IND vs PAK: ಗೆಲುವಿನ ಬಳಿಕ ಕಿಂಗ್ ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕುಣಿದ ರೋಹಿತ್; ವಿಡಿಯೋ
T20 World Cup 2022: ಮೈದಾನಕ್ಕೆ ಬಂದ ರೋಹಿತ್, ಕೊಹ್ಲಿಯನ್ನು ತಬ್ಬಿಕೊಂಡು ಪಂದ್ಯ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಇಷ್ಟಕ್ಕೆ ಸುಮ್ಮನಾಗದ ಹಿಟ್ಮ್ಯಾನ್, ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಲ್ಲೇ ಕುಣಿಯಲಾರಂಭಿಸಿದರು.
ಸೂಪರ್ 12 ರ ಸುತ್ತಿನ ತನ್ನ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ, ಪಾಕಿಸ್ತಾನ (India Vs Pakistan) ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ತನ್ನ ಅಭಿಯಾನವನ್ನು ಶುಭಾರಂಭ ಮಾಡಿದೆ. ಮೆಲ್ಬೋರ್ನ್ ಮೈದಾನದಲ್ಲಿ ರನ್ ಮಳೆ ಹರಿಸಿದ ವಿರಾಟ್ ಕೊಹ್ಲಿ (Virat Kohli) ಟೀಂ ಇಂಡಿಯಾಗೆ ಗೆಲುವು ತಂದಿತ್ತಿದಲ್ಲದೆ ಹಳೆ ಸೋಲಿನ ಲೆಕ್ಕವನ್ನು ಚುಪ್ತ ಮಾಡಿದರು. ಅಲ್ಲದೆ ಕೊಹ್ಲಿಯನ್ನು ಏಕೆ ಚೇಸ್ ಕಿಂಗ್ ಎನುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಕೊಹ್ಲಿಯ ಈ ಇನ್ನಿಂಗ್ಸ್ ಕಂಡ ನಾಯಕ ರೋಹಿತ್ ಶರ್ಮಾ ಕೂಡ ಸಂತಸದ ಅಲೆಯಲ್ಲಿ ತೇಲಿದರು. ಅಶ್ವಿನ್ ಗೆಲುವಿನ ರನ್ ಬಾರಿಸಿದ ಬಳಿಕ ಮೈದಾನಕ್ಕೆ ಬಂದ ರೋಹಿತ್, ಕಿಂಗ್ ಕೊಹ್ಲಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಾಚರಣೆ ಮಾಡಿದರು.
ಟಿ20 ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿದ ಬಳಿಕ ಕೊಹ್ಲಿ ಮತ್ತು ರೋಹಿತ್ ನಡುವೆ ಏನೂ ಸರಿ ಇಲ್ಲ ಎಂಬ ಟಾಕ್ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿತ್ತು. ಆದರೆ ಇಂದು ಮೆಲ್ಬೋರ್ನ್ನಲ್ಲಿ ನಡೆದ ಅದೊಂದು ಘಟನೆಯಿಂದ ಎಲ್ಲಾ ಊಹಾಪೋಹಗಳಿಗು ತೆರೆ ಬಿದ್ದಂತ್ತಾಗಿದೆ.
ಇದನ್ನೂ ಓದಿ: IND vs PAK: ಕಿಂಗ್ ಕೊಹ್ಲಿ ವಿರಾಟ ರೂಪ ; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕೊಹ್ಲಿಯನ್ನು ಭುಜದ ಮೇಲೆ ಹೊತ್ತು ಕುಣಿದ ರೋಹಿತ್
ಕೊನೆಯ ಎಸೆತದಲ್ಲಿ ಅಶ್ವಿನ್ ಸಿಂಗಲ್ ಕದಿಯುವಲ್ಲಿ ಯಶಸ್ವಿಯಾದ ಬಳಿಕ ಅಕ್ಷರಶಃ ಗದ್ಗದಿತರಾದ ಕೊಹ್ಲಿ, ತನ್ನ ಕಣ್ಣಾಲಿಗಳಲ್ಲಿ ಆನಂದಬಾಷ್ಪವನ್ನು ತುಂಬಿಕೊಂಡು ತಮ್ಮದೇ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಅದೇ ಸಮಯಕ್ಕೆ ಮೈದಾನಕ್ಕೆ ಬಂದ ರೋಹಿತ್, ಕೊಹ್ಲಿಯನ್ನು ತಬ್ಬಿಕೊಂಡು ಪಂದ್ಯ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಇಷ್ಟಕ್ಕೆ ಸುಮ್ಮನಾಗದ ಹಿಟ್ಮ್ಯಾನ್, ಮಗುವಿನಂತೆ ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೈದಾನದಲ್ಲೇ ಕುಣಿಯಲಾರಂಭಿಸಿದರು. ರೋಹಿತ್ ಅವರ ಈ ಹರ್ಷ ಕಂಡು ಮೈದಾನದಲ್ಲಿ ನೆರೆದಿದ್ದ ಟೀಂ ಇಂಡಿಯಾದ ಅಭಿಮಾನಿಗಳೆಲ್ಲ ಹುಚ್ಚೆದು ಕುಣಿದರು.
Rohit and virat ❤?#indiavspakistan #kholi #ViratKohli #RohitSharma #cricket pic.twitter.com/OFYvLPloJs
— Sidharth 369 (@Sidhart41926581) October 23, 2022
ಕೊನೆಯ ಓವರ್‌ಗಳಲ್ಲಿ ರೋಚಕ ತಿರುವು
ಭಾರತ ತಂಡ ಗೆಲ್ಲಲು 160 ರನ್ ಗಳಿಸಬೇಕಿತ್ತು. ಆದರೆ ಗುರಿ ಬೆನ್ನಟ್ಟಿದ ತಂಡದ ಅಗ್ರ ಮೂರು ಬ್ಯಾಟ್ಸ್‌ಮನ್‌ಗಳು ಕೇವಲ 26 ರನ್‌ಗಳಿಗೆ ತಮ್ಮ ಗಂಟುಮೂಟೆ ಕಟ್ಟಿದ್ದರು. ಆ ಬಳಿಕ ಕ್ರೀಸ್‌ಗೆ ಬಂದ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದಲ್ಲದೆ ಅಜೇಯರಾಗಿ ಉಳಿದರು. ಒತ್ತಡ ತುಂಬಿದ ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ವಿರಾಟ್, 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 82 ರನ್ ಚಚ್ಚಿದರು. ಅದರಲ್ಲೂ ಕೊನೆಯ ಮೂರು ಓವರ್‌ಗಳಲ್ಲಿ ರೌದ್ರಾವತಾರ ತಾಳಿದ ಕೊಹ್ಲಿ ಪಂದ್ಯದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದರು. ಕೊನೆಯ ಹಂತದವರೆಗೂ ಗೆಲುವಿನ ಸಂತಸದಲ್ಲಿದ್ದ ಪಾಕ್ ಪಡೆಗೆ ಕೊಹ್ಲಿ ಶಾಕಿಂಗ್ ಸೋಲಿನ ಆಘಾತ ನೀಡಿದರು.
ಭಾರತಕ್ಕೆ 160 ರನ್‌ಗಳ ಗುರಿ
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಿಗದಿತ 20 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಪಾಕಿಸ್ತಾನ ಪರ ಶಾನ್ ಮಸೂದ್ ಅಜೇಯ 52 ಮತ್ತು ಇಫ್ತಿಕರ್ ಅಹ್ಮದ್ 51 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ