IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್

England vs India Second Test: ಲೀಡ್ಸ್‌ನಲ್ಲಿನ ಸೋಲಿನ ನಂತರ, ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುವ ಎರಡನೇ ಟೆಸ್ಟ್‌ಗೆ ಭಾರತ ತಯಾರಿ ನಡೆಸುತ್ತಿದೆ. ಆದರೆ, ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಕಾರಣಗಳೊಂದಿಗೆ ವಿವರಿಸಿದ್ದಾರೆ. ಒಂದು ವೇಳೆ ಬುಮ್ರಾ 2ನೇ ಆಡದಿದ್ದರೆ ತಂಡಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

IND vs ENG: ಗಿಲ್ ಪಡೆಗೆ ಮತ್ತೊಂದು ಆಘಾತ; ಬುಮ್ರಾ 2ನೇ ಟೆಸ್ಟ್ ಆಡುವುದು ಡೌಟ್ ಎಂದ ಮಾಜಿ ಕೋಚ್
Jasprit Bumrah

Updated on: Jun 26, 2025 | 5:38 PM

ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಐದು ಶತಕಗಳನ್ನು ಬಾರಿಸಿಯೂ ಸೋಲಿಗೆ ಶರಣಾಗಿದ್ದ ಟೀಂ ಇಂಡಿಯಾ (Team India) ಇದೀಗ ಎಡ್ಜ್‌ಬಾಸ್ಟನ್​ನಲ್ಲಿ ನಡೆಯಲ್ಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ತನ್ನ ತಯಾರಿ ಆರಂಭಿಸಿದೆ. ಈ ಪಂದ್ಯ ಜುಲೈ 2 ರಿಂದ ಆರಂಭವಾಗಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಗಿಲ್ ಪಡೆಗೆ ಆಘಾತ ಎದುರಾಗಿದ್ದು, ಲೀಡ್ಸ್ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದ ಜಸ್ಪ್ರೀತ್ ಬುಮ್ರಾ (Jasprit Bumrah), ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಲೀಡ್ಸ್ ಟೆಸ್ಟ್​ನಲ್ಲಿ ಭಾರತದ ಸೋಲಿಗೆ ಬುಮ್ರಾ ಹೊರತುಪಡಿಸಿ ಮತ್ತ್ಯಾವ ಬೌಲರ್ ಪರಿಣಾಮಕಾರಿಯಾಗದ್ದು ಪ್ರಮುಖ ಕಾರಣವಾಗಿತ್ತು. ಇದೀಗ 2ನೇ ಟೆಸ್ಟ್​ನಿಂದ ಬುಮ್ರಾ ಹೊರಗುಳಿದರೆ ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ.

3 ಪಂದ್ಯಗಳಲ್ಲಿ ಬುಮ್ರಾ ಕಣಕ್ಕೆ?

ವಾಸ್ತವವಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಜಸ್ಪ್ರೀತ್ ಬುಮ್ರಾ ಎಲ್ಲಾ 5 ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿತ್ತು. ವರದಿಯ ಪ್ರಕಾರ ಬುಮ್ರಾ 3 ಟೆಸ್ಟ್ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ‘ಬುಮ್ರಾ ಯಾವ ಮೂರು ಪಂದ್ಯಗಳನ್ನು ಆಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಂದು ವೇಳೆ ವರದಿ ನಿಜವಾಗಿ ಬುಮ್ರಾ ಕೇವಲ 3 ಪಂದ್ಯಗಳನ್ನು ಆಡುತ್ತಾರೆ ಎಂಬುದಾದರೆ, ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಏಕೆಂದರೆ ಲಾರ್ಡ್ಸ್‌ನಲ್ಲಿ ನಡೆಯಲ್ಲಿರುವ ಮೂರನೇ ಪಂದ್ಯದಲ್ಲಿ ಆಡಲು ಬುಮ್ರಾ ಬಯಸುತ್ತಾರೆ.

ಲಾರ್ಡ್ಸ್​ನಲ್ಲಿ ಬೌಲರ್​ಗಳ ಮೇಲುಗೈ

ಲಾರ್ಡ್ಸ್ ಮೈದಾನ ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಬುಮ್ರಾ ಇಲ್ಲಿ ಚೆನ್ನಾಗಿ ಬೌಲಿಂಗ್ ಮಾಡಬಹುದು, ಆದರೆ ಈ ಪಂದ್ಯಕ್ಕೂ ಮೊದಲು ಅವರಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕಾಗಿದೆ. ಬುಮ್ರಾ ಎಡ್ಜ್‌ಬಾಸ್ಟನ್‌ನಲ್ಲಿ ಆಡಿದರೆ, ಅವರು ಲಾರ್ಡ್ಸ್‌ನಲ್ಲಿ ಆಡಲು ಸಾಧ್ಯವಿಲ್ಲ. ಏಕೆಂದರೆ ಎರಡು ಪಂದ್ಯಗಳ ನಡುವೆ ಕೇವಲ ನಾಲ್ಕು ದಿನಗಳ ಅಂತರವಿದೆ. ಆದಾಗ್ಯೂ ಬುಮ್ರಾರನ್ನು ಯಾವ ಟೆಸ್ಟ್​ನಲ್ಲಿ ಆಡಿಸಬೇಕು, ಯಾವುದರಲ್ಲಿ ಆಡಿಸಬಾರದು ಎಂಬ ನಿರ್ಧಾರವನ್ನು ತಂಡದ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರನ್ನು ಆಡಿಸದಿದ್ದರೆ ಭಾರತ ಆ ಟೆಸ್ಟ್ ಪಂದ್ಯವನ್ನೂ ಸೋಲುವ ಅಪಾಯದಲ್ಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಸಾಕಷ್ಟು ಬೌಲಿಂಗ್ ಮಾಡಿದ್ದಾರೆ. ಈಗ ಅವರಿಗೆ ವಿಶ್ರಾಂತಿ ನೀಡಬೇಕಾಗಿದೆ. ಅಲ್ಲದೆ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ದಾಖಲೆ ತುಂಬಾ ಕಳಪೆಯಾಗಿದೆ. ಹೀಗಾಗಿ 2ನೇ ಟೆಸ್ಟ್​ನಲ್ಲಿ ತಂಡದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

IND vs ENG: ‘ಬೇಸರವಾಯ್ತು, ಹಾಗಂತ…’; ಕ್ಯಾಚ್​ಗಳನ್ನು ಕೈಚೆಲ್ಲಿದ ಬಗ್ಗೆ ಮೌನ ಮುರಿದ ಬುಮ್ರಾ

ಎಡ್ಜ್‌ಬಾಸ್ಟನ್‌ನಲ್ಲಿ ಗೆದ್ದೇ ಇಲ್ಲ

ಎಡ್ಜ್‌ಬಾಸ್ಟನ್‌ನಲ್ಲಿ ಮೊದಲ ಗೆಲುವಿಗಾಗಿ ಟೀಂ ಇಂಡಿಯಾ ವರ್ಷಗಳಿಂದ ಕಾಯುತ್ತಿದೆ. ಏಕೆಂದರೆ ಭಾರತ ತಂಡ ಇಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಮೈದಾನದಲ್ಲಿ ಭಾರತ ತಂಡ ಹಲವು ಬಾರಿ ಗೆಲುವಿನ ಹತ್ತಿರಕ್ಕೆ ಬಂದು ಸೋತಿದೆ ಅಥವಾ ಡ್ರಾ ಮಾಡಿಕೊಂಡಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ ಏಳು ಪಂದ್ಯಗಳನ್ನು ಆಡಿದೆ. ಈ ಪೈಕಿ, ಮೂರು ಬಾರಿ ಇನ್ನಿಂಗ್ಸ್ ಅಂತರದಿಂದ ಸೋತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Thu, 26 June 25