
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಬಲಿಷ್ಠ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿ ಫೈನಲ್ಗೇರಿದ್ದ ಟೀಂ ಇಂಡಿಯಾ ಇದೀಗ ಚಾಂಪಿಯನ್ ಪಟ್ಟಕ್ಕೇರಲು, ಇದೇ ಮಾರ್ಚ್ 9 ರಂದು ಮತ್ತೊಮ್ಮೆ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 2019 ರ ನಂತರ ಐಸಿಸಿ ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿರುವುದು ಇದು ನಾಲ್ಕನೇ ಬಾರಿ. ಇದಕ್ಕೂ ಮೊದಲು, ಉಭಯ ತಂಡಗಳು 2019 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್, 2021 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು 2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ನ್ಯೂಜಿಲೆಂಡ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿತ್ತು. ಆದರೆ, ಟೀಂ ಇಂಡಿಯಾ 2023 ರ ಸೆಮಿಫೈನಲ್‌ನಲ್ಲಿ ಕಿವೀಸ್ ತಂಡವನ್ನು ಸೋಲಿಸುವ ಮೂಲಕ ಸೋಲಿಗೆ ಸೇಡು ತೀರಿಸಿಕೊಂಡಿತು.
ಇದೀಗ ಮಾರ್ಚ್ 9 ರಂದು ನಡೆಯುವ ಫೈನಲ್ ಪಂದ್ಯದಲ್ಲೂ ಭಾರತ, ಕಿವೀಸ್ ಪಡೆಯನ್ನು ಸೋಲಿಸಲಿದೆ ಎಂಬ ಭರವಸೆಯನ್ನು ಅಭಿಮಾನಿಗಳು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಭಾರತಕ್ಕೆ ಶುಭ ಸುದ್ದಿ ಎಂಬಂತೆ ಕಿವೀಸ್ ತಂಡದ ಸ್ಟಾರ್ ಬೌಲರ್ ಮ್ಯಾಟ್ ಹೆನ್ರಿ ಫೈನಲ್ ಪಂದ್ಯಕ್ಕೂ ಮುನ್ನ ಇಂಜುರಿಗೊಂಡಿದ್ದರು. ಹೀಗಾಗಿ ಅವರು ಫೈನಲ್ ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಇದು ರೋಹಿತ್ ಪಡೆಗೆ ವರದಾನವಾಗಿತ್ತು. ಆದರೀಗ ಫೈನಲ್ ಪಂದ್ಯಕ್ಕೂ ಮುನ್ನ ಮಾತನಾಡಿರುವ ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್, ಹೆನ್ರಿ ಗಾಯದ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್, ‘ಹೆನ್ರಿ ಪಂದ್ಯಕ್ಕೆ ಫಿಟ್ ಆಗುತ್ತಾರೆ ಎಂಬ ಭರವಸೆ ತಂಡಕ್ಕಿದೆ. ಆದಾಗ್ಯೂ ಹೆನ್ರಿ ಇನ್ನೂ ಭುಜದ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಆಡುವ ಬಗ್ಗೆ ಏನನ್ನು ಹೇಳಲು ಸಾಧ್ಯವಿಲ್ಲ. ಆದಾಗ್ಯೂ, ಹೆನ್ರಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.
ಹೆನ್ರಿ ಟೂರ್ನಿಯಲ್ಲಿ ಇದುವರೆಗೆ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದರಲ್ಲಿ ಗುಂಪು ಹಂತದಲ್ಲಿ ಭಾರತದ ವಿರುದ್ಧ 42ಕ್ಕೆ 5 ವಿಕೆಟ್‌ಗಳು ಸೇರಿವೆ. ಅವರು ಫೈನಲ್‌ಗೆ ಫಿಟ್ ಆಗಲು ಸಾಧ್ಯವಾಗದಿದ್ದರೆ, ಅವರ ಸ್ಥಾನದಲ್ಲಿ ಜಾಕೋಬ್ ಡಫಿ ಅಥವಾ ನಾಥನ್ ಸ್ಮಿತ್ ಅವರನ್ನು ಕಣಕ್ಕಿಳಿಸಬಹುದು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಪಂದ್ಯ ಮಾರ್ಚ್ 9 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ನ್ಯೂಜಿಲೆಂಡ್ ತಂಡ: ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಂ ಒ’ರೂರ್ಕ್, ಜಾಕೋಬ್ ಡಫಿ, ಡೆವೊನ್ ಕಾನ್ವೇ, ಮಾರ್ಕ್ ಚಾಪ್‌ಮನ್, ನಾಥನ್ ಸ್ಮಿತ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Fri, 7 March 25