
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ (Border- Gavaskar Trophy) ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯ ಈ ಹಿಂದಿನ ಟೆಸ್ಟ್ಗಿಂತ ಭಿನ್ನವಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟರ್ಗಳು ಸಂಪೂರ್ಣ ವೈಫಲ್ಯ ಅನುಭವಿಸುತ್ತಿದ್ದರು, ಸ್ಪಿನ್ನರ್ಗಳು ಮಾರಕವಾಗಿ ಪರಿಣಮಿಸಿದ್ದರು. ಆದರೆ, ಈ ಟೆಸ್ಟ್ನಲ್ಲಿ ಬ್ಯಾಟರ್ಗಳು ರನ್ ಕಲೆಹಾಕುತ್ತಿದ್ದಾರೆ. ಸ್ಪಿನ್ನರ್ಗಳ ಜಾದು ನಡೆಯುತ್ತಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ದಿನವೇ ಯಶಸ್ಸು ಸಾಧಿಸಿದೆ. ಉಸ್ಮಾನ್ ಖವಾಜಾ (Usman Khawaja) ಆಕರ್ಷಕ ಶತಕ ಸಿಡಿಸಿ ಮಿಂಚಿದರೆ, ಕ್ಯಾಮ್ರೋನ್ ಗ್ರೀನ್ ಅರ್ಧಶತಕದ ಅಂಚಿನಲ್ಲಿದ್ದು ಇಂದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟೀಮ್ ಇಂಡಿಯಾ ಬೌಲರ್ಗಳು ಆಸೀಸ್ ವಿಕೆಟ್ ಕೀಳಲು ನಾನಾ ಪ್ರಯತ್ನ ನಡೆಸಿದರೂ ಸಂಪೂರ್ಣ ಯಶಸ್ಸು ಸಿಗಲಿಲ್ಲ. ಸ್ಪಿನ್ನರ್ಗಳಿಂದ ಕೂಡ ಹೆಚ್ಚಿನ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಖಾತೆಗೆ ಒಂದು ವಿಕೆಟ್ ಸೇರಿತಷ್ಟೆ. ಮೊದಲ ದಿನವಾಟದ ಅಂತ್ಯಕ್ಕೆ ಕಾಂಗರೂ ಪಡೆ 4 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿದೆ. ಇಂದು ದ್ವಿತೀಯ ದಿನದಾಟ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದೆ. ಪಿಚ್ ಯಾವರೀತಿ ವರ್ತಿಸುತ್ತದೆ ಎಂಬುದನ್ನು ಗಮನಿಸಿ ಬೌಲರ್ಗಳ ಆಯ್ಕೆ ಮಾಡುವ ನಿರ್ಧಾರ ರೋಹಿತ್ ತಲೆಮೇಲಿದೆ.
IND vs AUS 4th Test: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಗೆದ್ದರೆ ಲಾಭವೇನು? ಸೋತರೆ ನಷ್ಟವೇನು?
ಆಸೀಸ್ ಪರ ಓಪನರ್ಗಳಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಮತ್ತು ಉಸ್ಮಾನ್ ಖವಾಜಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ 61 ರನ್‌ಗಳ ಕಾಣಿಕೆ ನೀಡಿತು. ಆಕ್ರಮಣಕಾರಿ ಆಟವಾಡಿದ ಹೆಡ್ (32) ಅವರನ್ನು ಅಶ್ವಿನ್ ವಾಪಸ್ ಪೆವಿಲಿಯನ್ ಕಳುಹಿಸುವಲ್ಲಿ ಸಫಲರಾದರು. ಹೆಡ್ ಔಟಾದ ಬೆನ್ನೆಲ್ಲೇ 3 ರನ್ ಗಳಿಸಿದ್ದ ಮಾರ್ನಸ್ ಲಾಬುಶೇನ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಭೋಜನ ವಿರಾಮದ ವೇಳೆಗೆ ಆಸೀಸ್ ಎರಡು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು. ಎರಡನೇ ಸೆಷನ್ನಲ್ಲಿ ಆಸೀಸ್ ಬ್ಯಾಟರ್ಗಳು ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು.
ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಸ್ಟೀವ್ ಸ್ಮಿತ್ (38) ಅವರನ್ನು ಚಹಾ ವಿರಾಮದ ನಂತರ ರವೀಂದ್ರ ಜಡೇಜಾ ಔಟ್ ಮಾಡಿದರು. ಇದು ಉಸ್ಮಾನ್ ಅವರೊಂದಿಗೆ ಮೂರನೇ ವಿಕೆಟ್‌ಗೆ ಕಲೆ ಹಾಕಿದ್ದ 79 ರನ್‌ಗಳ ಜೊತೆಯಾಟವನ್ನು ಅಂತ್ಯಗೊಳಿಸಿತು. ಸ್ಟೀವ್ ಸ್ಮಿತ್ ಔಟಾದ ಬಳಿಕ ಕ್ರೀಸ್ಗೆ ಬಂದ ಪೀಟರ್ ಹ್ಯಾಂಡ್ಸ್ ಕಾಂಬ್ 17 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ಕ್ಯಾಮ್ರೋನ್ ಗ್ರೀನ್ ಆಕ್ರಮಣಕಾರಿ ಆಟವಾಡಿದರು. ದಿನದಾಟದ ಅಂತ್ಯವಾಗುವ ವೇಳೆ ಖವಾಜಾ (104) ಶತಕ ಸಿಡಿಸಿ ಮಿಂಚಿದರೆ, ಗ್ರೀನ್ 49 ರನ್ ಬಾರಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Fri, 10 March 23