ಭಾರತದ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾದ ಪಾಕ್ ಕ್ರಿಕೆಟ್ ಮಂಡಳಿ
India vs Pakistan U19 Asia Cup:ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ ಪಾಕಿಸ್ತಾನ, ಭಾರತೀಯ ಆಟಗಾರರ ವರ್ತನೆ ಕುರಿತು ಐಸಿಸಿಗೆ ದೂರು ನೀಡಲು ಮುಂದಾಗಿದೆ. ಪಂದ್ಯದ ವೇಳೆ ಆಟಗಾರರ ವಾಗ್ವಾದ ಮತ್ತು ಆಕ್ರಮಣಕಾರಿ ಸಂಭ್ರಮದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಐಸಿಸಿ ಮ್ಯಾಚ್ ರೆಫರಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ 2025 ರ (U19 Asia Cup) ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಪಾಕಿಸ್ತಾನ ( India vs Pakistan) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟ್ರೋಫಿ ಗೆದ್ದ ಖುಷಿಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಬಿಸಿಸಿಐ ಹಾಗೂ ಟೀಂ ಇಂಡಿಯಾ ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಲು ಮುಂದಾಗಿದೆ. ವಾಸ್ತವವಾಗಿ ಉಭಯ ತಂಡಗಳ ನಡುವಿನ ಪಂದ್ಯದ ಸಮಯದಲ್ಲಿ ಮತ್ತು ನಂತರ ಉಭಯ ತಂಡಗಳ ಆಟಗಾರರ ವರ್ತನೆ ಸಾಕಷ್ಟು ಸುದ್ದಿ ಮಾಡಿತ್ತು. ಎರಡೂ ತಂಡಗಳ ಆಟಗಾರರು ಮೈದಾನದಲ್ಲಿಯೇ ವಾಗ್ವಾದ ನಡೆಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಚಾರದ ಬಗ್ಗೆ ಐಸಿಸಿ ಬಳಿ ದೂರು ನೀಡಲು ಮುಂದಾಗಿದೆ.
ಐಸಿಸಿಗೆ ದೂರು ನೀಡಲು ಮುಂದಾದ ಪಿಸಿಬಿ
ವಾಸ್ತವವಾಗಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿದ್ದ ಏಷ್ಯಾಕಪ್ ಸಮಯದಲ್ಲೂ ಉಭಯ ತಂಡಗಳ ನಡುವೆ ಪಂದ್ಯ ನಡೆದಿದ್ದಾಗ ಸಾಕಷ್ಟು ವಿವಾದಗಳು ಸೃಷ್ಟಿಯಾಗಿದ್ದವು. ಪಂದ್ಯದ ಮೊದಲು ಮತ್ತು ನಂತರ ಎರಡೂ ತಂಡಗಳ ಆಟಗಾರರು ಕೈಕುಲುಕಿರಲಿಲ್ಲ. ಹಾಗೆಯೇ ಫೈನಲ್ ಗೆದ್ದಿದ್ದ ಟೀಂ ಇಂಡಿಯಾ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಇದು ಕೂಡ ದೊಡ್ಡ ವಿವಾದವಾಗಿತ್ತು. ಇದರ ಪರಿಣಾಮವಾಗಿ ಟೀಂ ಇಂಡಿಯಾಗೆ ಇದುವರೆಗೂ ಟ್ರೋಫಿ ಸಿಕ್ಕಿಲ್ಲ.
ಇದೆಲ್ಲದರ ನಡುವೆ ಅಂಡರ್ 19 ಏಷ್ಯಾಕಪ್ನಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅದೇ ಘಟನೆ ಮರುಕಳಿಸಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಬಹಿರಂಗವಾಗಿಯೇ ವಾಗ್ವಾದ ನಡೆಸಿದ್ದರು. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಭಾರತೀಯ ಯುವ ಆಟಗಾರರು ಫೈನಲ್ ಪಂದ್ಯದ ವೇಳೆ ಪಾಕಿಸ್ತಾನಿ ಆಟಗಾರರನ್ನು ಕೆರಳುವಂತೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
U19 Asia Cup 2025: ಪಾಕಿಸ್ತಾನದ ವಿರುದ್ಧ ಏಷ್ಯಾಕಪ್ ಫೈನಲ್ ಸೋತ ಟೀಂ ಇಂಡಿಯಾ
ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ, ನಖ್ವಿ ಅವರು ಈ ವಿಷಯವನ್ನು ಐಸಿಸಿಗೆ ಔಪಚಾರಿಕವಾಗಿ ವರದಿ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಹಾಗೆಯೇ ಪಾಕಿಸ್ತಾನ ತಂಡದ ಮಾರ್ಗದರ್ಶಕ ಮತ್ತು ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕೂಡ ಭಾರತೀಯ ಆಟಗಾರರ ವರ್ತನೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಇದು ಆಟದ ಮನೋಭಾವಕ್ಕೆ ವಿರುದ್ಧವಾಗಿದೆ. ಕ್ರಿಕೆಟ್ ಅನ್ನು ಯಾವಾಗಲೂ ಗೌರವ ಮತ್ತು ಕ್ರೀಡಾ ಮನೋಭಾವದಿಂದ ಆಡಬೇಕು ಎಂದಿದ್ದರು. ಇದೀಗ ಪಾಕಿಸ್ತಾನವು ಈ ಬಗ್ಗೆ ಔಪಚಾರಿಕ ದೂರು ದಾಖಲಿಸಿದರೆ, ಐಸಿಸಿ ಮ್ಯಾಚ್ ರೆಫರಿಯ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತದೆ.
ವೈಭವ್-ಆಯುಷ್ ವಾಗ್ವಾದ
ಫೈನಲ್ ಪಂದ್ಯದ ಸಮಯದಲ್ಲಿ, ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಪಾಕಿಸ್ತಾನಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದರು. ಆಯುಷ್ ಮ್ಹಾತ್ರೆ ಅವರನ್ನು ಪಾಕಿಸ್ತಾನಿ ವೇಗಿ ಅಲಿ ರಜಾ ಔಟ್ ಮಾಡಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದರಿಂದ ಕೆರಳಿದ್ದ ಆಯುಷ್ ಹಾಗೂ ಅಲಿ ನಡುವೆ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರ ನಂತರ ವೈಭವ್ ಸೂರ್ಯವಂಶಿ ವಿಕೆಟ್ ಪಡೆದಿದ್ದ ಅಲಿ ಮತ್ತೆ ಆಕ್ರಮಣಕಾರಿ ಆಚರಣೆ ನಡೆಸಿದ್ದರು. ಇದು ಕೂಡ ವೈಭವ್ ಸೂರ್ಯವಂಶಿಯನ್ನು ಕೆರಳುವಂತೆ ಮಾಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Tue, 23 December 25
