ILT20: ಪರದಾಡಿದ ಪೊಲಾರ್ಡ್, 1 ರನ್​ನಿಂದ ಸೋತ MI ಎಮಿರೇಟ್ಸ್

ILT20: ದುಬೈನಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಮೊದಲ ಪಂದ್ಯವೇ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ದುಬೈ ಕ್ಯಾಪಿಟಲ್ಸ್ ಹಾಗೂ ಎಂಐ ಎಮಿರೇಟ್ಸ್ ನಡುವಣ ಈ ಪಂದ್ಯವನ್ನು ಸಿಕಂದರ್ ರಾಝ ಪಡೆ ಕೇವಲ ಒಂದು ರನ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ದುಬೈ ಕ್ಯಾಪಿಟಲ್ಸ್ ತಂಡವು ಐಎಲ್​ಟಿ20 ಲೀಗ್​ನಲ್ಲಿ ಶುಭಾರಂಭ ಮಾಡಿದೆ.

ILT20: ಪರದಾಡಿದ ಪೊಲಾರ್ಡ್, 1 ರನ್​ನಿಂದ ಸೋತ MI ಎಮಿರೇಟ್ಸ್
Dc Vs Mie
Edited By:

Updated on: Jan 12, 2025 | 2:02 PM

ಇಂಟರ್​ನ್ಯಾಷನಲ್ ಲೀಗ್ ಸೀಸನ್-3ರ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ದುಬೈ ಕ್ಯಾಪಿಟಲ್ಸ್ ತಂಡ ಶುಭಾರಂಭ ಮಾಡಿದೆ. ದುಬೈನ ಡಿಐಸಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಮತ್ತು ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ನಿಕೋಲಸ್ ಪೂರನ್ ಬೌಲಿಂಗ್ ಆಯ್ದುಕೊಂಡರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಅಫ್ಘಾನ್ ವೇಗಿ ಫಝಲ್​ಹಕ್ ಫಾರೂಖಿ 4 ಓವರ್​​ಗಳಲ್ಲಿ ಕೇವಲ 16 ರನ್ ನೀಡಿ 5 ವಿಕೆಟ್ ಕಬಳಿಸಿದರು. ಅತ್ತ ದುಬೈ ಕ್ಯಾಪಿಟಲ್ಸ್ ಬ್ರೆಂಡನ್ ಮೆಕ್​ಮುಲ್ಲನ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​​ಗಳೊಂದಿಗೆ 52 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ದುಬೈ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಕಲೆಹಾಕಿತು.

ಫಝಲ್​ಹಕ್ ಫಾರೂಖಿ ಬೌಲಿಂಗ್:

134 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮೊಹಮ್ಮದ್ ವಸೀಮ್ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಬಂದ ಆ್ಯಂಡ್ರೆ ಫ್ಲೆಚರ್ (0) ಕೂಡ ಸೊನ್ನೆ ಸುತ್ತಿದರು. ಇನ್ನು ಕುಸಾಲ್ ಪೆರೇರಾ ಕೇವಲ 12 ರನ್​​ಗಳಿಸಲಷ್ಟೇ ಶಕ್ತರಾದರು.

ಈ ಹಂತದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ 40 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​​ಗಳೊಂದಿಗೆ 61 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪರಿಣಾಮ ಕೊನೆಯ ಓವರ್​​ನಲ್ಲಿ ಎಂಐ ಎಮಿರೇಟ್ಸ್ ತಂಡಕ್ಕೆ ಗೆಲ್ಲಲು ಕೇವಲ 13 ರನ್​ಗಳ ಅವಶ್ಯಕತೆಯಿತ್ತು.

ಪರದಾಡಿದ ಪೊಲಾರ್ಡ್​:

ಅಂತಿಮ ಓವರ್​ನಲ್ಲಿ ಸ್ಟ್ರೈಕ್​ನಲ್ಲಿದದ್ದು ಅನುಭವಿ ಆಟಗಾರ ಕೀರನ್ ಪೊಲಾರ್ಡ್. ಆದರೆ 20 ವರ್ಷದ ಫರ್ಹಾನ್ ಖಾನ್ ಎಸೆತಗಳಲ್ಲಿ ಬಿಗ್ ಶಾಟ್ ಬಾರಿಸಲು ಪೊಲಾರ್ಡ್ ಪರದಾಡಿದರು.

20 ಓವರ್​ನ ಮೊದಲ ಎಸೆತದಲ್ಲಿ ಪೊಲಾರ್ಡ್ ಯಾವುದೇ ರನ್​ಗಳಿಸಲಿಲ್ಲ. 2ನೇ ಎಸೆತವು ವೈಡ್ ಆಯಿತು. ಮರು ಎಸೆತದಲ್ಲಿ ಯಾವುದೇ ರನ್ ಇಲ್ಲ. ಮೂರನೇ ಎಸೆತದಲ್ಲಿ ಫೋರ್ ಬಾರಿಸುವಲ್ಲಿ ಪೊಲಾರ್ಡ್ ಯಶಸ್ವಿಯಾದರು.

ಆದರೆ ನಾಲ್ಕನೇ ಎಸೆತದಲ್ಲಿ ಫರ್ಹಾನ್ ಯಾವುದೇ ರನ್ ನೀಡಲಿಲ್ಲ. ಐದನೇ ಎಸೆತದಲ್ಲಿ ಪೊಲಾರ್ಡ್ 2 ರನ್ ಕಲೆಹಾಕಿದರು. ಕೊನೆಯ ಎಸೆತದಲ್ಲಿ ಕೀರನ್ ಪೊಲಾರ್ಡ್ ಬ್ಯಾಟ್​ನಿಂದ ಫೋರ್ ಬಂದರೂ ಗೆಲುವಿನ ಗುರಿ ಮುಟ್ಟಲಾಗಲಿಲ್ಲ.

ಕೀರನ್ ಪೊಲಾರ್ಡ್ ಬ್ಯಾಟಿಂಗ್:

ಪರಿಣಾಮ ಎಂಐ ಎಮಿರೇಟ್ಸ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್​ಗಳಿಸಿ ಒಂದು ರನ್​ನಿಂದ ಸೋಲೊಪ್ಪಿಕೊಂಡಿತು. ಅತ್ತ ಉದ್ಘಾಟನಾ ಪಂದ್ಯದಲ್ಲಿ ಒಂದು ರನ್​​ಗಳ ರೋಚಕ ಜಯ ಸಾಧಿಸಿ ದುಬೈ ಕ್ಯಾಪಿಟಲ್ಸ್ ತಂಡವು ಅಂಕ ಪಟ್ಟಿಯಲ್ಲಿ ಖಾತೆ ತೆರೆದಿದೆ.

ದುಬೈ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಆ್ಯಡಂ ರೋಸಿಂಗ್‌ಟನ್ , ಬ್ರಾಂಡನ್ ಮೆಕ್‌ಮುಲ್ಲೆನ್ , ಶಾಯ್ ಹೋಪ್ (ವಿಕೆಟ್ ಕೀಪರ್) , ರೋವ್‌ಮನ್ ಪೊವೆಲ್ , ಗುಲ್ಬದಿನ್ ನೈಬ್ , ಸಿಕಂದರ್ ರಾಝ (ನಾಯಕ) , ದಸುನ್ ಶಾನಕ , ಫರ್ಹಾನ್ ಖಾನ್ , ಹೈದರ್ ಅಲಿ , ಓಬೆಡ್ ಮೆಕಾಯ್ , ಓಲಿ ಸ್ಟೋನ್.

ಇದನ್ನೂ ಓದಿ: ಭಾರತ vs ಪಾಕಿಸ್ತಾನ್ ಪಂದ್ಯಕ್ಕೆ ಜಸ್​ಪ್ರೀತ್ ಬುಮ್ರಾ ಅಲಭ್ಯ

ಎಂಐ ಎಮಿರೇಟ್ಸ್ ಪ್ಲೇಯಿಂಗ್ 11: ಮುಹಮ್ಮದ್ ವಸೀಮ್ , ಟಾಮ್ ಬ್ಯಾಂಟನ್ , ಆಂಡ್ರೆ ಫ್ಲೆಚರ್ , ನಿಕೋಲಸ್ ಪೂರನ್ (ನಾಯಕ) , ಕೀರನ್ ಪೊಲಾರ್ಡ್ , ಅಕೇಲ್ ಹೊಸೈನ್ , ಅಲ್ಜಾರಿ ಜೋಸೆಫ್ , ಅಲ್ಲಾ ಘಜನ್ಫರ್, ವಕಾರ್ ಸಲಾಮ್ಖೈಲ್ , ಫಝಲ್​ಹಕ್ ಫಾರೂಖಿ , ಜಹೂರ್ ಖಾನ್.