IND vs AFG: ಮೊದಲ ದಿನವೇ 2 ಶತಕ, 2 ಅರ್ಧಶತಕ; ಬೃಹತ್ ಮೊತ್ತದತ್ತ ಟೀಂ ಇಂಡಿಯಾ
India vs Afghanistan Test Day 1: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಲ್ಲನ್‌ಪುರದಲ್ಲಿ ಅಂತ್ಯವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 3 ವಿಕೆಟ್ ನಷ್ಟಕ್ಕೆ 368 ರನ್ ಕಲೆಹಾಕಿದೆ. ಕೆಎಲ್ ರಾಹುಲ್ ಹಾಗೂ ನಾಯಕ ಶುಭ್ಮನ್ ಗಿಲ್ ಭರ್ಜರಿ ಶತಕ ಬಾರಿಸಿದರೆ, ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ ಅರ್ಧಶತಕದ ಕಾಣಿಕೆ ನೀಡಿದರು. ದಿನದಾಟದಂತ್ಯಕ್ಕೆ ಗಿಲ್ (103*) ಹಾಗೂ ಪಂತ್ (50*) ಅಜೇಯರಾಗಿ ಕ್ರೀಸ್‌ನಲ್ಲಿದ್ದಾರೆ, ಭಾರತ ಉತ್ತಮ ಸ್ಥಿತಿಯಲ್ಲಿದೆ.

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯವಾಗಿದೆ. ನ್ಯೂ ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 368 ರನ್ ಕಲೆಹಾಕಿದೆ. ಮೊದಲ ದಿನದಂದು ತಂಡದ ಪರ ಎರಡು ಶತಕಗಳು ಹಾಗೂ ಎರಡು ಅರ್ಧಶತಕಗಳು ದಾಖಲಾಗಿವೆ. ಆರಂಭಿಕ ಕೆಎಲ್ ರಾಹುಲ್ (KL Rahul) ಹಾಗೂ ನಾಯಕ ಶುಭ್ಮನ್ ಗಿಲ್ (Shubman Gill) ಶತಕ ಬಾರಿಸಿದರೆ, ಸಾಯಿ ಸುದರ್ಶನ್ ಹಾಗೂ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ದಿನದಾಟದಂತ್ಯಕ್ಕೆ ನಾಯಕ ಗಿಲ್ 103 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರೆ, ರಿಷಭ್ ಪಂತ್ ಕೂಡ 50 ರನ್ ಬಾರಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶತಕ ಬಾರಿಸಿದ ರಾಹುಲ್
ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 41 ರನ್‌ಗಳ ಜೊತೆಯಾಟ ನೀಡಿದರು. ಆದರೆ ಅಫ್ಘನ್ ಆಟಗಾರರ ಕಳಪೆ ಫಿಲ್ಡಿಂಗ್ ಹಾಗೂ ನಾಯಕ ಮಾಡಿದ ಎಡವಟ್ಟಿನಿಂದ ಆರಂಭಿಕರಿಬ್ಬರಿಗೂ ಜೀವದಾನಗಳು ಸಿಕ್ಕವು. ಈ ಜೀವದಾನವನ್ನು ರಾಹುಲ್ ಸರಿಯಾಗಿ ಬಳಸಿಕೊಂಡರೆ, ಜೈಸ್ವಾಲ್ ಮಾತ್ರ 24 ರನ್ ಬಾರಿಸಿ ಔಟಾದರು. 16 ರನ್ಗಳಿಗೆ ಸಿಕ್ಕ ಜೀವದಾನವನ್ನು ರಾಹುಲ್ ಶತಕವನ್ನಾಗಿ ಪರಿವರ್ತಿಸಿದರು.
ಸುದರ್ಶನ್- ರಾಹುಲ್ ಜೊತೆಯಾಟ
ಜೈಸ್ವಾಲ್ ಔಟಾದ ಬಳಿಕ ಬಂದ ಸಾಯಿ ಸುದರ್ಶನ್ ಕೂಡ ರಾಹುಲ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಎರಡನೇ ವಿಕೆಟ್‌ಗೆ 139 ರನ್‌ಗಳ ನಿರ್ಣಾಯಕ ಪಾಲುದಾರಿಕೆಯನ್ನು ನೀಡಿದ್ದು, ತಂಡಕ್ಕೆ ಭದ್ರ ಬುನಾದಿ ಹಾಕಿತು. ಆದರೆ ಶತಕದಂಚಿನಲ್ಲಿ ಎಡವಿದ ಸುದರ್ಶನ್ 81 ರನ್ ಬಾರಿಸಿ ಔಟಾದರು. ಇತ್ತ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ, 165 ಎಸೆತಗಳಲ್ಲಿ 11 ಬೌಂಡರಿಗಳನ್ನು ಒಳಗೊಂಡಂತೆ 100 ರನ್ ಬಾರಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ 12 ನೇ ಶತಕ ದಾಖಲಿಸಿ ವಿಕೆಟ್ ಒಪ್ಪಿಸಿದರು.
IND vs AFG: 11ನೇ ಟೆಸ್ಟ್ ಶತಕ ಬಾರಿಸಿದ ನಾಯಕ ಶುಭ್ಮನ್ ಗಿಲ್
ಗಿಲ್ ಶತಕ, ಪಂತ್ ಅರ್ಧಶತಕ
ಆ ನಂತರ ನಾಯಕ ಶುಭ್ಮನ್ ಗಿಲ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ನಾಲ್ಕನೇ ವಿಕೆಟ್‌ಗೆ ಅಜೇಯ 121 ರನ್‌ಗಳ ಪಾಲುದಾರಿಕೆಯನ್ನು ನೀಡಿ, ದಿನದ ಅಂತ್ಯದ ವೇಳೆಗೆ ಭಾರತವನ್ನು ಬಲವಾದ ಸ್ಥಿತಿಯಲ್ಲಿರಿಸಿದರು. ನಾಯಕನ ಇನ್ನಿಂಗ್ಸ್ ಆಡಿದ ಗಿಲ್, 143 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 103 ರನ್ ಬಾರಿಸುವ ಮೂಲಕ 11 ನೇ ಟೆಸ್ಟ್ ಶತಕವನ್ನು ಪೂರೈಸಿದರು. ಪಂತ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ, 70 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ, ತಮ್ಮ 19 ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಇತ್ತ ಅಫ್ಘಾನಿಸ್ತಾನದ ಪರ ಮೊಹಮ್ಮದ್ ಸಲೀಮ್ 13 ಓವರ್‌ಗಳಲ್ಲಿ 67 ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು. ಉಳಿದಂತೆ ಜಿಯಾರ್ ರೆಹಮಾನ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Sat, 6 June 26




