
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ಮೂರನೇ ದಿನದಾಟಕ್ಕೆ ಕಾಲಿಟ್ಟಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಿಂದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ವೋಕ್ಸ್ ಹೊರಬಿದ್ದಿದ್ದಾರೆ. 2ನೇ ದಿನದಾಟದ ವೇಳೆ ಫೀಲ್ಡಿಂಗ್ ಮಾಡುವಾಗ ಕ್ರಿಸ್ ವೋಕ್ಸ್ ಅವರ ಭುಜಕ್ಕೆ ಗಾಯವಾಗಿದ್ದು, ಹೀಗಾಗಿ ಅವರು ಪಂದ್ಯದಿಂದ ಹೊರಗುಳಿದಿದ್ದಾರೆ.
ಇತ್ತ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡದ ಕ್ರಿಸ್ ವೋಕ್ಸ್ ದ್ವಿತೀಯ ಇನಿಂಗ್ಸ್ ವೇಳೆ ಬೌಲಿಂಗ್ಗೂ ಅಲಭ್ಯರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 10 ಬ್ಯಾಟರ್ಗಳೊಂದಿಗೆ ಕಣಕ್ಕಿಳಿಯಬೇಕಿರುವುದು ಅನಿವಾರ್ಯ. ಏಕೆಂದರೆ ಕ್ರಿಸ್ ವೋಕ್ಸ್ ಬದಲಿಗೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆಯನ್ನು ಇಂಗ್ಲೆಂಡ್ ತಂಡಕ್ಕೆ ನೀಡಲಾಗಿಲ್ಲ.
ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಇಂತಹದೊಂದು ನಿಯಮ ರೂಪಿಸಿರುವ ಐಸಿಸಿ, ಇತರೆ ಗಂಭೀರ ಗಾಯಗಳಾದ ವೇಳೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆಯನ್ನು ನೀಡಿಲ್ಲ ಎಂಬುದೇ ಅಚ್ಚರಿ.
ಹೀಗಾಗಿಯೇ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಸ್ಪಿನ್ನರ್ ಶೊಯೆಬ್ ಬಶೀರ್ ಅವರ ಕೈಗೆ ಗಂಭೀರ ಗಾಯವಾಗಿದ್ದರೂ, ಪಂದ್ಯದಿಂದ ಹೊರಗುಳಿದಿರಲಿಲ್ಲ. ಅಲ್ಲದೆ ಕೊನೆಯ ದಿನದಾಟದಂದು ಕೈಗೆ ಬ್ಯಾಂಡೇಜ್ ಹಾಕಿ 5.5 ಓವರ್ಗಳನ್ನು ಎಸೆದಿದ್ದರು. ಇಲ್ಲಿ ಬಶೀರ್ ಗಂಭೀರವಾಗಿ ಗಾಯಗೊಂಡಿದ್ದರೂ ಇಂಗ್ಲೆಂಡ್ ತಂಡಕ್ಕೆ ಕನ್ಕ್ಯುಶನ್ ಸಬ್ಸ್ಟಿಟ್ಯೂಟ್ ಆಯ್ಕೆ ಬಳಸಲು ಅವಕಾಶ ನೀಡಿರಲಿಲ್ಲ.
ಇದಕ್ಕೆ ಮುಖ್ಯ ಕಾರಣ ಐಸಿಸಿ ರೂಪಿಸಿರುವ ನಿಯಮ. ಅಂದರೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಕನ್ಕ್ಯುಶನ್ ಸಬ್ ಆಯ್ಕೆ ಮೂಲಕ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಬಹುದು ಎಂದು ತಿಳಿಸಲಾಗಿದೆ. ಇದರ ಹೊರತಾಗಿ ಎಂತಹದ್ದೇ ಗಾಯವಾದರೂ ಹೆಚ್ಚುವರಿ ಫೀಲ್ಡರ್ನನ್ನು ಮಾತ್ರ ಕಣಕ್ಕಿಳಿಸಬಹುದು.
ಅದರಂತೆ ಇದೀಗ ಇಂಗ್ಲೆಂಡ್ ಪರ ಮೂರನೇ ದಿನದಾಟದಲ್ಲಿ 11 ಮಂದಿ ಫೀಲ್ಡಿಂಗ್ಗೆ ಇಳಿದರೂ, ಬ್ಯಾಟಿಂಗ್ ಮಾಡಲು ಕೇವಲ 10 ಮಂದಿಗೆ ಮಾತ್ರ ಇರಲಿದೆ. ಹಾಗೆಯೇ ಬೌಲಿಂಗ್ನಲ್ಲೂ ಓರ್ವನ ಕೊರತೆ ಎದ್ದು ಕಾಣಲಿದೆ. ಏಕೆಂದರೆ ಕ್ರಿಸ್ ವೋಕ್ಸ್ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್. ಇದೀಗ ಅವರಿಲ್ಲದೆ ಕೊನೆಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ಆಡಬೇಕಿದೆ.
ಅತ್ತ ಪ್ರಮುಖ ವೇಗಿ, ಇತ್ತ ಕೆಳ ಕ್ರಮಾಂಕದ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಕ್ರಿಸ್ ವೋಕ್ಸ್ ಅಲಭ್ಯತೆಯ ನಡುವೆ ಇಂಗ್ಲೆಂಡ್ 10 ಮಂದಿಯೊಂದಿಗೆ ಅಂತಿಮ ಪಂದ್ಯವನ್ನು ಗೆಲ್ಲಲಿದೆಯಾ ಕಾದು ನೋಡಬೇಕಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್, ಕ್ರಿಸ್ ವೋಕ್ಸ್ (ಅಲಭ್ಯ).
ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್, ಕರುಣ್ ನಾಯರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ.
Published On - 3:00 pm, Sat, 2 August 25