ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ 2023 (Women’s T20 World Cup 2023)ರ ಸೆಮಿಫೈನಲ್‌ಗೆ ಪ್ರವೇಶಿಸಿರುವ ಟೀಂ ಇಂಡಿಯಾ ಇಂದು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು (India Vs Australia) ಎದುರಿಸಲಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡ ಕನಿಷ್ಠ ಪಕ್ಷ ಸೆಮಿಫೈನಲ್‌ಗೆ ತಲುಪುವ ನಿರೀಕ್ಷೆಯಿತ್ತು. ನಿರೀಕ್ಷೆಯಂತೆ ಸತತ ಎರಡನೇ ಬಾರಿಗೆ ಭಾರತ ತಂಡ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆದಿದೆ. ಆದಾಗ್ಯೂ, ತಂಡದ ಪ್ರದರ್ಶನವು ಸಂಪೂರ್ಣವಾಗಿ ಪರಿಪೂರ್ಣವಾಗಿಲ್ಲ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸೆಮಿಫೈನಲ್‌ಗೆ ಆಡುವ ಇಲೆವೆನ್‌ನಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಫೆಬ್ರವರಿ 23 ರಂದು, ಭಾರತ ತಂಡವು ವಿಶ್ವಕಪ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಸತತ ಎರಡನೇ ಬಾರಿಗೆ ಮೈದಾನಕ್ಕಿಳಿಯಲಿದೆ. ಕಳೆದ ಬಾರಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದ ಆಸ್ಟ್ರೇಲಿಯಾ ಮತ್ತೊಮ್ಮೆ ಭಾರತಕ್ಕೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರ್ತಿಯೂ ಅದ್ಭುತ ಪ್ರದರ್ಶನ ನೀಡಬೇಕಾಗಿದೆ.
ಇಲ್ಲಿಯವರೆಗೆ ಒಂದೇ ಒಂದು ಪರಿಣಾಮಕಾರಿ ಇನ್ನಿಂಗ್ಸ್ ಆಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟಿಂಗ್ ಅತ್ಯಂತ ದೊಡ್ಡ ಚಿಂತೆಯಾಗಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು ಆದರೆ ನಂತರ ಅವರಿಗೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ಐರ್ಲೆಂಡ್ ವಿರುದ್ಧ 87 ರನ್ ಗಳಿಸಿದಲ್ಲದೆ, ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಅವರಿಗೂ ವೇಗದ ಆರಂಭ ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ನ್ಯೂನತೆಯನ್ನು ಸ್ವತಃ ನಾಯಕಿ ಕೌರ್ ಒಪ್ಪಿಕೊಂಡಿದ್ದು, ವಿಶೇಷವಾಗಿ ಸ್ಟ್ರೈಕ್ ರೊಟೇಶನ್ ಅನ್ನು ಸುಧಾರಿಸಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ. ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಮಾತ್ರ ಬಲಿಷ್ಠ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇನ್ನುಳಿದಂತೆ ತಂಡದ ಮಿಕ್ಕ ಆಟಗಾರ್ತಿಯರು ಇಂದಿನ ಪಂದ್ಯವನ್ನು ಶತಾಯಗತಾಯ ಗೆಲ್ಲುವ ಸಲುವಾಗಿಯೇ ಕಣಕ್ಕಿಳಿಯಬೇಕಿದೆ.
ಟೀಂ ಇಂಡಿಯಾದ ಬೌಲಿಂಗ್‌ನ ಪರಿಸ್ಥಿತಿಯೂ ಉತ್ತಮವಾಗಿಲ್ಲ. ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ಹೊರತುಪಡಿಸಿ ಉಳಿದ ಬೌಲರ್‌ಗಳು ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರ ಫಾರ್ಮ್ ದೊಡ್ಡ ಆತಂಕವಾಗಿದೆ. ಇದುವರೆಗೆ ರಾಜೇಶ್ವರಿ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ಶಿಖಾ ಪಾಂಡೆ ಕೂಡ 2 ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ.
ಪೂಜಾ ವಸ್ತ್ರಾಕರ್ ಕೂಡ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಿಲ್ಲ, ಆದರೆ ಅವರನ್ನು ಹೊರತುಪಡಿಸಿ ತಂಡಕ್ಕೆ ಉತ್ತಮ ಆಯ್ಕೆಗಳಿಲ್ಲ. ಹೀಗಾಗಿ ಇಂದಿನ ಪಂದ್ಯಕ್ಕೆ ಇದೇ ತಂಡವನ್ನು ಉಳಿಸಿಕೊಳ್ಳುವುದು ಬಾರತಕ್ಕೆ ಅನಿವಾರ್ಯವಾಗಿದೆ. ಏಕೆಂದರೆ ಇವರನ್ನು ಹೊರತುಪಡಿಸಿದರೆ, ತಂಡದಲ್ಲಿ ಅಂತಹ ಹೇಳಿಕೊಳ್ಳುವಂತಹ ಆಟಗಾರ್ತಿಯರಿಲ್ಲ.
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್‌ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ಶಿಖಾ ಪಾಂಡೆ, ರೇಣುಕಾ ಸಿಂಗ್ ಮತ್ತು ರಾಜೇಶ್ವರಿ ಗಾಯಕ್ವಾಡ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Thu, 23 February 23