INDW vs AUSW: ಟಿ20 ವಿಶ್ವಕಪ್ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಆಸೀಸ್ ವಿರುದ್ಧ ಗೆದ್ದರೆ ಭಾರತಕ್ಕೆ ಫೈನಲ್ ಟಿಕೆಟ್
India Women vs Australia Women, ICC Womens T20 World Cup: ಇಂದು ಕೇಪ್ಟೌನ್ನ ನ್ಯೂಲೆಂಡ್ಸ್ ಮೈದಾನದಲ್ಲಿ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ ಮೊದಲ ಸೆಮಿ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಲಗ್ಗೆಯಿಡಲಿದೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ (Womens T20 World Cup) ಅಂತಿಮ ಹಂತದತ್ತ ತಲುಪುತ್ತಿದೆ. ಇಂದು ಕೇಪ್ಟೌನ್ನ ನ್ಯೂಲೆಂಡ್ಸ್ ಮೈದಾನದಲ್ಲಿ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ಮಹಿಳಾ ತಂಡಗಳ (India Women vs Australia Women) ನಡುವೆ ಮೊದಲ ಸೆಮಿ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಇಲ್ಲಿ ಗೆದ್ದ ತಂಡ ಫೈನಲ್ಗೆ ಲಗ್ಗೆಯಿಡಲಿದೆ. ಕಾಂಗರೂ ಮಹಿಳೆಯರ ವಿರುದ್ಧ ಅತಿ ಹೆಚ್ಚು ಸೋಲಿನ ಕೆಟ್ಟ ದಾಖಲೆ ಹೊಂದಿರುವ ಟೀಮ್ ಇಂಡಿಯಾ (Team India) ಈ ಹೈವೋಲ್ಟೇಜ್ ಕದನದಲ್ಲಿ ಯಾವರೀತಿ ಪ್ರದರ್ಶನ ತೋರುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಅಲ್ಲದೆ 2020ರ ಟೂರ್ನಿಯ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸುವ ಅವಕಾಶ ಭಾರತಕ್ಕೆ ಲಭಿಸಿದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಹಾಗೂ ಒಂದು ಸೋಲಿನೊಂದಿಗೆ 6 ಅಂಕ ಸಂಪಾದಿಸಿರುವ ಟೀಮ್ ಇಂಡಿಯಾ +0.253 ರನ್ರೇಟ್ನೊಂದಿಗ ಗ್ರೂಪ್ ಬಿಯಲ್ಲಿ ಎರಡನೇ ಸ್ಥಾನ ಪಡೆದು ಸೆಮೀಸ್ಗೆ ಕ್ವಾಲಿಫೈ ಆಗಿತ್ತು. ಇತ್ತ ಆಸೀಸ್ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದೆ ಆಡಿದ ಎಲ್ಲ ನಾಲ್ಕು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿ 8 ಅಂಕದೊಂದಿಗೆ +2.149 ರನ್ರೇಟ್ನೊಂದಿಗೆ ನಾಲ್ಕರ ಘಟ್ಟಕ್ಕೆ ಎಂಟ್ರಿ ನೀಡಿದೆ.
ಹಿಂದಿನ ದಾಖಲೆಗಳನ್ನು ಗಮನಿಸುವುದಾದರೆ ಭಾರತ ವಿರುದ್ಧ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಈವರೆಗೆ ಒಟ್ಟು 30 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ ಕೇವಲ 7 ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದರೆ ಕಾಂಗರೂ ಪಡೆ 22 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಫಲಿತಾಂಶ ಇಲ್ಲದೆ ಅಂತ್ಯಕಂಡಿದೆ.
IPL 2023: ಹೊಸ ಆಟಗಾರನ ಹುಡುಕಾಟದಲ್ಲಿ CSK
ಭಾರತದ ಬ್ಯಾಟಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿರುವ ಸ್ಮೃತಿ ಮಂಧಾನ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ಇವರು ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇಂಗ್ಲೆಂಡ್ 52 ರನ್ ಗಳಿಸಿದರೆ, ಐರ್ಲೆಂಡ್ ವಿರುದ್ಧ 87 ರನ್ ಚಚ್ಚಿದ್ದರು. ಶಫಾಲಿ ವರ್ಮಾ ಹಾಗೂ ರಿಚಾ ಘೋಷ್ ಸಾಥ್ ನೀಡುತ್ತಿದ್ದಾರೆ. ಆದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್, ಜೆಮಿಯಾ ರೋಡ್ರಿಗಸ್ ಬ್ಯಾಟ್ನಿಂದ ರನ್ ಬರದಿರುವುದು ದೊಡ್ಡ ತಲೆನೋವಾಗಿದೆ.
ಭಾರತದ ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್ ಪ್ರಮುಖ ಅಸ್ತ್ರವಾಗಿದ್ದಾರೆ. ಅವರ ಸ್ವಿಂಗ್ ಬಾಲ್ ಎದುರಾಳಿಗಳನ್ನು ಕಂಗೆಡಿಸುವುದರಲ್ಲಿ ಅನುಮಾನವಿಲ್ಲ. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ಮಿಂಚಿದರೆ ಆಸ್ಟ್ರೇಲಿಯಾ ಬಲಿಷ್ಠ ಬ್ಯಾಟಿಂಗ್ ಪಡೆಗೆ ಕಡಿವಾಣ ಹಾಕಬಹುದಾಗಿದೆ.
ಇತ್ತ ಕಾಂಗರೂ ಪಡೆ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಬ್ಯಾಟರ್ಗಳು ಕೈಕೊಟ್ಟರೆ ಬೌಲರ್ಗಳೇ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಮೆಗ್ ಲ್ಯಾನಿಂಗ್ ನೇತೃತ್ವದ ತಂಡ ನಿರಂತರವಾಗಿ 22 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಹೋಗುತ್ತಿದೆ. ವಿಶೇಷ ಎಂದರೆ 2021 ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯವೊಂದನ್ನು ಸೋತ ಬಳಿಕ, ಅದು ಯಾವುದೇ ಮಾದರಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಸೋತಿದೆ. ಬೆತ್ ಮೋನಿ, ಎಲಿಸ್ಸಾ ಪೆರಿ, ಆಶ್ಲೀಗ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಮೇಗನ್ ಶುಟ್, ತಾಲಿಯಾ ಮೆಕ್ಗ್ರಾತ್ರಂತಹ ಅನುಭವಿ ಪ್ಲೇಯರ್ಸ್ ತಂಡದಲ್ಲಿದ್ದಾರೆ.
ಇಂಡೋ- ಆಸೀಸ್ ಸೆಮಿ ಫೈನಲ್ ಪಂದ್ಯ ನಡೆಯಲಿರುವ ನ್ಯೂಲೆಂಡ್ಸ್ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳೇ ಹೆಚ್ಚಿನ ಬಾರಿ ಗೆಲುವು ಸಾಧಿಸಿರುವುದರಿಂದ ಟಾಸ್ ಗೆಲ್ಲುವ ತಂಡ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚಿದೆ. ಇಲ್ಲಿನ ಅಂಗಳದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 149 ಆಗಿದ್ದು, ಎರಡನೇ ಇನ್ನಿಂಗ್ಸ್ ಮೊತ್ತ 122 ಆಗಿದೆ. ಹೀಗಾಗಿ ಭಾರತ- ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸೆಮಿ ಫೈನಲ್ ಕದನ ಭಾರತೀಯ ಕಾಲಮಾನದ ಪ್ರಕಾರ ಸಂಜೆ 6:30ಕ್ಕೆ ಶುರುವಾಗಲಿದೆ. 6 ಗಂಟೆಗೆ ಟಾಸ್ ಪ್ರಕ್ರಿಯೆ ಆಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ನೋಡಬಹುದು.
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಾಧಾ ಯಾದವ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ.
ಆಸ್ಟ್ರೇಲಿಯಾ ಮಹಿಳಾ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಡಾರ್ಸಿ ಬ್ರೌನ್, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಹೀದರ್ ಗ್ರಹಾಂ, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ತಾಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲಿಸ್ಸಾ ಪೆರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:49 am, Thu, 23 February 23