AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀನಾಯ ಅತ್ಯಂತ ಹೀನಾಯ ದಾಖಲೆಗಳನ್ನು ಬರೆದ ಪಾಕಿಸ್ತಾನ್!

ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಸಮರ ಎಂದರೆ ಅಲ್ಲಿ ಹೈ-ವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸುವುದು ಸಹಜ. ಆದರೆ ಮಹಿಳಾ ಏಷ್ಯಾಕಪ್ 2026ರ ಟೂರ್ನಿಯಲ್ಲಿ ಭಾರಿ ಹೈಪ್ ಸೃಷ್ಟಿಸಿದ್ದ ಭಾರತ-ಪಾಕ್ ಪಂದ್ಯವು ಸಂಪೂರ್ಣವಾಗಿ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಈ ಒನ್-ಸೈಡ್ ಗೇಮ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದರೆ, ಪಾಕ್ ಪಡೆ ಅತ್ಯಂತ ಹೀನಾಯ ದಾಖಲೆಗಳನ್ನು ಬರೆದು ಭಾರೀ ಮುಖಭಂಗ ಅನುಭವಿಸಿದೆ.

ಹೀನಾಯ ಅತ್ಯಂತ ಹೀನಾಯ ದಾಖಲೆಗಳನ್ನು ಬರೆದ ಪಾಕಿಸ್ತಾನ್!
ಪಾಕಿಸ್ತಾನ್Image Credit source: GettyImages
ಝಾಹಿರ್ ಯೂಸುಫ್
|

Updated on: Sep 06, 2026 | 7:39 AM

Share

ಮಹಿಳಾ ಏಷ್ಯಾಕಪ್ 2026ರ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಿನ ಹೈ-ವೋಲ್ಟೇಜ್ ಪಂದ್ಯವು ಸಂಪೂರ್ಣ ಏಕಪಕ್ಷೀಯವಾಗಿ ಅಂತ್ಯಗೊಂಡಿದೆ. ಭಾರತದ ಸ್ಪಿನ್ನರ್‌ಗಳ ಸ್ಪಿನ್ ಮೋಡಿಗೆ ತತ್ತರಿಸಿದ ಪಾಕಿಸ್ತಾನ್ ಮಹಿಳಾ ತಂಡ ಕೇವಲ 55 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಮುಖಭಂಗ ಎದುರಿಸಿದೆ.

ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡಕ್ಕೆ ಭಾರತದ ಬೌಲರ್‌ಗಳು ರನ್ ಗಳಿಸಲು ಯಾವುದೇ ಅವಕಾಶ ನೀಡಲಿಲ್ಲ. ಕೇವಲ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಪಾಕ್ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಸುಲಭ ಗುರಿಯನ್ನು ಭಾರತ ತಂಡ ಕೇವಲ 8.4 ಓವರ್‌ಗಳಲ್ಲಿ ಚೇಸ್ ಮಾಡಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ಭಾರತದ ವಿರುದ್ಧದ ಈ ಹೀನಾಯ ಸೋಲಿನೊಂದಿಗೆ, ಪಾಕಿಸ್ತಾನ್ ತಂಡದ ಹೆಸರಿಗೆ ಅತ್ಯಂತ ಮುಜುಗರದ ದಾಖಲೆಗಳ ಸರಮಾಲೆಯೇ ಸೇರ್ಪಡೆಯಾಗಿದೆ. ಆ ಕಳಪೆ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ…

ಅತ್ಯಂತ ಕನಿಷ್ಠ ಮೊತ್ತ: ಇದು ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲೇ ದಾಖಲಾದ ಸಾರ್ವಕಾಲಿಕ ಕನಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2024ರಲ್ಲಿ ದುಬೈನಲ್ಲಿ ನ್ಯೂಝಿಲೆಂಡ್ ವಿರುದ್ಧ ದಾಖಲಿಸಿದ್ದ 56 ರನ್‌ಗಳ ಕಳಪೆ ದಾಖಲೆಯನ್ನು ಪಾಕ್ ತಂಡ ಈ ಪಂದ್ಯದಲ್ಲಿ ಮೀರಿದೆ.

ಅತಿ ಸಣ್ಣ ಸ್ಕೋರ್: ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ್ ತಂಡ ಗಳಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 2012ರ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ 63 ರನ್‌ಗಳಿಗೆ ಆಲೌಟ್ ಆಗಿದ್ದು ಪಾಕ್ ತಂಡದ ಹಿಂದಿನ ಕನಿಷ್ಠ ಸ್ಕೋರ್ ಆಗಿತ್ತು.

6 ವಿಕೆಟ್ ಪತನ: ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಆ ಬಳಿಕ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಪಾಕ್, ಕೇವಲ 8 ರನ್‌ಗಳ ಅಂತರದಲ್ಲಿ ತನ್ನ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡು ಭೀಕರ ಬ್ಯಾಟಿಂಗ್ ಕುಸಿತ ಕಂಡಿತು. ಇನ್ನುಳಿದ 28 ರನ್ ಗಳಿಸುವಷ್ಟರಲ್ಲಿ ಇಡೀ ತಂಡವೇ ಪೆವಿಲಿಯನ್ ಸೇರಿತು. ಹೀಗೆ ಅತೀ ಕಡಿಮೆ ಸ್ಕೋರ್​ ಗಳಿಸುಷ್ಟರಲ್ಲಿ ಪಾಕ್ ತಂಡ 6 ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು.

9 ಬ್ಯಾಟರ್​ಗಳ ಒಂದಂಕಿ: ಪಾಕಿಸ್ತಾನ್ ತಂಡದ ಬ್ಯಾಟಿಂಗ್ ವೈಫಲ್ಯ ಎಷ್ಟು ಭೀಕರವಾಗಿತ್ತೆಂದರೆ, ಆರಂಭಿಕ ಆಟಗಾರ್ತಿಯರಾದ ಶಾವಾಲ್ ಜುಲ್ಫಿಕರ್ (14 ರನ್) ಮತ್ತು ಮುನೀಬಾ ಅಲಿ (13 ರನ್) ಮಾತ್ರ ಎರಡಂಕಿ ರನ್ ಗಳಿಸಿದರು. ಉಳಿದಂತೆ ತಂಡದ 9 ಆಟಗಾರ್ತಿಯರು ಒಂದಂಕಿ ರನ್‌ಗೆ (0, 1, 1, 0, 4, 1, 2, 0, 4) ಔಟ್ ಆಗುವ ಮೂಲಕ ಅತ್ಯಂತ ದಯನೀಯ ಪ್ರದರ್ಶನ ನೀಡಿದರು. ಇದರಲ್ಲಿ ಮೂವರು ಬ್ಯಾಟರ್‌ಗಳು ಶೂನ್ಯಕ್ಕೆ (0) ಔಟ್ ಆಗಿದ್ದಾರೆ.

ಅತಿ ಹೆಚ್ಚು ಎಸೆತಗಳು ಬಾಕಿ: ಭಾರತದ ವಿರುದ್ಧದ ಪಂದ್ಯಗಳಲ್ಲಿ ಅತಿ ಹೆಚ್ಚು ಎಸೆತಗಳು ಅಂದರೆ 68 ಎಸೆತಗಳು ಬಾಕಿ ಇರುವಂತೆಯೇ ಪಾಕಿಸ್ತಾನ್ ಸೋಲೊಪ್ಪಿಕೊಂಡ ಕಳಪೆ ದಾಖಲೆಗೂ ಈ ಪಂದ್ಯ ಸಾಕ್ಷಿಯಾಯಿತು.

ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಒಟ್ಟಾರೆಯಾಗಿ ಹೇಳುವುದಾದರೆ, ಈ ಪಂದ್ಯವು ಪಾಕಿಸ್ತಾನ್ ಮಹಿಳಾ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನಗಳಲ್ಲಿ ಒಂದಾಗಿ ದಾಖಲಾಗಿದೆ. ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಕನಿಷ್ಠ ಹೋರಾಟವನ್ನೂ ನೀಡದೆ 55 ರನ್‌ಗಳಿಗೆ ಶರಣಾದ ಪಾಕ್ ತಂಡ, ಬ್ಯಾಟಿಂಗ್ ಮತ್ತು ತಂತ್ರಗಾರಿಕೆ ಎರಡರಲ್ಲೂ ಸಂಪೂರ್ಣ ವಿಫಲವಾಯಿತು.

ಈ ಭೀಕರ ಬ್ಯಾಟಿಂಗ್ ಕುಸಿತ ಮತ್ತು ದಾಖಲಾದ ಕಳಪೆ ದಾಖಲೆಗಳ ಸರಮಾಲೆ ಪಾಕಿಸ್ತಾನ್ ತಂಡಕ್ಕೆ ದೀರ್ಘಕಾಲದವರೆಗೆ ಮುಜುಗರ ಉಂಟುಮಾಡುವುದು ಖಂಡಿತ. ಮತ್ತೊಂದೆಡೆ, ಭಾರತ ತಂಡವು ಈ ಭರ್ಜರಿ ಪ್ರದರ್ಶನದ ಮೂಲಕ ಏಷ್ಯಾಕಪ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

Follow Us