ಸ್ನೇಹಮಯಿ ಕೃಷ್ಣ ದಿಢೀರ್ ಬಂಧನದಿಂದ ಹಲವು ಅನುಮಾನ: ಕೋರ್ಟ್‌ಗೆ ಆಡಿಯೋ ಸಲ್ಲಿಸುವ ಮುನ್ನವೇ ಅರೆಸ್ಟ್ ಮಾಡಿದ್ದೇಕೆ?
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ವಶಕ್ಕೆ ಪಡೆದಿದೆ. ಮುಡಾ ಮಾಜಿ ಆಯುಕ್ತ ನಟೇಶ್ ಅವರ ಆಡಿಯೋ ಸಂಬಂಧ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಲಂಚ, ನಟೇಶ್ ವಿರುದ್ಧದ ಆರೋಪಗಳ ಬಗ್ಗೆ ಸ್ನೇಹಮಯಿ ಕೃಷ್ಣ ಕೋರ್ಟ್‌ಗೆ ದಾಖಲೆ ಸಲ್ಲಿಸುವುದಕ್ಕೂ ಮುನ್ನವೇ ಬಂಧನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಮೈಸೂರು, ಫೆಬ್ರವರಿ 21: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು (CCB Police) ವಶಕ್ಕೆ ಪಡೆದುಕೊಂಡು, ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್, ತಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಕೋರ್ಟ್‌ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು ಸಿದ್ಧವಾಗಿದ್ದ ಸಮಯದಲ್ಲಿಯೇ ಬಂಧನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಪ್ರಕರಣ? ಸ್ನೇಹಮಯಿ ಬಂಧನವಾಗಿದ್ದೇಕೆ?
ಸ್ನೇಹಮಯಿ ಕೃಷ್ಣ ಮೂರು ಪ್ರಮುಖ ಆರೋಪಗಳನ್ನು ಮಾಡಿದ್ದರು. ಮೊದಲನೆಯದಾಗಿ, ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಣವನ್ನು ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಎರಡನೆಯದಾಗಿ, ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್‌ಗಳ ‘ಟ್ರೈಲರ್’ ಬಿಡುಗಡೆ ಮಾಡಿದ್ದೇನೆ ಎಂದಿದ್ದ ಅವರು, ಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಆಡಿಯೋದಲ್ಲಿ ನಟೇಶ್ ಅವರು ಹೇಗಾದರೂ ಮಾಡಿ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮೂರನೆಯದಾಗಿ, ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ನಟೇಶ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಟೇಶ್ ಲೋಕಾಯುಕ್ತರಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿ, ಕೈಬರಹದ ದಾಖಲೆಯೊಂದನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು.
ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಾಗಿದ್ದ ಸ್ನೇಹಮಯಿ ಕೃಷ್ಣ
ಈ ಆರೋಪಗಳಿಗೆ ಸಂಬಂಧಿಸಿದಂತೆ, ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ಕೋರ್ಟ್‌ಗೆ ಆಡಿಯೋ ಹಾಗೂ ಇತರ ದಾಖಲಾತಿಗಳನ್ನು ಸಲ್ಲಿಸಲು ನಿನ್ನೆ ಅಂದರೆ 20ನೇ ತಾರೀಖು ಸಿದ್ಧರಾಗಿದ್ದರು. ಆದರೆ, ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸುವ ಮುನ್ನವೇ ಅವರನ್ನು ಬಂಧಿಸಲಾಯಿತು. ಇದು ‘ನಟೇಶ್ರ ಆಡಿಯೋ ಕೋರ್ಟ್‌ಗೆ ತಲುಪುತ್ತದೆ ಎಂಬ ಭಯವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದ ನಂತರ, ಮೈಸೂರಿನಲ್ಲಿರುವ ಅವರ ಎರಡು ಮನೆಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆದ ಈ ಶೋಧ ಕಾರ್ಯದಲ್ಲಿ ಒಂದು ಪೆನ್ ಡ್ರೈವ್, ಐಫೋನ್, ಸ್ವಿಚ್ ಆಫ್ ಆಗಿದ್ದ ಒಂದು ಫೋನ್, ಹಾರ್ಡ್ ಡಿಸ್ಕ್ ಮತ್ತು ಮೆಮೊರಿ ಕಾರ್ಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ನೇಹಮಯಿ ಕೃಷ್ಣ ಅವರು ವಿಚಾರಣೆ ವೇಳೆ ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಿದ್ದು, ನಟೇಶ್ ಅವರದ್ದೇ ಆಡಿಯೋ ಎಂದು ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ. ವಿಚಾರಣೆ ಪೂರ್ಣಗೊಂಡ ನಂತರ ಅವರಿಗೆ ಸ್ಟೇಷನ್ ಬೇಲ್ ಸಿಗುವ ಸಾಧ್ಯತೆಯಿದ್ದು, ಇಲ್ಲವೇ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಕೇಳುವ ಸಾಧ್ಯತೆಗಳೂ ಇವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:57 am, Sat, 21 February 26