ಹೈಡ್ರಾಮಾ… ಹರ್ಷಿತ್​ ರಾಣಾರನ್ನು ಗುಂಪಾಗಿ ಗುರಿಯಾಗಿಸಿದ ಪಾಕ್ ಆಟಗಾರರು!

ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯವೆಂದರೆ ಅಲ್ಲಿ ಬ್ಯಾಟ್ ಮತ್ತು ಬಾಲ್‌ಗಿಂತ ಆಟಗಾರರ ನಡುವಿನ ಕಾವೇರಿದ ಮಾತಿನ ಚಕಮಕಿಯೇ ಹೆಚ್ಚು ಸದ್ದು ಮಾಡುತ್ತದೆ. ಇದೀಗ 'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಭಾರತ 'ಎ' ಮತ್ತು ಪಾಕಿಸ್ತಾನ 'ಎ' ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲೂ ಅಂತಹದ್ದೇ ಒಂದು ಹೈಡ್ರಾಮಾ ನಡೆದಿದೆ.

ಹೈಡ್ರಾಮಾ... ಹರ್ಷಿತ್​ ರಾಣಾರನ್ನು ಗುಂಪಾಗಿ ಗುರಿಯಾಗಿಸಿದ ಪಾಕ್ ಆಟಗಾರರು!
Harshit Rana - Pakistan
Image Credit source: Sonyliv

Updated on: Nov 23, 2026 | 7:58 AM

ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಲ್ಲಿ ರೋಚಕತೆಯ ಜೊತೆಗೆ ಆಟಗಾರರ ನಡುವಿನ ಕಾವೇರಿದ ಮಾತಿನ ಚಕಮಕಿಯೂ ಸಾಮಾನ್ಯ. ನವೆಂಬರ್ 22, 2026 ರಂದು ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026’ ಟೂರ್ನಿಯ ‘ಬಿ’ ಗುಂಪಿನ ಭಾರತ ‘ಎ’ ಮತ್ತು ಪಾಕಿಸ್ತಾನ್ ‘ಎ’ ನಡುವಿನ ಪಂದ್ಯವು ಇಂತಹದ್ದೇ ಒಂದು ಹೈ-ವೋಲ್ಟೇಜ್ ವಾಗ್ವಾದಕ್ಕೆ ಸಾಕ್ಷಿಯಾಯಿತು.

ಈ ಪಂದ್ಯದಲ್ಲಿ ಭಾರತ ‘ಎ’ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಪಾಕಿಸ್ತಾನ ‘ಎ’ ತಂಡದ ಸ್ಪಿನ್ನರ್ ಸುಫಿಯಾನ್ ಮುಕೀಮ್ ಅತ್ಯಂತ ಆಕ್ರೋಶಭರಿತವಾಗಿ ಪೆವಿಲಿಯನ್‌ಗೆ ಕಳುಹಿಸಿಕೊಟ್ಟ (ಸೆಂಡ್-ಆಫ್) ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Loading...

ಮೊದಲ ಇನ್ನಿಂಗ್ಸ್‌ನಲ್ಲೇ ವಾಕ್ಸಮರ:

ಪಂದ್ಯದ ಆರಂಭದಿಂದಲೂ ಇತ್ತಂಡಗಳ ಆಟಗಾರರ ನಡುವೆ ಬಿಸಿ ವಾತಾವರಣ ನಿರ್ಮಾಣವಾಗಿತ್ತು. ಟಾಸ್ ವೇಳೆಯೂ ಇತ್ತಂಡಗಳ ನಾಯಕರು ಸಾಂಪ್ರದಾಯಿಕ ಹಸ್ತಲಾಘವ ಮಾಡಿರಲಿಲ್ಲ.

ಇತ್ತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ‘ಎ’ ತಂಡಕ್ಕೆ ಆರಂಭಿಕರಾದ ಶಾಮಿಲ್ ಹುಸೇನ್ ಮತ್ತು ಮಾಝ್ ಸದಾಕತ್ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಬೌಲಿಂಗ್ ಮಾಡುತ್ತಿದ್ದ ಹರ್ಷಿತ್ ರಾಣಾ ಅವರ ಓವರ್‌ನಲ್ಲಿ ಕೆಲವು ಬೌಂಡರಿಗಳು ಹರಿದುಬಂದವು.

ಇದರಿಂದ ಕೆರಳಿದ ರಾಣಾ, ಪಾಕಿಸ್ತಾನದ ಆರಂಭಿಕ ಬ್ಯಾಟರ್‌ಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಅಲ್ಲದೆ, ಆಯುಷ್ ಬದೋನಿ ಬೌಲಿಂಗ್‌ನಲ್ಲಿ ಶಾಮಿಲ್ ಹುಸೇನ್ (33) ಅವರ ಕ್ಯಾಚ್ ಹಿಡಿದ ರಾಣಾ, ಬ್ಯಾಟರ್‌ಗೆ ಪೆವಿಲಿಯನ್‌ನತ್ತ ನಡೆಯುವಂತೆ ಆಕ್ರಮಣಕಾರಿ ಸನ್ನೆ ಮಾಡಿದ್ದರು. ನಂತರ ವಿಕೆಟ್ ಕೀಪರ್ ರೋಹೈಲ್ ನಝೀರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದಾಗಲೂ ರಾಣಾ ತೀವ್ರ ಆಕ್ರೋಶದಿಂದ ಸಂಭ್ರಮಿಸಿದ್ದರು.

ತಿರುಗೇಟು ನೀಡಿದ ಪಾಕ್ ಆಟಗಾರರು:

ಪಾಕಿಸ್ತಾನ ನೀಡಿದ್ದ 314 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ, 45ನೇ ಓವರ್‌ನಲ್ಲಿ ಹರ್ಷಿತ್ ರಾಣಾ ಬ್ಯಾಟಿಂಗ್‌ಗೆ ಬಂದರು.

ಈ ವೇಳೆ ಮೊಹಮ್ಮದ್ ಇಮ್ರಾನ್ ರಾಂಧವಾ ಎಸೆದ ಫುಲ್-ಟಾಸ್ ಎಸೆತಕ್ಕೆ ಸಿಕ್ಸರ್​ ಬಾರಿಸಲು ಯತ್ನಿಸಿದ ರಾಣಾ, ಡೀಪ್ ಸ್ಕ್ವೇರ್-ಲೆಗ್‌ನಲ್ಲಿದ್ದ ಫರ್ಹಾನ್ ಯೂಸುಫ್ ಅವರಿಗೆ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದರು.

ಮೊದಲ ಇನ್ನಿಂಗ್ಸ್‌ನಲ್ಲಿ ರಾಣಾ ತೋರಿದ್ದ ಆಕ್ರೋಶಕ್ಕೆ ಕಾದು ಕುಳಿತಿದ್ದ ಪಾಕ್ ಆಟಗಾರರು, ರಾಣಾ ಔಟಾಗುತ್ತಿದ್ದಂತೆಯೇ ಮುಗಿಬಿದ್ದರು. ವಿಶೇಷವಾಗಿ ಸ್ಪಿನ್ನರ್ ಸುಫಿಯಾನ್ ಮುಕೀಮ್, ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ರಾಣಾ ಬಳಿ ಬಂದು ಅತ್ಯಂತ ಆಕ್ರಮಣಕಾರಿಯಾಗಿ ಏನನ್ನೋ ಹೇಳುತ್ತಾ ‘ಸೆಂಡ್-ಆಫ್’ ನೀಡಿದರು.

ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುತ್ತಿದ್ದಂತೆ, ಪಾಕಿಸ್ತಾನದ ಸಹ ಆಟಗಾರರೊಬ್ಬರು ಮಧ್ಯಪ್ರವೇಶಿಸಿ ಸುಫಿಯಾನ್ ಮುಕೀಮ್ ಅವರನ್ನು ಹಿಂದಕ್ಕೆ ಎಳೆದು ಹಿಡಿದುಕೊಂಡರು. ತಕ್ಷಣವೇ ಮೈದಾನದಲ್ಲಿದ್ದ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಭಾರತ ‘ಎ’ ತಂಡದ ನಾಯಕ ತಿಲಕ್ ವರ್ಮಾ ಕೂಡ ಪಾಕ್ ಆಟಗಾರರೊಂದಿಗೆ ಮಾತನಾಡಿ ವಾತಾವರಣವನ್ನು ಶಾಂತಗೊಳಿಸಿದರು. ಇದೀಗ ಈ ವಾಕ್ಸಮರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೆದ್ದು ಬೀಗಿದ ಪಾಕ್ ಪಡೆ:

ಈ ಕಾವೇರಿದ ವಾತಾವರಣದ ನಡುವೆ ನಡೆದ ಈ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ‘ಎ’ ತಂಡವು 48 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಪಾಕಿಸ್ತಾನ ‘ಎ’: 49.2 ಓವರ್‌ಗಳಲ್ಲಿ 313 ರನ್‌ಗಳಿಗೆ ಆಲೌಟ್ (ಹಸನ್ ನವಾಝ್ 79, ಮಾಝ್ ಸದಾಕತ್ 59, ಫರ್ಹಾನ್ ಯೂಸುಫ್ 56; ವಿಪ್ರಾಜ್ ನಿಗಮ್ 2/46, ಸೂರ್ಯಾಂಶ್ ಶೆಡ್ಗೆ 2/45).

ಭಾರತ ‘ಎ’: 49.1 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್. ನಾಯಕ ತಿಲಕ್ ವರ್ಮಾ (100 ರನ್) ಏಕಾಂಗಿ ಶತಕದ ಹೋರಾಟ ನಡೆಸಿದರೆ, ಅಭಿಷೇಕ್ ಶರ್ಮಾ (70 ರನ್) ಮತ್ತು ಶಹಬಾಝ್ ಅಹ್ಮದ್ (56 ರನ್) ಉತ್ತಮ ಸಾಥ್ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ಭಾರತ ಸೋಲೊಪ್ಪಿಕೊಳ್ಳಬೇಕಾಯಿತು.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us