IND vs ENG: ‘ಯುವ ತಂಡದ ಶ್ರೇಷ್ಠ ಸರಣಿ ಗೆಲುವು’; ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಕಿಂಗ್ ಕೊಹ್ಲಿ
Virat Kohli: ಎರಡನೇ ಮಗುವಿಗೆ ತಂದೆಯಾದ ಸಂತಸದಲ್ಲಿರುವ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಯುವಪಡೆಯ ಸಾಧನೆಯನ್ನು ಕೊಂಡಾಡಿದ್ದಾರೆ.
ರಾಂಚಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತ ತಂಡ (India vs England) ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಇದರೊಂದಿಗೆ ಟೀಂ ಇಂಡಿಯಾ (Team India) ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ಗೆದ್ದ ದಾಖಲೆಯನ್ನೂ ನಿರ್ಮಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ಯುವ ಆಟಗಾರರ ಕೊಡುಗೆ ದೊಡ್ಡದು. ಈ ಸರಣಿಯಲ್ಲಿ ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಇರಲಿಲ್ಲ. ಮೊಹಮ್ಮದ್ ಶಮಿ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಆದರೂ ಯಂಗಿಸ್ತಾನ್ ತನ್ನ ಕೈಚಳಕವನ್ನು ತೋರಿಸಿ ಬ್ರಿಟಿಷರನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ತಂಡದ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಕೊಹ್ಲಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ತಂಡದ ಯಶಸ್ಸನ್ನು ಮುಕ್ತ ಕಂಟದಿಂದ ಕೊಂಡಾಡಿದ್ದಾರೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ರೋಹಿತ್ ಪಡೆಯ ಐತಿಹಾಸಿಕ ಗೆಲುವಿನ ನಂತರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಕಿಂಗ್ ಕೊಹ್ಲಿ, ‘ಇದು ನಮ್ಮ ಯುವ ತಂಡದ ಶ್ರೇಷ್ಠ ಸರಣಿ ಗೆಲುವು. ಎಲ್ಲ ಆಟಗಾರರು ತಮ್ಮ ಅಮೋಘ ಪ್ರದರ್ಶನ ತೋರಿ ತಮ್ಮ ದೃಢಸಂಕಲ್ಪದಿಂದ ತಂಡವನ್ನು ಅಮೋಘ ಗೆಲುವಿನತ್ತ ಕೊಂಡೊಯ್ದರು.’ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪೋಸ್ಟ್
YES!!! 🇮🇳 Phenomenal series win by our young team. Showed grit, determination and resilience.@BCCI
— Virat Kohli (@imVkohli) February 26, 2024
ಎರಡನೇ ಮಗುವಿಗೆ ತಂದೆಯಾದ ಕೊಹ್ಲಿ
ಇತ್ತೀಚೆಗಷ್ಟೇ ಫೆಬ್ರವರಿ 15ರಂದು ವಿರಾಟ್ ಕೊಹ್ಲಿ ಎರಡನೇ ಮಗುವಿಗೆ ತಂದೆಯಾದರು. ಈ ಸಂತಸದ ವಿಚಾರವನ್ನು ಫೆಬ್ರವರಿ 20 ರಂದು ಜಗಜ್ಜಾಹೀರು ಮಾಡಿದ್ದ ವಿರಾಟ್, ತಮ್ಮ ಪತ್ನಿ ಅನುಷ್ಕಾ ಶರ್ಮಾ ಮಗನಿಗೆ ಜನ್ಮ ನೀಡಿದ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದರ ಜೊತೆಗೆ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿರುವುದಾಗಿಯೂ ಕೊಹ್ಲಿ ಬರೆದುಕೊಂಡಿದ್ದರು.
ವಿರಾಟ್ ಕೊಹ್ಲಿ ಪೋಸ್ಟ್
— Virat Kohli (@imVkohli) February 20, 2024
ಸರಣಿಯ ಮೊದಲ 4 ಪಂದ್ಯಗಳು ಹೀಗಿದ್ದವು
ಹೈದರಾಬಾದ್ ಟೆಸ್ಟ್ ಮೂಲಕ ಟೆಸ್ಟ್ ಸರಣಿಯನ್ನು ಉಭಯ ತಂಡಗಳು ಆರಂಭಿಸಿದ್ದವು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನೊಂದಿಗೆ ಸರಣಿಯನ್ನು ಆರಂಭಿಸಿತ್ತು. ಆ ಪಂದ್ಯದಲ್ಲಿ ಭಾರತ 200 ರನ್ಗಳ ಮುನ್ನಡೆ ಸಾಧಿಸಿದ್ದರೂ ಪಂದ್ಯವನ್ನು ಸೋತಿತ್ತು. ಆ ನಂತರ ತಂಡದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ ನಂತರ ರೋಹಿತ್ ಬ್ರಿಗೇಡ್ ವಿಶಾಖಪಟ್ಟಣದಲ್ಲಿ ಪ್ರಬಲ ಪುನರಾಗಮನವನ್ನು ಮಾಡಿ ಆಂಗ್ಲರನ್ನು ಬಗ್ಗು ಬಡಿದಿತ್ತು. ನಂತರ ರಾಜ್‌ಕೋಟ್‌ನಲ್ಲೂ ತಂಡ ತ್ರಿವರ್ಣ ಧ್ವಜ ಹಾರಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಇದೀಗ ರಾಂಚಿ ಟೆಸ್ಟ್‌ನಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು ಸರಣಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ.
ಗೆಲುವಿನ ಹೀರೋ ಧ್ರುವ್
ರಾಂಚಿಯಲ್ಲಿ ಟೀಂ ಇಂಡಿಯಾ ಗೆಲುವಿನ ಹೀರೋ ಧ್ರುವ್ ಜುರೆಲ್ ಎಂದರೆ ತಪ್ಪಾಗಲಾರದು. ರಾಂಚಿ ಟೆಸ್ಟ್ಗೂ ಮುನ್ನ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ಇನ್ನಿಂಗ್ಸ್ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರೆ, ರಾಂಚಿಯಲ್ಲಿ ಧ್ರುವ್ ಆಡಿದ ತಾಳ್ಮೆಯ ಇನ್ನಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಕೊಡುಗೆಯಾಯಿತು. ಇದೀಗ ಟೀಂ ಇಂಡಿಯಾ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಸರಣಿಯ ಕೊನೆಯ ಪಂದ್ಯವನ್ನು ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Mon, 26 February 24