IND vs ENG: 6 ವಿಕೆಟ್ ಉರುಳಿಸಲು ಕಾರಣವಾದ ರಹಸ್ಯ ಬಿಚ್ಚಿಟ್ಟ ಬುಮ್ರಾ..!
Jasprit Bumrah: ಮೊದಲ ಇನ್ನಿಂಗ್ಸ್ನಲ್ಲಿ 15.5 ಓವರ್ ಬೌಲ್ ಮಾಡಿದ ಬುಮ್ರಾ 45 ರನ್ ನೀಡಿ 6 ವಿಕೆಟ್ ಪಡೆದರು. ಬುಮ್ರಾ ಅವರ ಈ ಅದ್ಭುತ ಬೌಲಿಂಗ್‌ನ ಆಧಾರದ ಮೇಲೆ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ವಿಶಾಖಪಟ್ಟಣಂ ಮೈದಾನದಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ 6 ವಿಕೆಟ್ ಉರುಳಿಸಿದ ಜಸ್ಪ್ರೀತ್ ಬುಮ್ರಾ (Jasprit Bumrah) ಸದ್ಯ ಕ್ರಿಕೆಟ್ ಲೋಕದ ಸೆನ್ಸೆಷನ್ ಆಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 15.5 ಓವರ್ ಬೌಲ್ ಮಾಡಿದ ಬುಮ್ರಾ 45 ರನ್ ನೀಡಿ 6 ವಿಕೆಟ್ ಪಡೆದರು. ಬುಮ್ರಾ ಅವರ ಈ ಅದ್ಭುತ ಬೌಲಿಂಗ್‌ನ ಆಧಾರದ ಮೇಲೆ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಬುಮ್ರಾ ಕೂಡ ಈ 6 ವಿಕೆಟ್ಗಳೊಂದಿಗೆ ಟೆಸ್ಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಎರಡನೇ ದಿನದ ಆಟದ ಅಂತ್ಯದ ನಂತರ ಮಾತನಾಡಿದ ಬುಮ್ರಾ ತಮ್ಮ ಅದ್ಭುತ ಬೌಲಿಂಗ್‌ನ ಹಿಂದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ರಿವರ್ಸ್ ಸ್ವಿಂಗ್ ಪ್ರಮುಖ ಪಾತ್ರ ವಹಿಸುತ್ತದೆ
ಜಸ್ಪ್ರೀತ್ ಬುಮ್ರಾ ಪಡೆದ 6 ವಿಕೆಟ್‌ಗಳಲ್ಲಿ ಅವರು ಒಲಿ ಪೋಪ್ ಮತ್ತು ಬೆನ್ ಸ್ಟೋಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು. ಬುಮ್ರಾ ಎಂತಹ ಅದ್ಭುತ ಬೌಲರ್ ಎಂಬುದಕ್ಕೆ ಈ ಇಬ್ಬರು ಕ್ಲೀನ್ ಬೌಲ್ಡ್ ಆಗಿದ್ದೆ ಸಾಕ್ಷಿಯಾಗಿದೆ. ಇನ್ನು ದಿನದಾಟ ಮುಗಿದ ನಂತರ ಪ್ರಸಾರಕರೊಂದಿಗೆ ಮಾತನಾಡಿದ ಬುಮ್ರಾ, ‘ಈ ರೀತಿಯ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಪಡೆದರೆ ಯಾವಾಗಲೂ ಸಂತೋಷವಾಗುತ್ತದೆ. ಭಾರತದಲ್ಲಿ ರಿವರ್ಸ್ ಸ್ವಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ಈ ದೇಶದಲ್ಲಿ ಹುಟ್ಟಿರುವ ನೀವು ಇಲ್ಲಿನ ಪರಿಸ್ಥಿತಿಗಳ ಲಾಭವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಭಾರತದಲ್ಲಿ ನೀವು ರಿವರ್ಸ್ ಸ್ವಿಂಗ್ ಮಾಡುವುದು ಹೇಗೆ ಎಂದು ತಿಳಿದಿರಬೇಕು’.
IND vs ENG: ಆಂಗ್ಲ ನಾಯಕನಿಗೆ ಬುಮ್ರಾ ಭಯ..! ಹತಾಶೆಯಲ್ಲಿ ಬ್ಯಾಟ್ ಕೈಬಿಟ್ಟ ಸ್ಟೋಕ್ಸ್; ವಿಡಿಯೋ
‘ನಾನು ನನ್ನ ಬಾಲ್ಯದಿಂದಲೂ ಬೌಲರ್‌ಗಳು ಇಂತಹ ಮ್ಯಾಜಿಕ್ ಬಾಲ್‌ಗಳನ್ನು ಎಸೆಯುತ್ತಿದ್ದಾಗ ನಾನು ಅಂತಹ ಚೆಂಡುಗಳನ್ನು ನೋಡುತ್ತಾ ಬೆಳೆದಿದ್ದೇನೆ. ಇದೀಗ ನನಗೂ ಸಹ ಅವರಂತೆ ಬೌಲಿಂಗ್ ಮಾಡಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ. ನೀವು ಪ್ರತಿ ಚೆಂಡಿನಲ್ಲೂ ರಿವರ್ಸ್ ಸ್ವಿಂಗ್ ಬೌಲ್ ಮಾಡಲು ಪ್ರಯತ್ನಿಸುವ ಸಂದರ್ಭಗಳಲ್ಲಿ ಹೆಚ್ಚಾಗಿ ತಾಳ್ಮೆಯನ್ನು ತೋರಿಸಬೇಕು. ಇದರಿಂದ ನಿಮ್ಮ ಬುದ್ಧಿವಂತಿಕೆಯಿಂದ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಬಹುದು. ನೀವು ಸತತವಾಗಿ ಇನ್ಸ್ವಿಂಗ್ ಅಥವಾ ಔಟ್ಸ್ವಿಂಗ್ ಎಸೆಯಲು ಸಾಧ್ಯವಿಲ್ಲ. ಪೋಪ್‌ನ ವಿಕೆಟ್ ಪಡೆದ ನಂತರ, ಮುಂದಿನ ಬ್ಯಾಟ್ಸ್‌ಮನ್ ಈಗಾಗಲೇ ಇನ್‌ಸ್ವಿಂಗ್ ಯಾರ್ಕರ್‌ಗೆ ಸಿದ್ಧರಾಗುತ್ತಾರೆ ಎಂಬ ಕಲ್ಪನೆ ನನ್ನಲ್ಲಿತ್ತು. ಆದ್ದರಿಂದ ನಾನು ಆ ಚೆಂಡನ್ನು ಇನ್‌ಸ್ವಿಂಗ್ ಮಾಡುವ ಬದಲು ಬೇರೆ ಲೆಂತ್‌ನಲ್ಲಿ ಬೌಲ್ ಮಾಡಿದೆ’ ಎಂದಿದ್ದಾರೆ.
ಬುಮ್ರಾ ಬರೆದ ದಾಖಲೆಗಳಿವು
ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಬುಮ್ರಾ ತಮ್ಮ 150 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು. ಅಲ್ಲದೆ ಅತಿ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಹಾಗೆಯೇ ಟೆಸ್ಟ್‌ನಲ್ಲಿ 150 ವಿಕೆಟ್ ಪಡೆದ ಏಷ್ಯಾದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಹೆಸರು ಅಗ್ರಸ್ಥಾನದಲ್ಲಿದ್ದು, ಅವರು ಕೇವಲ 27 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:37 pm, Sat, 3 February 24