ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಮೂರು ಪಂದ್ಯಗಳಿಗೆ ಟೀಂ ಇಂಡಿಯಾವನ್ನು (India vs England) ಶನಿವಾರ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಮೊದಲ ಎರಡು ಪಂದ್ಯಗಳನ್ನು ಆಡಿದ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಹೊರಗಿಟ್ಟಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ವಾಸ್ತವವಾಗಿ ಎರಡನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಅಯ್ಯರ್, ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಇಡೀ ಟೆಸ್ಟ್ ಸರಣಿಯಿಂದ ಹೊರಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿತ್ತು. ಅದರಂತೆ ಈಗ ಪ್ರಕಟವಾಗಿರುವ ತಂಡದಿಂದ ಅಯ್ಯರ್ ಅವರನ್ನು ಕೈಬಿಡಲಾಗಿದೆ. ಈ ನಡುವೆ ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಯೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದಾರೆ. ಆದರೆ ಇದರ ಹೊರತಾಗಿಯೂ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇಡೀ ಪ್ರವಾಸದಲ್ಲಿ ಅಯ್ಯರ್ ಪ್ರದರ್ಶನ ಸಪ್ಪೆಯಾಗಿತ್ತು. ಅದರಲ್ಲೂ ಅಯ್ಯರ್ ಅವರ ಶಾಟ್ ಸೆಲೆಕ್ಷನ್ ಟೀಮ್ ಮ್ಯಾನೇಜ್ಮೆಂಟ್ ಅಸಮಾಧಾನಗೊಳ್ಳುವಂತೆ ಮಾಡಿದೆ ಎಂಬುದು ವರದಿ. ಹೀಗಾಗಿ ಆಫ್ರಿಕಾ ಪ್ರವಾಸದ ನಂತರ ಅಯ್ಯರ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಈ ನಡುವೆ ಅಯ್ಯರ್ಗೆ ರಣಜಿ ಆಡುವಂತೆ ಸೂಚನೆ ಕೂಡ ನೀಡಲಾಗಿತ್ತು. ಅದರಂತೆ ಅಯ್ಯರ್ ರಣಜಿ ಆಡಿದರೂ ಅವರ ಶಾಟ್ ಆಯ್ಕೆಯಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ.
IND vs ENG: ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್ ಶೋ; ಅಯ್ಯರ್ ಬದಲು ಸರ್ಫರಾಜ್ಗೆ ಸಿಗುತ್ತಾ ಅವಕಾಶ?
ಆನಂತರ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಿಗೆ ಆಯ್ಕೆಯಾಗಿದ್ದ ಅಯ್ಯರ್, ಬೌನ್ಸರ್ ಎಸೆತಗಳನ್ನು ಎದುರಿಸುವಲ್ಲಿ ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂತು. ಇದು ಮಾತ್ರವಲ್ಲದೆ, ಅವರು ಸ್ಪಿನ್ ದಾಳಿಯ ಎದುರು ರನ್ ಕಲೆಹಾಕಲು ಹರಸಾಹಸ ಪಡಬೇಕಾಯ್ತು. ಮೊದಲ ಎರಡು ಟೆಸ್ಟ್‌ಗಳಲ್ಲಿ ಕಳಪೆ ಪ್ರದರ್ಶನದಿಂದಾಗಿ ಅಯ್ಯರ್ ಫಿಟ್ ಇದ್ದರೂ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿಯಾಗಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಅಯ್ಯರ್ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದರು. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಅವರು 35, 13, 27 ಮತ್ತು 29 ರನ್ ಗಳಿಸಿದರು. ಅಯ್ಯರ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
Considered one of India’s best batters against spin, Shreyas Iyer has found it tough recently, and not registered a significant Test score
▶️ https://t.co/nqAO28upK6 pic.twitter.com/Bz7oYDiwPW
— ESPNcricinfo (@ESPNcricinfo) February 10, 2024
ವಿರಾಟ್ ಕೊಹ್ಲಿ ಬದಲಿಗೆ ರಜತ್ ಪಾಟಿದಾರ್ ಮೊದಲ ಟೆಸ್ಟ್‌ಗೆ ತಂಡದಲ್ಲಿ ಅವಕಾಶ ಪಡೆದಿದ್ದರು. ಆ ಬಳಿಕ ಎರಡನೇ ಟೆಸ್ಟ್‌ನಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಎರಡನೇ ಟೆಸ್ಟ್‌ಗೆ ಮೊದಲು ಕೆಎಲ್ ರಾಹುಲ್ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದಾಗ್ಯೂ, ಅವರು ಇನ್ನೂ ತಮ್ಮ ಚೊಚ್ಚಲ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಈ ಇಬ್ಬರೂ ಆಟಗಾರರು ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೂ ತಂಡದ ಭಾಗವಾಗಲಿದ್ದಾರೆ. ಹೀಗಾಗಿ ಅಯ್ಯರ್ ಬದಲು ಸರ್ಫರಾಜ್ ಖಾನ್ಗೆ ಭಾರತ ಟೆಸ್ಟ್ ತಂಡದ ಕದ ತೆರೆಯುವ ಕಾಲ ಸನಿಹವಾಗಿದೆ.
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ