ವಿರಾಟ್ ಕೊಹ್ಲಿ ನಾಯಕತ್ವಕ್ಕೆ ನಾನೇ ದೊಡ್ಡ ಅಭಿಮಾನಿ: ರೋಹಿತ್ ಶರ್ಮಾ

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಂಬ ಎರಡು ಮಹಾಶಕ್ತಿಗಳ ನಡುವಿನ ಬಾಂಧವ್ಯ ಯಾವಾಗಲೂ ವಿಶೇಷ. ಮೈದಾನದಲ್ಲಿ ಇವರಿಬ್ಬರ ರನ್‌ಗಳ ಜುಗಲ್‌ಬಂದಿ ಜಗತ್ಪ್ರಸಿದ್ಧವಾದರೆ, ಮೈದಾನದ ಹೊರಗೆ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಗೌರವಿಸುವ ಗುಣ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ.

ವಿರಾಟ್ ಕೊಹ್ಲಿ ನಾಯಕತ್ವಕ್ಕೆ ನಾನೇ ದೊಡ್ಡ ಅಭಿಮಾನಿ: ರೋಹಿತ್ ಶರ್ಮಾ
Virat Kohli - Rohit Sharma
Image Credit source: GettyImages

Updated on: Sep 29, 2026 | 11:14 AM

ಭಾರತೀಯ ಕ್ರಿಕೆಟ್‌ನ ಧ್ರುವತಾರೆಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಒಟ್ಟಿಗೆ ಬ್ಯಾಟ್ ಬೀಸಿದರೆ ಎದುರಾಳಿ ಬೌಲರ್‌ಗಳಿಗೆ ನಡುಕ ಗ್ಯಾರಂಟಿ. ಆದರೆ, ಇವರಿಬ್ಬರ ನಡುವೆ ಕೇವಲ ರನ್‌ಗಳ ಜುಗಲ್‌ಬಂದಿ ಮಾತ್ರವಲ್ಲ, ಒಬ್ಬರ ಸಾಧನೆಯನ್ನು ಮತ್ತೊಬ್ಬರು ಕೊಂಡಾಡುವ ಅಪೂರ್ವ ಪರಸ್ಪರ ಗೌರವವೂ ಇದೆ ಎಂಬುದಕ್ಕೆ ಇತ್ತೀಚಿನ ‘ಜಿಯೋಸ್ಟಾರ್’ ಸಂದರ್ಶನವೇ ಸಾಕ್ಷಿ!

ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ,  ವಿರಾಟ್ ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ದಿನಗಳನ್ನು ಮುಕ್ತಕಂಠದಿಂದ ಶ್ಲಾಘಿಸುವ ಮೂಲಕ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೊಹ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದ ರೀತಿ ಅದ್ಭುತವಾಗಿತ್ತು ಎಂದಿದ್ದಾರೆ.

ನಾನೇ ದೊಡ್ಡ ಅಭಿಮಾನಿ!

ಸಂದರ್ಶನದಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, “ವಿರಾಟ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗ ಅವರು ಮಾಡಿದ ಸಾಧನೆ ನಿಜಕ್ಕೂ ಅದ್ಭುತ. ನಾನು ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ದೊಡ್ಡ ಅಭಿಮಾನಿ” ಎಂದು ಹೇಳಿಕೊಂಡಿದ್ದಾರೆ.

ಕೊಹ್ಲಿ ತಂಡದಲ್ಲಿ ತಂದ ಆಕ್ರಮಣಕಾರಿ ಶೈಲಿ, ಫಿಟ್​ನೆಸ್ ಕ್ರಾಂತಿ ಮತ್ತು ವಿದೇಶಿ ಮಣ್ಣಿನಲ್ಲಿ ಗೆಲ್ಲಲೇಬೇಕೆಂಬ ಹಠ ಭಾರತೀಯ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿತು ಎಂಬುದನ್ನು ರೋಹಿತ್ ನೆನಪಿಸಿಕೊಂಡಿದ್ದಾರೆ.

ಬರೀ ನಾಯಕತ್ವ ಮಾತ್ರವಲ್ಲದೆ, ಇಬ್ಬರೂ ಆಟಗಾರರಾಗಿ ತಮ್ಮ ಬ್ಯಾಟಿಂಗ್ ಅನ್ನು ಹೇಗೆ ಸುಧಾರಿಸಿಕೊಳ್ಳಬಹುದು ಎಂಬುದರ ಕುರಿತು ನಿರಂತರವಾಗಿ ಚರ್ಚಿಸುತ್ತಾರೆ ಎಂದು ರೋಹಿತ್ ಬಹಿರಂಗಪಡಿಸಿದ್ದಾರೆ.

“ನಮ್ಮಿಬ್ಬರ ವೈಯಕ್ತಿಕ ಆಟವನ್ನು ಇನ್ನಷ್ಟು ಉತ್ತಮಗೊಳಿಸುವುದು ಹೇಗೆ ಎಂಬ ಬಗ್ಗೆ ನಮ್ಮ ನಡುವೆ ಸಾಕಷ್ಟು ಸುದೀರ್ಘ ಚರ್ಚೆಗಳು ನಡೆಯುತ್ತವೆ. ಒಬ್ಬರ ಬ್ಯಾಟಿಂಗ್‌ನಲ್ಲಿ ಏನಾದರೂ ತಾಂತ್ರಿಕ ಲೋಪದೋಷಗಳು ಕಂಡುಬಂದರೆ, ಅದನ್ನು ಮುಕ್ತವಾಗಿ ಹಂಚಿಕೊಂಡು ಸರಿಪಡಿಸಿಕೊಳ್ಳುವ ಅಪೂರ್ವ ಒಡನಾಟ ನಮ್ಮಲ್ಲಿದೆ” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದ ದಾಖಲೆಗಳು (2014–2022):

ರೋಹಿತ್ ಶರ್ಮಾ ಅವರ ಶ್ಲಾಘನೆಗೆ ತಕ್ಕಂತೆ, ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ಒಟ್ಟು ಪಂದ್ಯಗಳು: 68 ಟೆಸ್ಟ್ ಪಂದ್ಯಗಳು
  • ಐತಿಹಾಸಿಕ ಗೆಲುವುಗಳು: 40 ಪಂದ್ಯಗಳಲ್ಲಿ ಜಯ (ಕೇವಲ 17 ಸೋಲು, 11 ಡ್ರಾ)
  • ಗೆಲುವಿನ ಶೇಕಡಾವಾರು: 58.82%
  • ತವರಿನಲ್ಲಿ ಅಜೇಯ ದಾಖಲೆ: ಭಾರತದಲ್ಲಿ ಮುನ್ನಡೆಸಿದ 11 ಟೆಸ್ಟ್ ಸರಣಿಗಳ ಪೈಕಿ 11 ರಲ್ಲೂ ಸರಣಿ ಜಯ!
  • ವಿದೇಶಿ ಮಣ್ಣಿನಲ್ಲಿ ವೀರಾವೇಶ: ವಿದೇಶಗಳಲ್ಲಿ 16 ಟೆಸ್ಟ್ ಗೆಲುವುಗಳನ್ನು ತಂದುಕೊಟ್ಟ ಏಕೈಕ ಭಾರತೀಯ ನಾಯಕ ವಿರಾಟ್ ಕೊಹ್ಲಿ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2026: ಸೆಮಿಫೈನಲ್ಸ್ ವೇಳಾಪಟ್ಟಿ ಪ್ರಕಟ

ಒಟ್ಟಾರೆಯಾಗಿ ಹೇಳುವುದಾದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೇವಲ ಭಾರತೀಯ ಕ್ರಿಕೆಟ್‌ನ ಕೇವಲ ಆಟಗಾರರಲ್ಲ. ಅವರು ಟೀಮ್ ಇಂಡಿಯಾವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿರುವ ಜಂಟಿ ಶಕ್ತಿಗಳು. ಕೊಹ್ಲಿ ಬಿತ್ತಿದ ಆಕ್ರಮಣಕಾರಿ ಆಟದ ತತ್ವವನ್ನು ರೋಹಿತ್ ಶರ್ಮಾ ಮುಂದುವರೆಸಿದ್ದರು. ಇದೀಗ ಯುವ ನಾಯಕ ಶುಭ್​ಮನ್ ಗಿಲ್ ಕೂಡ ಅದೇ ಹಾದಿಯಲ್ಲಿದ್ದಾರೆ. ಸದ್ಯ ನಾಯಕತ್ವದ ಪಟ್ಟ ಯಾರದ್ದೇ ಇರಲಿ, ಇಬ್ಬರ ನಡುವಿನ ಪರಸ್ಪರ ಗೌರವ ಮತ್ತು ದೇಶಕ್ಕಾಗಿ ಗೆಲ್ಲಬೇಕೆಂಬ ಒಂದೇ ದೃಷ್ಟಿಕೋನ ಭಾರತೀಯ ಕ್ರಿಕೆಟ್‌ನ ಸುವರ್ಣ ಯುಗವನ್ನು ಮುಂದುವರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us