ 401 ರನ್ಗಳಿಸಿ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ, ಮೊದಲ ಇನಿಂಗ್ಸ್‌ನಲ್ಲಿ 1 ರನ್ಗಳ ಮುನ್ನಡೆ ಹೊಂದಿರುವ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ.
ರಣಜಿ ಟ್ರೋಫಿ ಫೈನಲ್ ಪಂದ್ಯದ ನಿಯಮಗಳು:
- ಮೊದಲ ಇನಿಂಗ್ಸ್ ಮುನ್ನಡೆ: ಐದು ದಿನಗಳ ಆಟದ ನಂತರವೂ ಪಂದ್ಯವು ಯಾವುದೇ ಸ್ಪಷ್ಟ ಫಲಿತಾಂಶ ನೀಡದೆ ಡ್ರಾನಲ್ಲಿ ಅಂತ್ಯಗೊಂಡರೆ, ಯಾವ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚಿನ ರನ್ ಗಳಿಸಿರುತ್ತದೆಯೋ ಆ ತಂಡಕ್ಕೆ ಚಾಂಪಿಯನ್ ಪಟ್ಟ ಸಿಗುತ್ತದೆ.
- ಮೊದಲ ಇನಿಂಗ್ಸ್ ಟೈ: ಒಂದು ವೇಳೆ ಮೊದಲ ಇನಿಂಗ್ಸ್ ಮೊತ್ತವೂ ಸಮನಾಗಿದ್ದರೆ ಅಥವಾ ಮೊದಲ ಇನಿಂಗ್ಸ್ ಪೂರ್ಣಗೊಳ್ಳದಿದ್ದರೆ, ಲೀಗ್ ಹಂತದಲ್ಲಿ ಹೆಚ್ಚಿನ ಅಂಕಗಳನ್ನು (Points) ಗಳಿಸಿದ ತಂಡವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ.
- ಹಿಂದಿನ ಇತಿಹಾಸ: ಕಳೆದ ವರ್ಷ (2024-25) ವಿದರ್ಭ ತಂಡವು ಕೇರಳ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ: ಟೀಮ್ ಇಂಡಿಯಾ ಕೇವಲ 11 ಓವರ್ಗಳಲ್ಲಿ ಪಂದ್ಯ ಮುಗಿಸಬೇಕು!
ಒಟ್ಟಾರೆಯಾಗಿ ಹೇಳುವುದಾದರೆ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನ ಪ್ರದರ್ಶನವು ಅತ್ಯಂತ ನಿರ್ಣಾಯಕವಾಗಿರುತ್ತದೆ. ಅದರಲ್ಲೂ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಉತ್ತಮ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ಬೃಹತ್ ಮೊತ್ತ ಪೇರಿಸಿದರೆ ಕರ್ನಾಟಕ ತಂಡ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಕರ್ನಾಟಕ ತಂಡವು ಜಮ್ಮು-ಕಾಶ್ಮೀರ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವುದು ಅತ್ಯಗತ್ಯ.