
ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಇಂದಿನಿಂದ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಮೊದಲ ದಿನದಾಟದಂತ್ಯಕ್ಕೆ ಆತಿಥೇಯ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ 8 ವಿಕೆಟ್‌ಗಳನ್ನು ಕಳೆದುಕೊಂಡು 363 ರನ್ ಕಲೆಹಾಕಿದೆ. ಕೇಸರ ನುವಂತಾ 9 ರನ್ ಮತ್ತು ದಿಲುಮ್ ಸುದಿರಾ 1 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇತ್ತ ಭಾರತದ ಪರ ತ್ರಿವಳಿ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಹಾಗೂ ಮಾನವ್ ಸುತಾರ್ ತಲಾ 2 ವಿಕೆಟ್‌ಗಳನ್ನು ಪಡೆದರೆ, ವೇಗಿ ಗುರ್ನೂರ್ ಬ್ರಾರ್ 1 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡದ ಬ್ಯಾಟಿಂಗ್ ವಿಭಾಗದ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ತಂಡದ ಆರು ಬ್ಯಾಟರ್ಗಳು ಉತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ಯಾರಿಗೂ ಶತಕದ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ತಂಡದ ಪರ ಮೂವರು ಬ್ಯಾಟರ್ಗಳು ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಆರಂಭಿಕ ಆಟಗಾರ ನಿಶಾನ್ ಫೆರ್ನಾಂಡೊ 65 ಎಸೆತಗಳಲ್ಲಿ 66 ರನ್‌ಗಳ ಚುರುಕಾದ ಇನ್ನಿಂಗ್ಸ್ ಆಡಿವುದರ ಜೊತೆಗೆ ಮತ್ತೊಬ್ಬ ಆರಂಭಿಕ ರವಿಂದು ರಸಂತ ಅವರೊಂದಿಗೆ 110 ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡರು. ರಸಂತ 143 ಎಸೆತಗಳಲ್ಲಿ 71 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಸೋನಲ್ ದಿನುಷಾ 72 ಎಸೆತಗಳಲ್ಲಿ 52 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಹಾಗೆಯೇ ದಿನುಷಾ, ರಮೇಶ್ ಮೆಂಡಿಸ್ (32) ಅವರೊಂದಿಗೆ ಏಳನೇ ವಿಕೆಟ್‌ಗೆ 64 ರನ್ ಸೇರಿಸಿದರು.
ಇತ್ತ ಭಾರತೀಯ ಬೌಲರ್‌ಗಳು ಆರಂಭದಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಹೋರಾಡಿದರು. ಆದರೆ ಸ್ಪಿನ್ನರ್‌ಗಳು ದಿನದ ಕೊನೆಯ ಸೆಷನ್ನಲ್ಲಿ ಮೇಲುಗೈ ಸಾಧಿಸಿದರು. ಕುಲ್ದೀಪ್ ಯಾದವ್ 18 ಓವರ್‌ಗಳಲ್ಲಿ 76 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರೆ, ಎಡಗೈ ಸ್ಪಿನ್ನರ್ ಮಾನವ್ ಸುತಾರ್ 13 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಅನುಭವಿ ರವೀಂದ್ರ ಜಡೇಜಾ ಕೂಡ 15 ಓವರ್‌ಗಳಲ್ಲಿ 64 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.
ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರೆ ವೇಗದ ಬೌಲರ್‌ಗಳು ಯಶಸ್ವಿಯಾಗಲಿಲ್ಲ. ಸುಮಾರು ಐದು ವಾರಗಳ ನಂತರ ರೆಡ್-ಬಾಲ್ ಕ್ರಿಕೆಟ್‌ಗೆ ಮರಳಿರುವ ಭಾರತೀಯ ವೇಗದ ಬೌಲರ್‌ಗಳಿಗೆ ವಿಕೆಟ್ ಸಿಗಲಿಲ್ಲ. ಮೊಹಮ್ಮದ್ ಸಿರಾಜ್ 13 ಓವರ್‌ಗಳಲ್ಲಿ 44 ರನ್‌ಗಳನ್ನು ಬಿಟ್ಟುಕೊಟ್ಟರೆ, ಪ್ರಸಿದ್ಧ್ ಕೃಷ್ಣ ಎಂಟು ಓವರ್‌ಗಳಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟರು, ಆದರೆ ಯಾರೂ ವಿಕೆಟ್ ಪಡೆಯಲಿಲ್ಲ. ಗೊರ್ನೂರ್ ಬ್ರಾರ್ 12 ಓವರ್‌ಗಳಲ್ಲಿ 49 ರನ್ ನೀಡಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
Published On - 6:11 pm, Fri, 7 August 26