ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸಲು ಐಸಿಸಿ ಈ ಬಾರಿಯ ಟಿ20 ವಿಶ್ವಕಪ್ (T20 World Cup 2024) ಅನ್ನು ಯುಎಸ್ಎ-ವೆಸ್ಟ್ ಇಂಡೀಸ್ನಲ್ಲಿ ಆಯೋಜಿಸುತ್ತಿದೆ. ಅದರಲ್ಲೂ ವಿಶ್ವದ ಹೈವೋಲ್ಟೇಜ್ ಮುಖಾಮುಖಿ ಎನಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಕದನವನ್ನು ಈ ಬಾರಿ ನ್ಯೂಯಾರ್ಕ್ನಲ್ಲಿ ಆಯೋಜಿಸಲಾಗಿತ್ತು. ಈ ಮಹತ್ವದ ಪಂದ್ಯಕ್ಕೂ ಮುನ್ನ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದ ಯುಟ್ಯೂಬರ್ನನ್ನು ಕರಾಚಿ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ್ದಾನೆ.
ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೂ ಮುನ್ನ ಜನರ ಅಭಿಪ್ರಾಯದ ವ್ಲಾಗ್ ಚಿತ್ರೀಕರಿಸಲು ಸಾದ್ ಅಹ್ಮದ್ ಕರಾಚಿ ನಗರದ ಪ್ರಮುಖ ಮೊಬೈಲ್ ಮಾರುಕಟ್ಟೆಗೆ ಹೋಗಿದ್ದಾರೆ. ಹೀಗೆ ಎಲ್ಲರೊಂದಿಗೆ ಮಾತನಾಡುತ್ತಾ, ಕ್ರಿಕೆಟ್ ವಿಡಿಯೋ ಮಾಡುತ್ತಿದ್ದ ಸಾದ್ಗೆ ಅಲ್ಲಿನ ಭದ್ರತಾ ಸಿಬ್ಬಂದಿ ಎದುರಾಗಿದ್ದಾರೆ.
ಇದೇ ವೇಳೆ ಭದ್ರತಾ ಸಿಬ್ಬಂದಿ ಜೊತೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಈ ವೇಳೆ ವ್ಲಾಗ್ನಲ್ಲಿ ಕಾಣಿಸಿಕೊಳ್ಳಲು ಅವರು ನಿರಾಕರಿಸಿದ್ದಾರೆ. ಇದಾಗ್ಯೂ ಪದೇ ಪದೇ ಪ್ರಶ್ನಿಸಿದಾಗ ಕೋಪಗೊಂಡ ಭದ್ರತಾ ಸಿಬ್ಬಂದಿ ಸಾದ್ ಅಹ್ಮದ್ ಜೊತೆ ವಾಗ್ವಾದಕ್ಕಿಳಿದಿದ್ದರು.
ಈ ವಾಗ್ವಾದ ತಾರಕ್ಕೇರುತ್ತಿದ್ದಂತೆ ಭದ್ರತಾ ಸಿಬ್ಬಂದಿ ತನ್ನ ಗನ್ನಿಂದ ಸಾದ್ ಅಹ್ಮದ್ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಶೂಟ್ ಮಾಡಿದ ತಕ್ಷಣವೇ ಪಾಕ್ ಯುಟ್ಯೂಬರ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಯುಟ್ಯೂಬರ್ನನ್ನು ಹತ್ಯೆ ಮಾಡಿದ ಭದ್ರತಾ ಸಿಬ್ಬಂದಿಯನ್ನು ಈಗಾಗಲೇ ಕರಾಚಿ ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಸಾದ್ ಅಹ್ಮದ್ ಹತ್ಯೆಯು ಪಾಕಿಸ್ತಾನದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಭದ್ರತಾ ಸಿಬ್ಬಂದಿಯ ನಡೆಯ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ನ್ಯೂಯಾರ್ಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಧಿಸುವಂತೆ ದಾಳಿ ಸಂಘಟಿಸಿದ ಪಾಕ್ ಬೌಲರ್ಗಳು ಟೀಮ್ ಇಂಡಿಯಾವನ್ನು 119 ರನ್ಗಳಿಗೆ ಆಲೌಟ್ ಮಾಡಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ 7 ವಿಕೆಟ್ ಕಳೆದುಕೊಂಡು 20 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 113 ರನ್ಗಳು ಮಾತ್ರ. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತು.
ಇದನ್ನೂ ಓದಿ: India vs Pakistan: ಟೀಮ್ ಇಂಡಿಯಾ ಗೆಲುವಿಗೆ ಸಿರಾಜ್ ಕಾರಣ… ಹೇಗೆ ಗೊತ್ತಾ?
ಈ ಗೆಲುವಿನೊಂದಿಗೆ 4 ಅಂಕಗಳನ್ನು ಪಡೆದಿರುವ ಭಾರತ ತಂಡವು ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಯುಎಸ್ಎ ತಂಡ ದ್ವಿತೀಯ ಸ್ಥಾನದಲ್ಲಿದ್ದು, ಪಾಕಿಸ್ತಾನ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ.
Published On - 5:04 pm, Tue, 11 June 24