Ranji Trophy 2024: ರಾಜಕೀಯ ಹಸ್ತಕ್ಷೇಪ; ಮನನೊಂದು ತಂಡ ತೊರೆದ ಹನುಮ ವಿಹಾರಿ

Hanuma Vihari: ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ರಣಜಿ ಟ್ರೋಫಿಯಲ್ಲಿ ಆಂಧ್ರ ತಂಡದ ಪರ ಆಡುತ್ತಿದ್ದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿ, ತಂಡದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಮನನೊಂದಿರುವ ತಂಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

Ranji Trophy 2024: ರಾಜಕೀಯ ಹಸ್ತಕ್ಷೇಪ; ಮನನೊಂದು ತಂಡ ತೊರೆದ ಹನುಮ ವಿಹಾರಿ
ಹನುಮ ವಿಹಾರಿ
Follow us
ಪೃಥ್ವಿಶಂಕರ
|

Updated on:Feb 26, 2024 | 6:52 PM

ಟೀಂ ಇಂಡಿಯಾದ 2020 ರ ಆಸ್ಟ್ರೇಲಿಯಾ (India vs Australia) ಪ್ರವಾಸ ಯಾರಿಗೆ ತಾನೇ ಮರೆಯಲು ಸಾಧ್ಯ ಹೇಳಿ. ಕಾಂಗರೂಗಳ ನಾಡಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವ ಸಲುವಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಬಲಿಷ್ಠ ಆಸೀಸ್ ಪಡೆಯನ್ನು 2-1 ಅಂತರದಿಂದ ಮಣಿಸಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಸರಣಿಯ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 36 ರನ್​ಗಳಿಗೆ ಆಲೌಟ್ ಆಗಿ ಮುಜುಗರದ ಸೋಲು ಅನುಭವಿಸಿದ್ದ ಭಾರತ ಆ ನಂತರ ಪುಟಿದೆದ್ದು ಸರಣಿ ಗೆದ್ದಿದ್ದು ಇತಿಹಾಸ. ಈ ಸರಣಿ ಎಂದೊಡನೆ ಎಲ್ಲರಿಗೂ ನೆನಪಾಗುವುದು ಗಬ್ಬಾ ಮೈದಾನದಲ್ಲಿ ಏಕಾಂಗಿಯಾಗಿ ನಿಂತು ಟೀಂ ಇಂಡಿಯಾವನ್ನು (Team India) ಗೆಲುವಿಗೆ ಮುನ್ನಡೆಸಿದ್ದ ರಿಷಬ್ ಪಂತ್. ಆದರೆ ಗಬ್ಬಾ ಟೆಸ್ಟ್​ಗೂ ಮುನ್ನ ನಡೆದ ಸಿಡ್ನಿ ಟೆಸ್ಟ್​ನಲ್ಲಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದ ಟೆಸ್ಟ್ ಸ್ಪೆಷಲಿಸ್ಟ್ ಹನುಮ ವಿಹಾರಿಗೂ (Hanuma Vihari) ಈ ಸರಣಿ ಗೆಲುವಿನ ಕ್ರೆಡಿಟ್ ಸಲ್ಲಬೇಕಾಗುತ್ತದೆ. ಇಂಜುರಿಯ ನಡುವೆಯೂ ಆಲ್‌ರೌಂಡರ್ ಅಶ್ವಿನ್ ಜೊತೆ ದಿನವಿಡಿ ಬ್ಯಾಟಿಂಗ್ ಮಾಡಿ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವಂತೆ ಮಾಡಿದ ಶ್ರೇಯ ಹನುಮ ವಿಹಾರಿಗೆ ಸಲ್ಲುತ್ತದೆ.

ತನ್ನ ತಾಳ್ಮೆಯ ಬ್ಯಾಟಿಂಗ್​ನಿಂದಲೇ ವಿಶ್ವ ಕ್ರಿಕೆಟ್​ನ ಹೃದಯ ಗೆದ್ದಿದ್ದ ವಿಹಾರಿ ಆ ನಂತರ ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ವಿಹಾರಿಗೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನವೂ ಸಿಗಲಿಲ್ಲ. ಆದರೂ ದೇಶೀ ಕ್ರಿಕೆಟ್​ನಲ್ಲಿ ತನ್ನ ಸಾಮಥ್ರ್ಯ ಸಾಭೀತುಪಡಿಸುತ್ತಿರುವ ವಿಹಾರಿ, ತನ್ನ ಅದ್ಭುತ ನಾಯಕತ್ವದಿಂದ ಆಂದ್ರ ತಂಡವನ್ನು ರಣಜಿಯಲ್ಲಿ ಯಶಸ್ಸಿನಂತ ಕೊಂಡೊಯ್ದವರು. ಆದರೀಗ ತಂಡದಲ್ಲಿ ರಾಜಕೀಯ ಹಸ್ತಕ್ಷೇಪದಿಂದ ಮನನೊಂದಿರುವ ವಿಹಾರಿ ಆಂಧ್ರ ತಂಡವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು?

ಪ್ರಸ್ತುತ ಭಾರತದಲ್ಲಿ ರಣಜಿ ಟ್ರೋಫಿ ಸೀಸನ್​ ನಡೆಯುತ್ತಿದೆ. ಆರಂಭದಲ್ಲಿ ಆಂಧ್ರ ತಂಡದ ನಾಯಕತ್ವವಹಿಸಿಕೊಂಡಿದ್ದ ಹನುಮ ವಿಹಾರಿ ಅವರನ್ನು ಬಂಗಾಳ ವಿರುದ್ಧದ ಪಂದ್ಯದ ಬಳಿಕ ಏಕಾಏಕಿ ನಾಯಕತ್ವದಿಂದ ತೆಗೆದು ಹಾಕಲಾಯಿತು. ಬಳಿಕ ರಿಕಿ ಭುಯಿಗೆ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಆ ನಂತರವೂ ತಂಡದಲ್ಲಿ ಸಾಮಾನ್ಯ ಆಟಗಾರನಂತೆ ಆಡಿದ್ದ ವಿಹಾರಿ, ಇದೀಗ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ತಂಡ ಮಧ್ಯ ಪ್ರದೇಶ ವಿರುದ್ಧ 4 ರನ್​ಗಳಿಂದ ಸೋತ ಬಳಿಕ ತಂಡದಲ್ಲಿನ ಒಳ ರಾಜಕೀಯದ ಬಗ್ಗೆ ತಮ್ಮ ಅಸಮಾಧನ ಹೊರಹಾಕಿ, ಆಂಧ್ರದ ರಾಜಕಾರಣಿಯ ಬಗ್ಗೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಅಲ್ಲದೆ ಇನ್ನು ಮುಂದೆ ಆಂಧ್ರ ತಂಡದ ಪರ ಆಡದಿರಲು ನಿರ್ಧರಿಸಿದ್ದಾರೆ.

ವಿಹಾರಿ ಪೋಸ್ಟ್​​ನಲ್ಲಿರುವುದೇನು?

ಮಧ್ಯಪ್ರದೇಶ ವಿರುದ್ಧ ತಂಡ ಸೋತ ಬಳಿಕ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಸುದೀರ್ಘ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ವಿಹಾರಿ, ಬಂಗಾಳದ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆ ಪಂದ್ಯದ ಸಮಯದಲ್ಲಿ ನಾನು ತಂಡದ 17 ನೇ ಆಟಗಾರನಿಗೆ ಸ್ವಲ್ಪ ಗದರಿದೆ. ಆ ಆಟಗಾರ ನನ್ನ ಬಗ್ಗೆ ಅವನ ತಂದೆಯ ಬಳಿ ದೂರು ನೀಡಿದ. ಪ್ರತಿಯಾಗಿ ಅವನ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರ ಕ್ರಿಕೆಟ್​ ಮಂಡಳಿಗೆ ಸೂಚನೆ ನೀಡಿದರು. ಬಂಗಾಳದ ವಿರುದ್ಧ ನಾವು 410 ರನ್‌ ಕಲೆಹಾಕಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಸಿದರೂ, ಯಾವುದೇ ತಪ್ಪು ಮಾಡದ ನನಗೆ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಯಿತು. ಎಂದು ಹನುಮ ವಿಹಾರಿ ಆರೋಪಿಸಿದ್ದರು.

ಆರೋಪಿತ ಆಟಗಾರ ಹೇಳುವುದೇನು?

ವಿಹಾರಿ ಈ ರೀತಿ ಪೋಸ್ಟ್ ಹಂಚಿಕೊಂಡ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಆ ಬಳಿಕ ಆರೋಪಿತ ಕ್ರಿಕೆಟಿಗ ಪೃಥ್ವಿ ರಾಜ್, ವಿಹಾರಿ ಆರೋಪಗಳೆಲ್ಲವನ್ನು ಅಲ್ಲಗಳೆದು ಸೋಶಿಯಲ್ ಮೀಡಿಯಾದಲ್ಲಿ ತಾವೂ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, “ಎಲ್ಲರಿಗೂ ನಮಸ್ಕಾರ, ಕಾಮೆಂಟ್ ಬಾಕ್ಸ್‌ನಲ್ಲಿ ನೀವು ಹುಡುಕುತ್ತಿರುವ ಹುಡುಗ ನಾನು. ನೀವು ಓದಿದ್ದು, ಕೇಳಿದ್ದು ಎಲ್ಲವೂ ಸುಳ್ಳು. ಆಟಕ್ಕಿಂತ ಯಾರೂ ದೊಡ್ಡವರಲ್ಲ. ಗೌರವ ಎಲ್ಲಕ್ಕಿಂತ ದೊಡ್ಡದು. ಯಾರನ್ನಾದರೂ ವೈಯಕ್ತಿಕವಾಗಿ ಟೀಕಿಸುವುದು ಮತ್ತು ಅಸಭ್ಯ ಭಾಷೆಯಲ್ಲಿ ಮಾತನಾಡುವುದು ಸೂಕ್ತವಲ್ಲ. ಆ ದಿನ ಏನಾಯಿತು ಎಂಬುದು ತಂಡದ ಪ್ರತಿಯೊಬ್ಬರಿಗೂ ತಿಳಿದಿದೆ. ಇದು ಸಹಾನುಭೂತಿ ಪಡೆಯುವ ಪ್ರಯತ್ನ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Hanuma vihari (@viharigh)

ವಿಹಾರಿ ಪರ ಬ್ಯಾಟ್ ಬೀಸಿದ ಆಟಗಾರರು

ಹನುಮ ವಿಹಾರಿ ತಂಡವನ್ನು ತೊರೆಯುವ ಮಾತುಗಳನ್ನಾಡಿದ ಬಳಿಕ ವಿಹಾರಿ ಪರ ಬ್ಯಾಟ್ ಬೀಸಿರುವ ತಂಡದ ಇತರೆ ಆಟಗಾರರು ರಾಷ್ಟ್ರಪತಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ, ‘ಹನುಮ ವಿಹಾರಿ ಯಾವುದೇ ವೈಯಕ್ತಿಕ ಟೀಕೆ ಮಾಡಿಲ್ಲ. ಇನ್ನುಳಿದ ರಣಜಿ ಪಂದ್ಯಗಳಿಗೂ ಹನುಮ ವಿಹಾರಿ ನಾಯಕತ್ವ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಈ ಪತ್ರಕ್ಕೆ ಆಟಗಾರರು ಸಹಿ ಮಾಡಿದ್ದು ರಾಷ್ಟ್ರಪತಿಗಳಿಗೆ ರವಾನಿಸಿದ್ದಾರೆ. ಈ ಪತ್ರವನ್ನು ಸಹ ಹನುಮ ವಿಹಾರಿ ಅವರೇ ಪೋಸ್ಟ್ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Mon, 26 February 24