
2025 ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡುತ್ತಿದೆ. ಎರಡೂ ತಂಡಗಳು ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ತುಂಬಾ ವಿಶೇಷವಾಗಿದೆ. ವಾಸ್ತವವಾಗಿ, ಇದು ಅವರ 300 ನೇ ಏಕದಿನ ಪಂದ್ಯವಾಗಿದೆ. ಆದರೆ ಈ ಪಂದ್ಯದಲ್ಲಿ ಕೊಹ್ಲಿಗೆ ವಿಶೇಷವಾದದ್ದೇನನ್ನೂ ಮಾಡಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್‌ನ ಸ್ಟಾರ್ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಹಿಡಿದ ಅತ್ಯದ್ಭುತ ಫ್ಲೈಯಿಂಗ್ ಕ್ಯಾಚ್ಗೆ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಆರಂಭದಲ್ಲೇ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದ ವಿರಾಟ್ಗೆ ಕಿವೀಸ್ ತಂಡದ ಅಮೊಘ ಫಿಲ್ಡಿಂಗ್ ಶಾಕ್ ನೀಡಿತು. ವಿರಾಟ್ ಕೊಹ್ಲಿಯ ವಿಕೆಟ್ ಅನ್ನು ಮ್ಯಾಟ್ ಹೆನ್ರಿ ಪಡೆದರಾದರೂ ಈ ವಿಕೆಟ್ ಪಡೆಯುವಲ್ಲಿ ಗ್ಲೆನ್ ಫಿಲಿಪ್ಸ್ ಅವರ ಕೊಡುಗೆಯೇ ಪ್ರಮುಖವಾಗಿತ್ತು.
ವಾಸ್ತವವಾಗಿ, ಟೀಂ ಇಂಡಿಯಾ ಇನ್ನಿಂಗ್ಸ್‌ನ 7 ನೇ ಓವರ್ ಅನ್ನು ಮ್ಯಾಟ್ ಹೆನ್ರಿ ಎಸೆದರು. ಈ ಓವರ್‌ನ ನಾಲ್ಕನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಗಾಳಿಯಲ್ಲಿ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ವೇಗದ ಶಾಟ್ ಹೊಡೆದರು. ಚೆಂಡು ಗಾಳಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಗ್ಲೆನ್ ಫಿಲಿಪ್ಸ್ ಕಡೆಗೆ ಹೋಯಿತು. ಕೂಡಲೇ ಫಿಲಿಪ್ಸ್ ಗಾಳಿಯಲ್ಲಿ ಅದ್ಭುತ ಡೈವ್ ಮಾಡಿ ಕ್ಯಾಚ್ ಹಿಡಿದರು. ಫಿಲಿಪ್ಸ್ ಹೀಡಿದ ಈ ಕ್ಯಾಚ್ಗೆ ಇಡೀ ಮೈದಾನವೇ ಧಂಗಾಗಿ ಹೋಯಿತು. ಸ್ವತಃ ಕೊಹ್ಲಿ ಕೂಡ ಅಚ್ಚರಿಯಿಂದ ನೋಡುತ್ತ ನಿಂತರು.
ಇದನ್ನೂ ಓದಿ: IND vs PAK: ‘ಭಾರತ ಸೋಲುತ್ತದೆ, ಕೊಹ್ಲಿ ರನ್ ಬಾರಿಸಲ್ಲ’; ಸುಳ್ಳಾಯ್ತು ಐಐಟಿ ಬಾಬಾ ನುಡಿದಿದ್ದ ಭವಿಷ್ಯ
2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಗ್ಲೆನ್ ಫಿಲಿಪ್ಸ್ ಎರಡನೇ ಬಾರಿಗೆ ಇಂತಹ ಕ್ಯಾಚ್ ಹಿಡಿದಿದ್ದಾರೆ. ಇದಕ್ಕೂ ಮೊದಲು, ಅವರು ಪಾಕಿಸ್ತಾನದ ವಿರುದ್ಧವೂ ಇದೇ ರೀತಿಯ ಕ್ಯಾಚ್ ಹಿಡಿದಿದ್ದರು. ವಿಲಿಯಂ ಓ’ರೂರ್ಕೆ ಅವರ ಚೆಂಡಿನಲ್ಲಿ ಮೊಹಮ್ಮದ್ ರಿಜ್ವಾನ್ ಬ್ಯಾಕ್‌ವರ್ಡ್ ಪಾಯಿಂಟ್ ಕಡೆಗೆ ಶಾಟ್ ಹೊಡೆದರು. ಗ್ಲೆನ್ ಫಿಲಿಪ್ಸ್ ಗಾಳಿಯಲ್ಲಿ ಅದ್ಭುತವಾಗಿ ಡೈವ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಪಡೆದರು. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆ. ವಿಶೇಷವೆಂದರೆ ಗ್ಲೆನ್ ಫಿಲಿಪ್ಸ್ ವಿರಾಟ್ ಕ್ಯಾಚ್ ಅನ್ನು ಕೇವಲ 0.61 ಸೆಕೆಂಡುಗಳಲ್ಲಿ ಹಿಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ