IND vs BAN: ಇಂದು ಭಾರತ- ಬಾಂಗ್ಲಾದೇಶ ತೃತೀಯ ಏಕದಿನ: ರಾಹುಲ್ ನಾಯಕತ್ವಕ್ಕೆ ದೊಡ್ಡ ಸವಾಲು
India vs Bangladesh 3rd ODI: ಇಂದು ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಅಂತಿಮ ತೃತೀಯ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದ್ದು, ಟೀಮ್ ಇಂಡಿಯಾ ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆಲ್ಲಬೇಕಿದೆ.
ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (India vs Bangladesh) ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೆ, ದ್ವಿತೀಯ ಪಂದ್ಯದಲ್ಲಿ ಬೌಲರ್ಗಳು ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು ನಂತರ ಒಂದು ವಿಕೆಟ್ ಕೀಳಲು ಪರದಾಡಿದರು. ಇದರಿಂದ ಬಾಂಗ್ಲಾ ಸವಾಲಿನ ಮೊತ್ತ ಕಲೆಹಾಕಲು ಕಾರಣವಾಯಿತು. ಇದೀಗ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿರುವ ಬಾಂಗ್ಲಾ ಕ್ಲೀನ್ ಸ್ವೀಪ್ ಎದುರು ನೋಡುತ್ತಿದೆ. ಇಂದು ಚಿತ್ತಗಾಂಗ್ನ (Chattogram) ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಅಂತಿಮ ತೃತೀಯ ಏಕದಿನ ಪಂದ್ಯ ಆಯೋಜನೆ ಮಾಡಲಾಗಿದ್ದು, ಟೀಮ್ ಇಂಡಿಯಾ (Team India) ಕನಿಷ್ಠ ಕೊನೆಯ ಪಂದ್ಯವನ್ನಾದರೂ ಗೆಲ್ಲಬೇಕಿದೆ.
ರೋಹಿತ್ ಅಲಭ್ಯ:
ದ್ವಿತೀಯ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಸ್ಲಿಪ್ ವಿಭಾಗದಲ್ಲಿ ಕ್ಯಾಚ್ ತೆಗೆದುಕೊಳ್ಳುವಾಗ ಎಡಗೈ ಹೆಬ್ಬೆರಳು ಮುರಿದು ಕೊಂಡ ರೋಹಿತ್ ಶರ್ಮಾ ಪಂದ್ಯದ ಬಹುಪಾಲು ಪೆವಿಲಿಯನ್‌ನಲ್ಲೇ ಇದ್ದರು. ಇದೀಗ ಇವರು ತೃತೀಯ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ತಂಡದ ನಾಯಕನ ಜವಾಬ್ದಾರಿ ಉಪ ನಾಯಕನಾಗಿರುವ ಕೆಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ರೋಹಿತ್ ಜೊತೆಗೆ ದೀಪಕ್ ಚಹರ್ ಅವರು ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿನಿ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಇವರು ಕೂಡ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಮೂರನೇ ಏಕದಿನ ಪಂದ್ಯಕ್ಕೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಕುಲ್ದೀಪ್ ಯಾದವ್ ಹೊಸದಾಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.
ಆಟಗಾರರ ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಗಳಿಂದ ಕಂಗೆಟ್ಟಿರುವ ಭಾರತಕ್ಕೆ ಯಾರನ್ನು ತಂಡದಲ್ಲಿ ಆಡಿಸಬೇಕೆಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿಯ ಆರಂಭಕ್ಕೂ ಮುನ್ನ ತಂಡದಲ್ಲಿ 20 ಆಟಗಾರರಿದ್ದರು. ಆದರೆ ಈಗ ಎರಡು ಪಂದ್ಯಗಳ ನಂತರ ಕೇವಲ 14 ಆಟಗಾರರು ಮಾತ್ರ ತಂಡದಲ್ಲಿದ್ದಾರೆ. ಒಂದು ವಾರದೊಳಗೆ ತಂಡದ ಆರು ಆಟಗಾರರು ಗಾಯಗೊಂಡಿರುವುದು ಮ್ಯಾನೇಜ್ಮೆಂಟ್ಗೆ ಕೂಡ ಟೆನ್ಶನ್ ಆಗಿದೆ. ಹೀಗಾಗಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಮೇಲೆ ಹೆಚ್ಚಿನ ಒತ್ತಡವಿದೆ.
IND vs BAN: ಜಡೇಜಾ, ಶಮಿ ಬದಲು ಯುವ ದೇಶೀ ಪ್ರತಿಭೆಗಳಿಗೆ ಮಣೆ ಹಾಕಿದ ಬಿಸಿಸಿಐ
ಇತ್ತ ಬಾಂಗ್ಲಾದೇಶ ಬಲಿಷ್ಠವಾಗುತ್ತಿದೆ. ಟಾಪ್ ಆರ್ಡರ್ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರೂ ಅಂತಿಮ ಹಂತದಲ್ಲಿ ಬಾಂಗ್ಲಾ ಸವಾಲಿನ ಮೊತ್ತ ಕಲೆಹಾಕುತ್ತಿದೆ. ಎರಡೂ ಪಂದ್ಯದಲ್ಲಿ ಭಾರತಕ್ಕೆ ಮೆಹಿದಿ ಹಸನ್ ಮಿರಾಜ್ ಕಂಟಕವಾಗಿ ಪರಿಣಮಿಸಿದ್ದಾರೆ. ಬಾಂಗ್ಲಾ ಬೌಲಿಂಗ್ ಕೂಡ ಮಾರಕವಾಗಿದ್ದು ಭಾರತ ಎಚ್ಚರಿಕೆಯಿಂದ ಆಡಬೇಕಿದೆ.
ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು.
ಉಭಯ ತಂಡಗಳು
ಭಾರತ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಕುಲದೀಪ್ ಯಾದವ್.
ಬಾಂಗ್ಲಾದೇಶ: ಲಿಟನ್ ದಾಸ್ (ನಾಯಕ), ಅನಾಮುಲ್ ಹಕ್ ಬಿಜಯ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಯಾಸಿರ್ ಅಲಿ ಚೌಧರಿ, ಮೆಹದಿ ಹಸನ್ ಮಿರಾಜ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಇಬಾದತ್ ಹುಸೇನ್ ಅಹ್ಮದ್, ನಜ್ಮುಲ್ ಚೌಧರಿ, ನಜ್ಮುಲ್ ಚೌಧರಿ ಶಾಂಟೋ, ಖಾಜಿ ನೂರುಲ್ ಹಸನ್ ಸೋಹನ್, ಶರೀಫುಲ್ ಇಸ್ಲಾಂ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 am, Sat, 10 December 22