ಭಾರತ-ಇಂಗ್ಲೆಂಡ್ (India vs England) ನಡುವೆ ಎಡ್ಜ್ಬಾಸ್ಟನ್ನಲ್ಲಿರುವ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯವು ಇದೀಗ ಕುತೂಹಲಘಟ್ಟದತ್ತ ಸಾಗುತ್ತಿದೆ. ಏಕೆಂದರೆ ಮೊದಲ ಇನಿಂಗ್ಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 2ನೇ ಇನಿಂಗ್ಸ್ನಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕಲೆಹಾಕಿದ 416 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡವು 284 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ ಮೊದಲ ಇನಿಂಗ್ಸ್ನ 132 ರನ್ಗಳ ಮುನ್ನಡೆಯೊಂದಿಗೆ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ 245 ರನ್ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ತಂಡವು ಇಂಗ್ಲೆಂಡ್ಗೆ 378 ರನ್ಗಳ ಟಾರ್ಗೆಟ್ ನೀಡಿದೆ. ವಿಶೇಷ ಎಂದರೆ ನಾಲ್ಕನೇ ದಿನದಾಟ ಮೂರನೇ ಸೆಷನ್ ಇನ್ನಷ್ಟೇ ಮುಗಿಯಬೇಕಿದೆ. ಇನ್ನು ಐದನೇ ದಿನದಾಟದ ಕೂಡ ಉಳಿದಿದ್ದು, ಹೀಗಾಗಿ ಇಂಗ್ಲೆಂಡ್ ತಂಡವು ಈ ಬೃಹತ್ ಮೊತ್ತವನ್ನು ಚೇಸ್ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಇಂಗ್ಲೆಂಡ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಮೂರು ಪಂದ್ಯಗಳನ್ನು ಚೇಸಿಂಗ್ ಮಾಡಿ ಗೆದ್ದುಕೊಂಡಿದೆ. ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ 277 ರನ್ಗಳನ್ನು ಚೇಸ್ ಮಾಡಿತ್ತು. ಇನ್ನು ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ 2ನೇ ಪಂದ್ಯವನ್ನು ಚೇಸ್ ಮಾಡಿ ಹೊಸ ದಾಖಲೆ ಬರೆದಿತ್ತು. ಕೊನೆಯ ದಿನದಾಟದಲ್ಲಿ 299 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ 22 ಓವರ್ಗಳು ಬಾಕಿಯಿರುವಂತೆ ಬೆನ್ನತ್ತಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಹಾಗೆಯೇ ಹೆಡಿಂಗ್ಲೆಯಲ್ಲಿ ನಡೆದ ಮೂರನೇ ಪಂದ್ಯವನ್ನೂ ಕೂಡ ಇಂಗ್ಲೆಂಡ್ 296 ರನ್ಗಳ ಗುರಿ ಬೆನ್ನತ್ತಿ ಗೆದ್ದುಕೊಂಡಿತ್ತು.
ಈ ಮೂರು ಪಂದ್ಯಗಳ ಗೆಲುವಿನ ರೂವಾರಿಗಳೆಂದರೆ ಜೋ ರೂಟ್, ಜಾನಿ ಬೈರ್ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್. ಇಲ್ಲಿ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಶತಕ ಸಿಡಿಸಿ ಬೈರ್ಸ್ಟೋವ್ ಟೀಮ್ ಇಂಡಿಯಾ ಬೌಲರ್ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇದೀಗ 2ನೇ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ಗೆ 378 ರನ್ಗಳ ಟಾರ್ಗೆಟ್ ನೀಡಿದೆ. ಇಲ್ಲಿ ಒಂದು ದಿನದಾಟ ಸಂಪೂರ್ಣ ಬಾಕಿಯಿರುವ ಕಾರಣ ಪಂದ್ಯದ ಚಿತ್ರಣ ಬದಲಾಗಲಿದೆಯಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದೆ.
ಏಕೆಂದರೆ ಈ ಹಿಂದೆ ಕೂಡ ಇಂಗ್ಲೆಂಡ್ ತಂಡವು ನಾಲ್ಕನೇ ಇನಿಂಗ್ಸ್ನಲ್ಲಿ 2 ಬಾರಿ 300ಕ್ಕೂ ಅಧಿಕ ರನ್ಗಳನ್ನು ಬೆನ್ನತ್ತಿ ಗೆದ್ದ ಇತಿಹಾಸ ಹೊಂದಿದೆ. 1977 ರಲ್ಲಿ ಭಾರತದ ವಿರುದ್ದ ಇಂಗ್ಲೆಂಡ್ 339 ರನ್ಗಳ ಚೇಸ್ ಮಾಡಿ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಮತ್ತೊಮ್ಮೆ ಐತಿಹಾಸಿಕ ಚೇಸಿಂಗ್ ಗೆಲುವು ದಾಖಲಿಸಿದ್ದು ಆಸ್ಟ್ರೇಲಿಯಾ ವಿರುದ್ದ ಎಂಬುದು ವಿಶೇಷ. ಹೌದು, 2019 ರಲ್ಲಿ ಇಂಗ್ಲೆಂಡ್ ತಂಡವು ಲೀಡ್ಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಇನಿಂಗ್ಸ್ನಲ್ಲಿ ಬರೋಬ್ಬರಿ 359 ರನ್ ಬೆನ್ನತ್ತುವ ಮೂಲಕ ದಾಖಲೆ ಬರೆದಿತ್ತು.
ಇದೀಗ 378 ರನ್ಗಳ ಟಾರ್ಗೆಟ್ ಇಂಗ್ಲೆಂಡ್ ಮುಂದಿದೆ. ಇಲ್ಲಿ ಇಂಗ್ಲೆಂಡ್ ಮುಂದಿರುವುದು ಗೆಲುವಿನ ಆಯ್ಕೆ ಮಾತ್ರ. ಏಕೆಂದರೆ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಸರಣಿ ಟೀಮ್ ಇಂಡಿಯಾ ಪಾಲಾಗಲಿದೆ. ಹೀಗಾಗಿ ಸರಣಿಯನ್ನು ಸಮಬಲಗೊಳಿಸಲು ಇಂಗ್ಲೆಂಡ್ ಗೆಲ್ಲಲೇಬೇಕು. ಏಕೆಂದರೆ ಈ ಸರಣಿಯು ಕಳೆದ ವರ್ಷ ನಡೆದ ಭಾರತ-ಇಂಗ್ಲೆಂಡ್ ನಡುವಣ ಸರಣಿಯ ಕೊನೆಯ ಪಂದ್ಯವಾಗಿದೆ. ಅಂದರೆ 5 ಪಂದ್ಯಗಳ ಸರಣಿಯ ಮೊದಲ 4 ಪಂದ್ಯಗಳು ಈಗಾಗಲೇ ಮುಗಿದಿದೆ. ಇನ್ನು ಐದನೇ ಪಂದ್ಯವನ್ನು ಕೊರೋನಾ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಐದನೇ ಟೆಸ್ಟ್ ಪಂದ್ಯವನ್ನು ಆಡಲಾಗುತ್ತಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಪಂದ್ಯಗಳನ್ನು ಗೆದ್ದಿದ್ರೆ, ಇಂಗ್ಲೆಂಡ್ ಒಂದು ಜಯ ಸಾಧಿಸಿದೆ. ಇನ್ನು ಇಂದು ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಸದ್ಯ ಸರಣಿಯು 2-1 ಅಂತರದಲ್ಲಿದ್ದು, ಹೀಗಾಗಿ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಮಾತ್ರ ಸರಣಿ ಸಮಬಲಗೊಳ್ಳಲಿದೆ. ಹಾಗಾಗಿ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವ ಸಾಧ್ಯತೆ ಹೆಚ್ಚು. ಅದರಂತೆ ಮತ್ತೊಮ್ಮೆ ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.