IND vs AUS: ‘ಹೆಡ್’ ಇಲ್ಲದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಬೆನ್ನೆಲುಬು
India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಿದ್ದರೆ ಟ್ರಾವಿಸ್ ಹೆಡ್ಗಾಗಿ ವಿಶೇಷ ಯೋಜನೆ ರೂಪಿಸಲೇಬೇಕು. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲೂ ಟೀಮ್ ಇಂಡಿಯಾ ವಿರುದ್ಧ ಅಬ್ಬರಿಸಿದ್ದು ಹೆಡ್ ಮಾತ್ರ. ಹಾಗಾಗಿ ಹೆಡ್ ವಿಕೆಟ್ ಭಾರತದ ಪಾಲಿಗೆ ನಿರ್ಣಾಯಕ ಎನ್ನಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರು ಮ್ಯಾಚ್ಗಳು ಮುಗಿವೆ. ಪರ್ತ್ನಲ್ಲಿ ನಡೆದ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್ಗಳ ಜಯ ಸಾಧಿಸಿತು. ಆದರೆ ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 10 ವಿಕೆಟ್ಗಳಿಂದ ಸೋಲನುಭವಿಸಿತು.
ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತು. ಇನ್ನು ಬ್ರಿಸ್ಬೇನ್ನಲ್ಲಿ ನಡೆದ ಮೂರನೇ ಮ್ಯಾಚ್ ಡ್ರಾನಲ್ಲಿ ಅಂತ್ಯ ಕಂಡಿದೆ. ಅಂದರೆ ಈವರೆಗೆ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿದೆ. ಇಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತಿರುವುದು ಟ್ರಾವಿಸ್ ಹೆಡ್ ಎಂಬುದು ಸ್ಪಷ್ಟ.
ಏಕೆಂದರೆ ಕಳೆದ 6 ಇನಿಂಗ್ಸ್ಗಳಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಕಲೆಹಾಕಿರುವುದು ಟ್ರಾವಿಸ್ ಹೆಡ್. 2 ಭರ್ಜರಿ ಶತಕಗಳೊಂದಿಗೆ ಹೆಡ್ ಒಟ್ಟು 409 ರನ್ ಬಾರಿಸಿದ್ದಾರೆ. ಆದರೆ ಮತ್ತೊಂದೆಡೆ ಉಳಿದ 5 ಬ್ಯಾಟರ್ಗಳು ಜೊತೆಗೂಡಿ ಕಲೆಹಾಕಿರುವುದು ಕೇವಲ 410 ರನ್ಗಳು ಮಾತ್ರ.
ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ 6 ಇನಿಂಗ್ಸ್ಗಳಿಂದ 63 ರನ್ಗಳಿಸಿದರೆ, ನಾಥನ್ ಮೆಕ್ಸ್ವೀನಿ 72 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ 5 ಇನಿಂಗ್ಸ್ಗಳಿಂದ ಗಳಿಸಿದ್ದು 82 ರನ್ಗಳು ಮಾತ್ರ. ಇನ್ನು ಸ್ಟೀವ್ ಸ್ಮಿತ್ ಐದು ಇನಿಂಗ್ಸ್ಗಳಿಂದ 124 ರನ್ ಬಾರಿಸಿದ್ದಾರೆ.
ಹಾಗೆಯೇ ಮಿಚೆಲ್ ಮಾರ್ಷ್ 5 ಇನಿಂಗ್ಸ್ಗಳಿಂದ ಕಲೆಹಾಕಿರುವುದು ಕೇವಲ 69 ರನ್ಗಳು. ಅಂದರೆ ಆಸ್ಟ್ರೇಲಿಯಾ ಟಾಪ್-5 ಬ್ಯಾಟರ್ಗಳ ಒಟ್ಟು ಕೊಡುಗೆ ಕೇವಲ 410 ರನ್ಗಳು ಮಾತ್ರ.
ಮತ್ತೊಂದೆಡೆ ಏಕಾಂಗಿಯಾಗಿ ಅಬ್ಬರಿಸುವ ಮೂಲಕ ಟ್ರಾವಿಸ್ ಹೆಡ್ 5 ಇನಿಂಗ್ಸ್ಗಳಿಂದ 2 ಶತಕ ಹಾಗೂ 1 ಅರ್ಧಶತಕದೊಂದಿಗೆ 409 ರನ್ ಕಲೆಹಾಕಿದ್ದಾರೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡದ ರನ್ ಸುರಿಮಳೆಯನ್ನು ತಡೆಯಬೇಕಿದ್ದರೆ ಟ್ರಾವಿಸ್ ಹೆಡ್ ಅವರ ವಿಕೆಟ್ ಕಬಳಿಸಲೇಬೇಕು.
ಒಂದು ವೇಳೆ ಮೆಲ್ಬೋರ್ನ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ಅವರನ್ನು ಬೇಗನೆ ಔಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರೆ, ಆಸ್ಟ್ರೇಲಿಯಾ ತಂಡದ ಸ್ಕೋರ್ ಅನ್ನು ನಿಯಂತ್ರಿಸಿಕೊಳ್ಳಬಹುದು. ಹಾಗಾಗಿ ಭಾರತ ತಂಡವು ಮುಂದಿನ ಎರಡು ಮ್ಯಾಚ್ನಲ್ಲಿ ಗೆಲ್ಲಬೇಕಿದ್ದರೆ ಟ್ರಾವಿಸ್ ಹೆಡ್ಗಾಗಿ ವಿಶೇಷ ಯೋಜನೆ ರೂಪಿಸಿಕೊಳ್ಳುವುದು ಅನಿವಾರ್ಯ.
ಇದನ್ನೂ ಓದಿ: 22ನೇ ವಯಸ್ಸಿನಲ್ಲೇ ಸೈಮ್ ಅಯ್ಯೂಬ್ ಅಬ್ಬರ: ಸಚಿನ್, ವಿರಾಟ್ ಕೊಹ್ಲಿ ದಾಖಲೆ ಶೇಕಿಂಗ್
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಸ್ಯಾಮ್ ಕೊನ್ಸ್ಟಾಸ್, ಮಾರ್ನಸ್ ಲಾನುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಜ್ಯೆ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ , ಬ್ಯೂ ವೆಬ್‌ಸ್ಟರ್.
Published On - 7:08 am, Wed, 25 December 24