IND vs ENG: ಔಪಚಾರಿಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ; ಯಾರಿಗೆ ಸಿಗಲಿದೆ ಅವಕಾಶ?
IND vs ENG: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಭಾರತದ ಸಂಭಾವ್ಯ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಷ್‌ದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗುವ ಸಾಧ್ಯತೆ ಇದೆ. ರಮಣದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಅವಕಾಶ ದೊರೆಯಬಹುದು.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 3-1 ಅಂತರದಿಂದ ಮಣಿಸಿ ಸರಣಿಯನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಫೆಬ್ರವರಿ 2 ರಂದು ಅಂದರೆ ಭಾನುವಾರ ನಡೆಯಲ್ಲಿರುವ ಸರಣಿಯ ಐದನೇ ಹಾಗೂ ಕೊನೆಯ ಔಪಚಾರಿಕ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ 4-1 ಅಂತರದಿಂದ ಅಂತ್ಯಗೊಳ್ಳಲಿದೆ. ಅಂದರೆ ಇಂಗ್ಲೆಂಡ್ ತಂಡ ಕೇವಲ 1 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹೀನಾಯ ಪ್ರದರ್ಶನದೊಂದಿಗೆ ಸರಣಿಗೆ ವಿದಾಯ ಹೇಳಲಿದೆ. ಹೀಗಾಗಿ ಮುಜುಗರದಿಂದ ತಪ್ಪಿಸಿಕೊಳ್ಳಲು ಜೋಸ್ ಬಟ್ಲರ್ ಪಡೆ ಶತಾಯಗತಾಯ ಈ ಪಂದ್ಯವನ್ನು ಗೆದ್ದೇ ಗೆಲ್ಲಬೇಕೆಂಬ ಛಲದಿಂದ ಅಖಾಡಕ್ಕಿಳಿಯಲಿದೆ. ಇತ್ತ ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ನಾಳಿನ ಪಂದ್ಯದಲ್ಲಿ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಇಷ್ಟು ದಿನ ಬೆಂಚ್ ಮೇಲೆ ಕಾಲ ಕಳೆದಿದ್ದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಇಡೀ ಸರಣಿಯಲ್ಲಿ ತಂಡಕ್ಕೆ ಒಂದೇ ಒಂದು ಉತ್ತಮ ಆರಂಭ ಸಿಕ್ಕಿಲ್ಲ. ಅಭಿಷೇಕ್ ಶರ್ಮಾ ಕೊಂಚ ಗಮನಾರ್ಹ ಪ್ರದರ್ಶನ ನೀಡಿದರೆ, ಸಂಜು ಸ್ಯಾಮ್ಸನ್ ಮಾತ್ರ ಯಾವುದೇ ಪರಿಣಾಮ ಬೀರಿಲ್ಲ. ಆದಾಗ್ಯೂ ಕೊನೆಯ ಪಂದ್ಯಕ್ಕೆ ಈ ಇಬ್ಬರೇ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಈ ಸ್ಥಾನಕ್ಕೆ ಬದಲಿ ಆಟಗಾರರಾಗಿ ಹೆಚ್ಚಿನ ಆಯ್ಕೆಗಳಿಲ್ಲ. ಮೂರನೇ ಕ್ರಮಾಂಕದಲ್ಲಿ ಎಂದಿನಂತೆ ತಿಲಕ್ ವರ್ಮಾ ಬ್ಯಾಟ್ ಬೀಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯ ಆಡುವುದನ್ನು ಕಾಣಬಹುದು.
ಹಾರ್ದಿಕ್ಗೆ ವಿಶ್ರಾಂತಿ
ಮುಂಬರುವ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಹಾರ್ದಿಕ್ ಬದಲಿಗೆ ರಮಣದೀಪ್ ಸಿಂಗ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ರಿಂಕು ಸಿಂಗ್ ಮತ್ತು ಶಿವಂ ದುಬೆ ಆಡುವ ಹನ್ನೊಂದರ ಬಳಗದಲ್ಲಿ ಆಡುವುದು ಖಚಿತ.
ಅರ್ಷ್‌ದೀಪ್‌ಗೆ ವಿಶ್ರಾಂತಿ
ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ಖಚಿರ. ಆದರೆ ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷ್‌ದೀಪ್‌ಗೆ ವಿಶ್ರಾಂತಿ ಸಿಗಬಹುದು. ಏಕೆಂದರೆ ಮೇಲೆ ಹೇಳಿದಂತೆ ಮುಂಬರುವ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಅರ್ಷದೀಪ್ಗೆ ವಿಶ್ರಾಂತಿ ಸಿಗಬಹುದು. ಹೀಗಾಗಿ ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇವಲ್ಲದೆ, ಹರ್ಷಿತ್ ರಾಣಾ ಕೂಡ ವೇಗದ ಬೌಲಿಂಗ್ ವಿಭಾಗದಲ್ಲಿ ಕಾಣಿಸಿಕೊಳ್ಳಬಹುದು.
ಭಾರತ ಸಂಭಾವ್ಯ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ರಮಣದೀಪ್ ಸಿಂಗ್, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ