
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಡಿಸೆಂಬರ್ 26 ರಿಂದ ಆರಂಭವಾಗಲಿದೆ. ಮೂರು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯಲಿದೆ. ಈ ಪ್ರವಾಸ ಟೀಂ ಇಂಡಿಯಾಗೆ ಅತ್ಯಂತ ಮಹತ್ವದ್ದಾಗಿದೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಬಾರಿ ಸರಣಿ ಗೆದ್ದು ಇತಿಹಾಸವನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ ವಿರಾಟ್-ಶಾಸ್ತ್ರಿ ಜೋಡಿಯು ಟೀಂ ಇಂಡಿಯಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಯಶಸ್ಸನ್ನು ನೀಡಿದೆ. ಶಾಸ್ತ್ರಿ ಅವರ ತರಬೇತಿಯಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇಂಗ್ಲೆಂಡ್‌ನಲ್ಲಿಯೂ ಟೀಂ ಇಂಡಿಯಾ 4 ಟೆಸ್ಟ್ ಪಂದ್ಯಗಳಲ್ಲಿ 2-1 ಮುನ್ನಡೆ ಸಾಧಿಸಿದೆ.
ಈಗ ಪ್ರಶ್ನೆ ಏನೆಂದರೆ, ದ್ರಾವಿಡ್ ಮತ್ತು ವಿರಾಟ್ ಒಟ್ಟಿಗೆ ಅದೇ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆಯೇ? ಎಂಬುದು. ದಕ್ಷಿಣ ಆಫ್ರಿಕಾ ಪ್ರವಾಸವು ಕೇವಲ ಆಟಗಾರರಷ್ಟೇ ಅಲ್ಲದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೂ ಅಗ್ನಿ ಪರೀಕ್ಷೆಯಾಗಲಿದೆ. ಹೀಗಾಗಿ ಹರಿಣಗಳ ನಾಡಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಎದುರುಗಿರುವ 5 ಸಮಸ್ಯೆಗಳೇನು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ವಿವಾದಗಳ ನಂತರ ತಂಡದ ನೈತಿಕತೆಯನ್ನು ಹೆಚ್ಚಿಸುವುದು ಅವಶ್ಯಕ
ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಬಿಸಿಸಿಐ ವಿರುದ್ಧ ನೀಡಿರುವ ಹೇಳಿಕೆಗಳು ತಂಡದ ಮೇಲೆ ಪರಿಣಾಮ ಬೀರಿರುವುದು ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ಹೇಳಿಕೆ ಬಿಸಿಸಿಐಗೆ ನೇರವಾಗಿ ಸವಾಲು ಹಾಕಲು ಹೊರಟಿದ್ದು, ಇಂತಹ ಪರಿಸ್ಥಿತಿಯಲ್ಲಿ ಟೆಸ್ಟ್ ನಾಯಕ ತಮ್ಮ ಆಟದ ಹೊರತಾಗಿ ಬೇರೆ ವಿಚಾರಗಳ ಬಗ್ಗೆ ಯೋಚಿಸುತ್ತಿರುವುದು ನಿಜ. ಹೀಗಾಗಿ ನಾಯಕ ಯಾವುದಾದರೂ ವಿವಾದದಲ್ಲಿ ಸಿಕ್ಕಿಬಿದ್ದರೆ ಅದರ ಪರಿಣಾಮ ತಂಡದ ಆಟಗಾರರ ಮೇಲೂ ಕಾಣಿಸುತ್ತದೆ. ಆದ್ದರಿಂದ ರಾಹುಲ್ ದ್ರಾವಿಡ್ ಟೆಸ್ಟ್ ಸರಣಿಯಲ್ಲಿ ತಂಡದ ಗಮನವನ್ನು ಸಂಪೂರ್ಣವಾಗಿ ಆಟದ ಮೇಲೆ ಇರಿಸಬೇಕಾಗಿದೆ.
ದುರ್ಬಲ ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದ ಅತ್ಯಂತ ಕಳಪೆ ಫಾರ್ಮ್‌ನೊಂದಿಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ತಲುಪಿದೆ. ಪೂಜಾರ ಫಾರ್ಮ್ನಲ್ಲಿಲ್ಲ ಮತ್ತು ರಹಾನೆ ಬ್ಯಾಟ್ ರನ್ ಗಳಿಸಲು ಮರೆತಿದೆ. ನೆಗೆಟಿವಿಟಿಯಿಂದ ತೊಳಲಾಡುತ್ತಿರುವ ಪೂಜಾರ-ರಹಾನೆ ಅವರನ್ನು ಹೇಗೆ ಪಾಸಿಟಿವ್ ಮಾಡಿ ಮತ್ತೆ ಫಾರ್ಮ್ಗೆ ತರುತ್ತಾರೆ ಎಂಬುದು ರಾಹುಲ್ ದ್ರಾವಿಡ್ಗೆ ಸವಾಲಾಗಿದೆ.
ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್
ವಿರಾಟ್ ಕೊಹ್ಲಿ 2 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಸಿಡಿಸದೇ ಇರುವುದು ಟೀಂ ಇಂಡಿಯಾಗೆ ತುಂಬಾ ಗಂಭೀರವಾದ ವಿಷಯವಾಗಿದೆ. ವಿರಾಟ್ ರನ್ ಗಳಿಸಿದರೆ ಟೀಂ ಇಂಡಿಯಾ ಗೆಲುವಿನ ಸಾಧ್ಯತೆ ಹೆಚ್ಚುತ್ತದೆ ಮತ್ತು ಇಡೀ ತಂಡ ವಿಭಿನ್ನ ಶೈಲಿಯಲ್ಲಿ ಆಡುತ್ತದೆ. ಇದು ರಾಹುಲ್ ದ್ರಾವಿಡ್ ಅವರಿಗೂ ಗೊತ್ತಿದ್ದು, ಪ್ರವಾಸಕ್ಕೂ ಮುನ್ನ ವಿರಾಟ್ ಬ್ಯಾಟಿಂಗ್ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ವಿರಾಟ್ ಕೊಹ್ಲಿಯನ್ನು ಆದಷ್ಟು ಬೇಗ ಫಾರ್ಮ್ಗೆ ತರುವುದು ದ್ರಾವಿಡ್ಗೆ ದೊಡ್ಡ ಸವಾಲಾಗಿದೆ.
ಆಡುವ XI ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ
ರಹಾನೆ-ಪೂಜಾರ ಫಾರ್ಮ್ನಲ್ಲಿಲ್ಲ, ಮೊದಲ ಟೆಸ್ಟ್ ಪಂದ್ಯದಲ್ಲೂ ಅವರು ಫ್ಲಾಪ್ ಎಂದು ಸಾಬೀತಾದರೆ ಟೀಂ ಇಂಡಿಯಾ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಏಕೆಂದರೆ ಒಂದು ತಪ್ಪು ನಡೆಯು ಟೆಸ್ಟ್ ಸರಣಿ ಗೆಲ್ಲುವ ಭರವಸೆಯನ್ನು ಹಾಳುಮಾಡುತ್ತದೆ.
ರೋಹಿತ್ ಇಲ್ಲದ ಸರಣಿ ಗೆಲ್ಲಲೇಬೇಕು
ರೋಹಿತ್ ಶರ್ಮಾ ಇಲ್ಲದೆ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದೆ. ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ, ರೋಹಿತ್ ಅವರ ಬ್ಯಾಟ್ ಭಾರತಕ್ಕಾಗಿ ಹೆಚ್ಚು ರನ್ ಗಳಿಸಿತ್ತು. ಆದರೆ ಸರಣಿಗೂ ಮೊದಲು ರೋಹಿತ್ ಗಾಯಗೊಂಡರು. ರೋಹಿತ್ ಅನುಪಸ್ಥಿತಿಯಲ್ಲಿ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದನ್ನು ನೋಡುವುದು ದ್ರಾವಿಡ್ ಅವರ ಕೆಲಸವಾಗಿದೆ.
ಇದನ್ನೂ ಓದಿ:IND vs SA: ವಿರಾಟ್ ಶತಕದ ಬರ ನೀಗಲಿದೆ; ಕಿಂಗ್ ಕೊಹ್ಲಿಗೆ ಬ್ಯಾಟಿಂಗ್ ಪಾಠ ಮಾಡಿದ ಗುರು ದ್ರಾವಿಡ್