ತಾನು ಗಾಜಿನ ಮನೆಯಲ್ಲಿದ್ದುಕೊಂಡು ಕಂಡವರ ಮನೆಗೆ ಕಲ್ಲು ಹೊಡೀಬಾರ್ದು ಎಂಬ ನಾಣ್ಣುಡಿ ಯಾರಿಗೆ ಸರಿ ಹೊಂದುತ್ತದೋ ಇಲ್ಲವೋ, ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮಾತ್ರ ಈ ಮಾತು ಹೇಳಿ ಮಾಡಿಸಿದಂತಿದೆ. ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಟೆಸ್ಟ್‌ನ ಮೊದಲ ದಿನದಂದು ಆಸ್ಟ್ರೇಲಿಯಾ (India vs Australia) ತಂಡದ ಹೀನಾಯ ಪ್ರದರ್ಶನ ಕಂಡ ಆಸ್ಟ್ರೇಲಿಯನ್ ಅಭಿಮಾನಿಗಳು ಮತ್ತು ಮಾಧ್ಯಮಗಳು ಟೀಂ ಇಂಡಿಯಾ (Team India) ಆಟಗಾರರನ್ನು ಟಾರ್ಗೆಟ್ ಮಾಡಲು ಆರಂಭಿಸಿವೆ. ಟೆಸ್ಟ್ ಸರಣಿಯ ಆರಂಭಕ್ಕೂ ಮೊದಲು ಪಿಚ್ ಬಗ್ಗೆ ಅಪಸ್ವರ ಎತ್ತಿದ್ದವರು ಇದೀಗ ಬೌಲರ್ಗಳ ಮೇಲೆಯೂ ಸಂಶಯ ಹೊರಹಾಕಿದ್ದಾರೆ. ಆಸೀಸ್ ಅಭಿಮಾನಿಗಳು, ಮಾಧ್ಯಮ ಹಾಗೂ ಮಾಜಿ ನಾಯಕ ಟಿಮ್ ಪೈನ್ ಸೇರಿದಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರರು ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ವಾಸ್ತವವಾಗಿ ಗುರುವಾರದಿಂದ ಆರಂಭವಾಗಿರುವ ನಾಗ್ಪುರ ಟೆಸ್ಟ್‌ನ ಮೊದಲ ದಿನದಂದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 177 ರನ್‌ಗಳಿಗೆ ಆಲೌಟ್ ಆಯಿತು. ಜಡೇಜಾ ಸ್ಪಿನ್ ದಾಳಿಗೆ ನಲುಗಿದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬರೋಬ್ಬರಿ 5 ತಿಂಗಳ ನಂತರ ಮೈದಾನಕ್ಕೆ ಮರಳಿದ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಅದಾಗ್ಯೂ, ಈ ನಡುವೆ ಆಸೀಸ್ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಜಡೇಜಾ ಅವರ ವೀಡಿಯೊವೊಂದು ಸಖತ್ ವೈರಲ್ ಆಗಿದ್ದು, ಇದು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಲ್ಲದೆ, ಆಸ್ಟ್ರೇಲಿಯನ್ನರು ಟೀಂ ಇಂಡಿಯಾದ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಲಾರಂಭಿಸಿದ್ದಾರೆ.
IND vs AUS: ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು
ಪಂದ್ಯದ ಎರಡನೇ ಸೆಷನ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಜಡೇಜಾ ತಮ್ಮ ಬೆರಳಿಗೆ ಏನನ್ನೋ ಹಚ್ಚಿಕೊಳ್ಳುತ್ತಿರುವ ವೀಡಿಯೊವನ್ನು ಆಸ್ಟ್ರೇಲಿಯಾದ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜಡೇಜಾ, ಮೊಹಮ್ಮದ್ ಸಿರಾಜ್ ಬಳಿ ಏನನ್ನೋ ತೆಗೆದುಕೊಂಡು ಎಡ ಬೆರಳಿಗೆ ಉಜ್ಜಿಕೊಳ್ಳುತ್ತಿರುವ ದೃಶ್ಯವಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಅವರನ್ನು ಆಸ್ಟ್ರೇಲಿಯಾ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದು, ಪೈನ್ ಕುತೂಹಲಕಾರಿಯಾಗಿ ಉತ್ತರಿಸಿದ್ದಾರೆ.
What is it he is putting on his spinning finger ? Never ever seen this … #INDvsAUS https://t.co/NBPCjFmq3w
— Michael Vaughan (@MichaelVaughan) February 9, 2023
What do you think of this @tdpaine36 Looks like one player giving grippo to the bowler and him rubbing it all over his spinning finger to me. Thoughts? pic.twitter.com/XjcNedJ3Sc
— Darren Lock (@Dags_L) February 9, 2023
ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟ್ ಚಾನೆಲ್ ಫಾಕ್ಸ್ ಕ್ರಿಕೆಟ್ ಕೂಡ ಇದರ ಬಗ್ಗೆ ವರದಿ ಮಾಡಿದ್ದು, ಜಡೇಜಾ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಪ್ರಶ್ನೆಗಳನ್ನು ಎತ್ತಿದೆ. ಆಸ್ಟ್ರೇಲಿಯನ್ ಮಾಧ್ಯಮಗಳು ಕ್ರಿಕೆಟ್ ಕಳ್ಳಾಟದ ಬಗ್ಗೆ ಬಹಿರಂಗವಾಗಿ ಮಾತನಾಡದಿದ್ದರೂ, ಪರೋಕ್ಷವಾಗಿ ಜಡೇಜಾ, ಬೌಲಿಂಗ್ಗೆ ಸಹಾಯಕವಾಗುವಂತಹ ಯಾವುದೇ ಮುಲಾಮನ್ನು ಬಳಸಿದ್ದಾರೆ ಎಂಬುದು ಅವರ ವಾದವಾಗಿದೆ. ಆದರೆ, ಜಡೇಜಾ ಬೆರಳಿನ ನೋವನ್ನು ಕಡಿಮೆ ಮಾಡುವ ಸಲುವಾಘಿ ಮುಲಾಮೊಂದನ್ನು ಹಚ್ಚಿಕೊಂಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.
ಅಂದಹಾಗೆ, 5 ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯಾ ತಂಡದ ಆಟಗಾರರು ಚೆಂಡನ್ನು ವಿರೋಪಗೊಳಿಸಿದ ಆರೋಪದಡಿ ಕ್ರಿಕೆಟ್ ಜಗತ್ತಿನ ಮುಂದೆ ತಲೆ ತಗ್ಗಿಸಿದ್ದರು. ವಾಸ್ತವವಾಗಿ 2018 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಯುವ ಬ್ಯಾಟ್ಸ್‌ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಚೆಂಡನ್ನು ಸ್ಯಾಂಡ್ಪೇಪರ್ನಿಂದ ಉಜ್ಜುವ ವೇಳೆ ಕ್ಯಾಮರ ಕಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇದರ ನಂತರ, ಮೂವರಿಗೂ ಒಂದು ವರ್ಷದವರೆಗೆ ಕ್ರಿಕೆಟ್ನಿಂದ ನಿಷೇಧ ಹೇರಲಾಗಿತ್ತು. ಈ ಆಟಗಾರರ ಪೈಕಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Fri, 10 February 23