ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ನಾಳೆಯಿಂದ ಅಂದರೆ ಫೆಬ್ರವರಿ 23 ರಿಂದ ರಾಂಚಿಯಲ್ಲಿ (Ranchi) ಆರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಟೀಂ ಇಂಡಿಯಾ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ. ಇತ್ತ ಇಂಗ್ಲೆಂಡ್ ತಂಡವು ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಲು ನೋಡುತ್ತಿದೆ. ಇನ್ನು ರಾಂಚಿ ಮೈದಾನದ ಪಿಚ್ ವಿಚಾರಕ್ಕೆ ಬರುವುದಾದರೆ, ಪಂದ್ಯಕ್ಕೂ ಮುನ್ನ ಪಿಚ್ ಪರಿಶೀಲನೆ ನಡೆಸಿದ ಇಂಗ್ಲೆಂಡ್ ಆಟಗಾರರು ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ನಾಯಕ ಬೆನ್ ಸ್ಟೋಕ್ಸ್ (Ben Stokes) ಇಂತಹ ಪಿಚನ್ನು ಹಿಂದೆಂದೂ ನೋಡಿರಲಿಲ್ಲ ಎಂದರೆ, ಒಲಿ ಪೋಪ್ ಪಿಚ್ ತುಂಬಾ ಸಮತಟ್ಟಾಗಿದೆ. ಹೀಗಾಗಿ ಇದು ಬ್ಯಾಟಿಂಗ್ ವಿಕೆಟ್ನಂತೆ ಕಾಣುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಪಂದ್ಯ ಆರಂಭಕ್ಕೂ ಮುನ್ನ ಆಂಗ್ಲ ಆಟಗಾರರು ಈ ರೀತಿಯಾಗಿ ಹೇಳಿರುವುದು ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
ವಾಸ್ತವವಾಗಿ ಈ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯಗಳನ್ನಾಡಿದ್ದ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇಬ್ಬರೂ ಸಮಾನ ಸಹಾಯ ಪಡೆದಿದ್ದರು. ಆದಾಗ್ಯೂ, ಆಂಗ್ಲ ಆಟಗಾರರು ಈಗ ನೀಡಿರುವ ಮಾಹಿತಿ ಪ್ರಕಾರ ನಾಲ್ಕನೇ ಟೆಸ್ಟ್‌ನಲ್ಲಿ ಪಿಚ್ ಕೊಂಚ ವಿಭಿನ್ನವಾಗಿರಬಹುದು ಎಂದು ತೋರುತ್ತದೆ. ಹಾಗೆಯೇ ಸೋಶೀಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪಿಚ್‌ನ ಚಿತ್ರಗಳು ವಿಕೆಟ್‌ನಲ್ಲಿ ಹಲವು ಬಿರುಕುಗಳು ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಹೀಗಾಗಿ ಎರಡನೇ ಮತ್ತು ಮೂರನೇ ದಿನದ ಅಂತ್ಯದ ವೇಳೆಗೆ ಈ ಪಿಚ್ನಲ್ಲಿ ಸ್ಪಿನ್ನರ್ಗಳು ಸಾಕಷ್ಟು ಸಹಾಯ ಪಡೆಯುವ ಸಾಧ್ಯತೆಗಳಿವೆ ಎಂಬುದು ಆಂಗ್ಲ ಆಟಗಾರರ ಅಭಿಪ್ರಾಯವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ತಾಜಾ ವಿಕೆಟ್‌ನ ಲಾಭ ಪಡೆಯಲು ಉತ್ತಮ ಮಾರ್ಗವಾಗಿದೆ. ಏಕೆಂದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಮಾಡುವುದು ಈ ಪಿಚ್ನಲ್ಲಿ ಅತ್ಯಂತ ಕಷ್ಟಕರವಾಗಿರುತ್ತದೆ.
ಇನ್ನು ರಾಂಚಿಯಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯದ ಐದು ದಿನಗಳ ಹವಾಮಾನದ ಬಗ್ಗೆ ಹೇಳುವುದಾದರೆ, ಅಕ್ಯುವೆದರ್ ವರದಿಯ ಪ್ರಕಾರ, ಫೆಬ್ರವರಿ 23 ರಿಂದ 26 ರವರೆಗೆ ತಾಪಮಾನವು 26 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ. ಈ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಫೆಬ್ರವರಿ 27 ರಂದು ಮಳೆಯಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಟೆಸ್ಟ್ ಪಂದ್ಯ ಐದನೇ ದಿನಕ್ಕೆ ಕಾಲಿಟ್ಟರೆ ಹವಾಮಾನವೂ ಪ್ರಮುಖ ಪಾತ್ರ ವಹಿಸಬಹುದು. ಫೆಬ್ರವರಿ 27 ರಂದು ರಾಂಚಿಯಲ್ಲಿ 28 ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಶೇ.67 ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ