IND vs SA: ರೋಹಿತ್- ಗಿಲ್ ಅಬ್ಬರ; ಮೊದಲ 10 ಓವರ್​ಗಳಲ್ಲಿ 91 ರನ್ ಚಚ್ಚಿದ ಭಾರತ..!

IND vs SA, ICC World Cup 2023: ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ 10 ಓವರ್​ಗಳಲ್ಲೇ ತನ್ನ ಪವರ್ ತೋರಿ ಬರೋಬ್ಬರಿ 91 ರನ್ ಕಲೆಹಾಕಿದೆ. ಈ ಮೂಲಕ ಇತರ ಎದುರಾಳಿ ತಂಡಗಳೆದುರು ಮಾರಕ ಬೌಲಿಂಗ್ ಮೂಲಕ ಅಬ್ಬರಿಸುತ್ತಿದ್ದ ಆಫ್ರಿಕಾ ಬೌಲರ್​ಗಳಿಗೆ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಆರಂಭದಲ್ಲೇ ಕಡಿವಾಣ ಹಾಕಿದ್ದಾರೆ.

IND vs SA: ರೋಹಿತ್- ಗಿಲ್ ಅಬ್ಬರ; ಮೊದಲ 10 ಓವರ್​ಗಳಲ್ಲಿ 91 ರನ್ ಚಚ್ಚಿದ ಭಾರತ..!
ಶುಭ್​ಮನ್ ಗಿಲ್, ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on:Nov 05, 2023 | 3:14 PM

ಏಕದಿನ ವಿಶ್ವಕಪ್‌ನ (ICC World Cup 2023) 37 ನೇ ಪಂದ್ಯದಲ್ಲಿ ಇಂದು ಅಗ್ರ 2 ತಂಡಗಳಾದ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ 10 ಓವರ್​ಗಳಲ್ಲೇ ತನ್ನ ಪವರ್ ತೋರಿ ಬರೋಬ್ಬರಿ 91 ರನ್ ಕಲೆಹಾಕಿದೆ. ಈ ಮೂಲಕ ಇತರ ಎದುರಾಳಿ ತಂಡಗಳೆದುರು ಮಾರಕ ಬೌಲಿಂಗ್ ಮೂಲಕ ಅಬ್ಬರಿಸುತ್ತಿದ್ದ ಆಫ್ರಿಕಾ ಬೌಲರ್​ಗಳಿಗೆ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಶುಭ್​ಮನ್ ಗಿಲ್ (Shubman Gill) ಆರಂಭದಲ್ಲೇ ಕಡಿವಾಣ ಹಾಕಿದ್ದಾರೆ. ಆದರೆ ಆರಂಭಿಕರಿಬ್ಬರ ವಿಕೆಟ್ ಪತನವಾಗಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.

62 ರನ್​ಗಳ ಜೊತೆಯಾಟ

ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್​ಗೆ ಈ ಇಬ್ಬರು 62 ರನ್​ಗಳ ಜೊತೆಯಾಟವನ್ನು ಹಂಚಿಕೊಂಡರು. ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ, ಬೌಂಡರಿ ಮೂಲಕ ತಮ್ಮ ಖಾತೆ ತೆರೆದರು. ಎರಡನೇ ಓವರ್​ನಲ್ಲಿ ದಾಳಿಗಿಳಿದ ಯಾನ್ಸನ್​ಗೂ ಉತ್ತಮ ಆರಂಭ ಸಿಗಲಿಲ್ಲ ಈ ಓವರ್​ನಲ್ಲಿ ಒಟ್ಟು 18 ರನ್ ಬಂದವು.

IND vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳು ಹೀಗಿವೆ

ಮೊದಲ ಓವರ್​ನಿಂದಲೇ ಅಬ್ಬರ

ಇಲ್ಲಿಗೆ ನಿಲ್ಲದ ರೋಹಿತ್ ಹಾಗೂ ಗಿಲ್ ಮೂರನೇ ಓವರ್​ನಲ್ಲೂ 8 ರನ್ ಕಲೆಹಾಕಿದರು. ಹೀಗಾಗಿ ಮೊದಲ ಐದು ಓವರ್​ಗಳಲ್ಲಿ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬರೋಬ್ಬರಿ 61 ರನ್ ಕಲೆಹಾಕಿತು. ಇದರಲ್ಲಿ ನಾಯಕ ರೋಹಿತ್ ಶರ್ಮಾ ಅವರದ್ದೇ ಸಿಂಹಪಾಲು. ಆದರೆ 7ನೇ ಓವರ್​ನಲ್ಲಿ ದಾಳಿಗಿಳಿದ ಕಗಿಸೋ ರಬಾಡ ಟೀಂ ಇಂಡಿಯಾಕ್ಕೆ ಮೊದಲ ಶಾಕ್ ನೀಡಿದರು.

40 ರನ್​ಗಳಿಗೆ ವಿಕೆಟ್ ಒಪ್ಪಿಸಿದ ರೋಹಿತ್

ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 40 ರನ್ ಬಾರಿಸಿದ್ದ ನಾಯಕ ರೋಹಿತ್ ರಬಾಡ ಅವರ ಬೌಲಿಂಗ್​ನಲ್ಲಿ ಬವುಮಾಗೆ ಕ್ಯಾಚಿತ್ತು ಔಟಾದರು. ಈ ಮೂಲಕ ರೋಹಿತ್ ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯವಾಯಿತು. ಆ ಬಳಿಕ ಕೊಹ್ಲಿ ಜೊತೆಯಾದ ಗಿಲ್ ಕೂಡ ತಂಡದ ಮೊತ್ತವನ್ನು ಹೆಚ್ಚಿಸುವ ಬರದಲ್ಲಿ ಕೇಶವ್ ಮಹಾರಾಜ್​ಗೆ ಬಲಿಯಾಗಿದ್ದಾರೆ.

ಕೊಹ್ಲಿ- ಶ್ರೇಯಸ್ ಮೇಲೆ ಜವಬ್ದಾರಿ

ಗಿಲ್ ತಮ್ಮ ಇನ್ನಿಂಗ್ಸ್​ನಲ್ಲಿ 24 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 23 ರನ್ ಸಿಡಿಸಿ ಮಹಾರಾಜ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪ್ರಸ್ತುತ ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ. ಈಗಾಗಲೇ ಭಾರತದ ಇನ್ನಿಂಗ್ಸ್​ನ 15 ಓವರ್​ಗಳು ಮುಗಿದಿವೆ. ಸದ್ಯ ಕೊಹ್ಲಿ ಹಾಗೂ ಶ್ರೇಯಸ್ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sun, 5 November 23