IND vs BAN: ಮಾಡಿದ ತಪ್ಪಿಗೆ ಸಿರಾಜ್ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ ಪಂತ್; ವಿಡಿಯೋ ನೋಡಿ

|

Updated on: Sep 20, 2024 | 3:55 PM

IND vs BAN: ಪಂದ್ಯದ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ ಮಾಡಿದ ಅದೊಂದು ತಪ್ಪಿನಿಂದಾಗಿ ಮೊಹಮ್ಮದ್ ಸಿರಾಜ್​ಗೆ ಸಿಗಬೇಕಿದ್ದ ವಿಕೆಟ್ ಕೈತಪ್ಪಿತು. ತರುವಾಯ ತಾನು ಮಾಡಿದ್ದು ತಪ್ಪು ಎಂಬುದನ್ನು ಅರಿತುಕೊಂಡ ರಿಷಬ್ ಪಂತ್, ಪಂದ್ಯದ ವೇಳೆ ಸಿರಾಜ್ ಬಳಿ ಕ್ಷಮೆಯಾಚಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

IND vs BAN: ಮಾಡಿದ ತಪ್ಪಿಗೆ ಸಿರಾಜ್ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ ಪಂತ್; ವಿಡಿಯೋ ನೋಡಿ
ಟೀಂ ಇಂಡಿಯಾ
Follow us on

ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸಂಪೂರ್ಣ ಮೇಲುಗೈ ಸಾಧಿಸಿದೆ. ಈಗಾಗಲೇ ಉಭಯ ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿದ್ದು, ಆತಿಥೇಯ ತಂಡಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 227 ರನ್​ಗಳ ಮುನ್ನಡೆ ಸಿಕ್ಕಿದೆ. ಆದಾಗ್ಯೂ ಪಂದ್ಯದ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ ಮಾಡಿದ ಅದೊಂದು ತಪ್ಪಿನಿಂದಾಗಿ ಮೊಹಮ್ಮದ್ ಸಿರಾಜ್​ಗೆ ಸಿಗಬೇಕಿದ್ದ ವಿಕೆಟ್ ಕೈತಪ್ಪಿತು. ತರುವಾಯ ತಾನು ಮಾಡಿದ್ದು ತಪ್ಪು ಎಂಬುದನ್ನು ಅರಿತುಕೊಂಡ ರಿಷಬ್ ಪಂತ್, ಪಂದ್ಯದ ವೇಳೆ ಸಿರಾಜ್ ಬಳಿ ಕ್ಷಮೆಯಾಚಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಅಷ್ಟಕ್ಕೂ ರಿಷಬ್ ಪಂತ್ ಕ್ಷಮೆಯಾಚಿಸುವಂತಹದ್ದು ಏನಾಯಿತು ಎಂಬುದನ್ನು ನೋಡುವುದಾದರೆ.. ಟೀಂ ಇಂಡಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 376 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾ ತಂಡದ ಇನ್ನಿಂಗ್ಸ್​ನ 4ನೇ ಓವರ್​ ಬೌಲ್ ಮಾಡುವ ಜವಬ್ದಾರಿಯನ್ನು ಸಿರಾಜ್ ತೆಗೆದುಕೊಂಡರು. ಈ ವೇಳೆ ಓವರ್​ನ ಐದನೇ ಎಸೆತ ಎಡಗೈ ಬ್ಯಾಟ್ಸ್‌ಮನ್ ಝಾಕಿರ್ ಹಸನ್ ಅವರ ಪ್ಯಾಡ್​ಗೆ ಬಿತ್ತು. ಕೂಡಲೇ ಸಿರಾಜ್, ಹಸನ್ ವಿರುದ್ಧ ಎಲ್‌ಬಿಡಬ್ಲ್ಯೂ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ.

ಸಿರಾಜ್​ ಮಾತು ಕೇಳದ ರೋಹಿತ್

ಆದರೆ ಅದು ಖಚಿತವಾಗಿ ಔಟ್ ಎಂಬುದನ್ನು ಅರಿತಿದ್ದ ಸಿರಾಜ್, ರೋಹಿತ್ ಶರ್ಮಾ ಬಳಿ ಡಿಆರ್​ಎಸ್ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಈ ನಡುವೆ ಮಧ್ಯ ಪ್ರವೇಶಿದ ವಿಕೆಟ್ ಕೀಪರ್ ರಿಷಬ್ ಪಂತ್, ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಗುತ್ತಿದೆ, ಆದ್ದರಿಂದ ಡಿಆರ್​ಎಸ್​ ತೆಗೆದುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಸುಮ್ಮನೆ ಒಂದು ರಿವ್ಯೂ ಹಾಳಾಗುತ್ತದೆ ಎಂದರು. ಇದನ್ನು ಕೇಳಿದ ರೋಹಿತ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಸ್ವಲ್ಪ ಸಮಯದ ನಂತರ, ಕ್ರೀಡಾಂಗಣದಲ್ಲಿ ಅಳವಡಿಸಲಾದ ದೊಡ್ಡ ಪರದೆಯ ಮೇಲೆ ರಿವ್ಯೂ ತೋರಿಸಲಾಯಿತು. ಅದರಲ್ಲಿ ಚೆಂಡು ಲೆಗ್ ಸ್ಟಂಪ್‌ಗೆ ಬಡಿದು ಜಾಕಿರ್ ಔಟ್ ಆಗಿರುವುದು ಸ್ಪಷ್ಟವಾಗಿ ಗೋಚರಿಸಿತು.

ಕ್ಷಮೆಯಾಚಿಸಿದ ಪಂತ್

ಇದನ್ನು ನೋಡಿದ ತಕ್ಷಣವೇ ಸಿರಾಜ್, ಪಂತ್ ಅವರನ್ನು ಕರೆದು ಅದು ಔಟೆಂಬಂತೆ ಸನ್ನೆ ಮಾಡಿದರು. ಇದನ್ನು ಕಂಡ ಪಂತ್ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡು ದೂರದಿಂದಲೇ ಸಿರಾಜ್ ಬಳಿ ಕ್ಷಮೆ ಯಾಚಿಸಿದರು. ಆದರೆ ಈ ಜೀವದಾನದ ಲಾಭವನ್ನು ಹಸನ್​ಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇವಲ 4 ಓವರ್​ಗಳ ಬಳಿಕ ಆಕಾಶ್ ದೀಪ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು.

ಬಾಂಗ್ಲಾ ಇನ್ನಿಂಗ್ಸ್ ಹೀಗಿತ್ತು

ಟೀಂ ಇಂಡಿಯಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 376 ರನ್​ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ್ದ ಬಾಂಗ್ಲಾ ತಂಡ ಕೇವಲ 149 ರನ್​ಗಳಿಗೆ ಆಲೌಟ್ ಆಯಿತು. ಭಾರತದ ವೇಗಿಗಳ ದಾಳಿಗೆ ತತ್ತರಿಸಿದ ಬಾಂಗ್ಲಾ ಬ್ಯಾಟರ್​ಗಳಿಗೆ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆರಂಭದಿಂದಲೂ ತಮ್ಮ ಕರಾರುವಕ್ಕಾದ ದಾಳಿಯಿಂದ ಬಾಂಗ್ಲಾ ಬ್ಯಾಟರ್​ಗಳಿಗೆ ತೊಂದರೆ ನೀಡಿದ ಬುಮ್ರಾ- ಸಿರಾಜ್ ನೇತೃತ್ವದ ಬೌಲಿಂಗ್ ವಿಭಾಗ ಎದುರಾಳಿ ತಂಡವನ್ನು ಅಲ್ಪ ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ