‘ಕಥೆ ಮುಗಿದಿದೆ ಎಂದರ್ಥವಲ್ಲ’.. ಟೀಂ ಇಂಡಿಯಾದಲ್ಲಿ ಕಡೆಗಣನೆ; ಬೇಸರ ಹೊರಹಾಕಿದ ಅನುಭವಿ ವೇಗಿ

|

Updated on: Feb 10, 2024 | 10:42 PM

Umesh Yadav: ಉಮೇಶ್ ಯಾದವ್ 2023 ರಲ್ಲಿ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಉಮೇಶ್ ಯಾದವ್ ಅವರನ್ನು ಟೀಂ ಇಂಡಿಯಾ ನಿರಂತರವಾಗಿ ಕಡೆಗಣಿಸುತ್ತಿದೆ.

‘ಕಥೆ ಮುಗಿದಿದೆ ಎಂದರ್ಥವಲ್ಲ’.. ಟೀಂ ಇಂಡಿಯಾದಲ್ಲಿ ಕಡೆಗಣನೆ; ಬೇಸರ ಹೊರಹಾಕಿದ ಅನುಭವಿ ವೇಗಿ
ಉಮೇಶ್ ಯಾದವ್
Follow us on

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ 3 ಪಂದ್ಯಗಳಿಗೆ ಭಾರತ (India vs England) ತಂಡವನ್ನು ಪ್ರಕಟಿಸಲಾಗಿದೆ. ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆದಿದ್ದು, ಪ್ರಸ್ತುತ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಮುಂಬರುವ ಮೂರು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗಿರುವ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಹೀಗಾಗಿ ರಣಜಿಯಲ್ಲಿ (Ranji Trophy) ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಟೀಂ ಇಂಡಿಯಾ (Team India) ಸೇರಿಕೊಳ್ಳುವ ಇರಾದೆಯಲ್ಲಿದ್ದ ಹಲವು ಆಟಗಾರರಿಗೆ ಮತ್ತೆ ನಿರಾಸೆ ಎದುರಾಗಿದೆ. ಅಂತಹವರಲ್ಲಿ ಪ್ರಮುಖರು ತಂಡದ ವೇಗದ ಬೌಲರ್ ಉಮೇಶ್ ಯಾದವ್ (Umesh Yadav). ಹೀಗಾಗಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗೂಡಾರ್ಥದ ಸಂದೇಶ ಹಂಚಿಕೊಳ್ಳುವ ಮೂಲಕ ಉಮೇಶ್ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಕಥೆ ಮುಗಿದಿದೆ ಎಂದರ್ಥವಲ್ಲ

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಸಮಾಧಾನವನ್ನು ತೊಡಿಕೊಂಡಿರುವ ಉಮೇಶ್, ‘ಪುಸ್ತಕಗಳ ಮೇಲೆ ಧೂಳು ಕುಳಿತ ಮಾತ್ರಕ್ಕೆ ಕಥೆ ಮುಗಿದಿದೆ ಎಂದರ್ಥವಲ್ಲ’ ಎಂದು ಬರೆದುಕೊಂಡಿದ್ದಾರೆ. ಅಂದರೆ ಉಮೇಶ್ ಈ ಸಾಲಿನ ಮೂಲಕ ಟೀಂ ಇಂಡಿಯಾದಲ್ಲಿ ತನ್ನನ್ನು ಕಡೆಗಣನೆ ಮಾಡುತ್ತಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಉಮೇಶ್ ಯಾದವ್ 2023 ರಲ್ಲಿ ಕೆನ್ನಿಂಗ್ಟನ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಅಂದಿನಿಂದ ಉಮೇಶ್ ಯಾದವ್ ಅವರನ್ನು ಟೀಂ ಇಂಡಿಯಾ ನಿರಂತರವಾಗಿ ಕಡೆಗಣಿಸುತ್ತಿದೆ. ಈ ಅವಧಿಯಲ್ಲಿ, ಈ 36 ವರ್ಷದ ವೇಗದ ಬೌಲರ್ ನಿರಂತರವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ ಉಮೇಶ್ ಯಾದವ್​ನತ್ತ ಟೀಂ ಇಂಡಿಯಾ ಆಯ್ಕೆ ಮಂಡಳಿ ದೃಷ್ಟಿ ಆಯಿಸುತ್ತಿಲ್ಲ.

141 ಅಂತಾರಾಷ್ಟ್ರೀಯ ಪಂದ್ಯಗಳು

ಉಮೇಶ್ ಯಾದವ್ ಭಾರತ ಕ್ರಿಕೆಟ್ ತಂಡದ ಅತ್ಯಂತ ಅನುಭವಿ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರು ಎಲ್ಲಾ ಮೂರು ಸ್ವರೂಪಗಳು ಸೇರಿದಂತೆ ಟೀಂ ಇಂಡಿಯಾ ಪರ ಒಟ್ಟು 141 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮೇಶ್ ಟೆಸ್ಟ್ ಕ್ರಿಕೆಟ್‌ನಲ್ಲಿ 57 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು ಒಟ್ಟು 170 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 75 ಏಕದಿನ ಪಂದ್ಯಗಳಲ್ಲಿ 106 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಪಂದ್ಯಗಳಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಕೆಎಸ್ ಭರತ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ