ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಇಬ್ಬರು ಬ್ಯಾಟ್ಸ್ಮನ್ಗಳ ಬ್ಯಾಟ್ ಶತಕದ ಇನ್ನಿಂಗ್ಸ್ ಆಡಿದೆ. ಕಳೆದ ಪಂದ್ಯದ ಹೀರೋ ಆಗಿದ್ದ ತಿಲಕ್ ವರ್ಮಾ ತಮ್ಮ ಅಮೋಘ ಫಾರ್ಮ್ ಮುಂದುವರಿಸಿ ಈ ಪಂದ್ಯದಲ್ಲೂ ಶತಕ ಸಿಡಿಸಿದರೆ, ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಸಂಜು ಕೂಡ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಸರಣಿಯಲ್ಲಿ ಬ್ಯಾಟಿಂಗ್ ಮುಂಬಡ್ತಿ ಪಡೆದಿರುವ ತಿಲಕ್ ವರ್ಮಾ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ಸತತ ಎರಡನೇ ಶತಕ ಸಿಡಿಸಿದ್ದಾರೆ. ಕಳೆದ ಪಂದ್ಯದಲ್ಲಿ 51 ಎಸೆತಗಳಲ್ಲಿ ಶತಕ ಪೂರೈಸಿದ್ದ ತಿಲಕ್, ಈ ಪಂದ್ಯದಲ್ಲಿ ಇನ್ನು 10 ಎಸೆತಗಳನ್ನು ಕಡಿಮೆ ತೆಗೆದುಕೊಂಡು ಶತಕ ಪೂರ್ಣಗೊಳಿಸಿದರು.
ಜೋಹಾನ್ಸ್‌ಬರ್ಗ್‌ನಲ್ಲಿ ತಿಲಕ್ ವರ್ಮಾ ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದರು. ಪಂದ್ಯದಲ್ಲಿ ಒಟ್ಟು 47 ಎಸೆತಗಳನ್ನು ಎದುರಿಸಿದ ಅವರು ಅಜೇಯ 120 ರನ್ ಗಳಿಸಿದರು. 255.31 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ತಿಲಕ್ ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 10 ಸಿಕ್ಸರ್‌ಗಳು ಸೇರಿದ್ದವು. ಈ ಇನ್ನಿಂಗ್ಸ್ ಮೂಲಕ ತಿಲಕ್ ವರ್ಮಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ. ಸತತ ಎರಡು ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್ ಈ ಸಾಧನೆ ಮಾಡಿದ್ದರು. ಅದೇ ಸಮಯದಲ್ಲಿ, ಅವರು ಈ ದಾಖಲೆಯನ್ನು ಮಾಡಿದ ವಿಶ್ವದ 5 ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು, ಫಿಲ್ ಸಾಲ್ಟ್, ಗುಸ್ಟಾವ್ ಮ್ಯಾಕನ್ ಮತ್ತು ರಿಲೆ ರೂಸೋ ಕೂಡ ಟಿ20ಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ.
ಈ ಇನ್ನಿಂಗ್ಸ್‌ನಲ್ಲಿ ತಿಲಕ್ ವರ್ಮಾ ಅಲ್ಲದೆ ಸಂಜು ಸ್ಯಾಮ್ಸನ್ ಕೂಡ ಶತಕ ಸಿಡಿಸಿದರು. ಇವರಿಬ್ಬರ ಬಲಿಷ್ಠ ಬ್ಯಾಟಿಂಗ್‌ನಿಂದಾಗಿ ಭಾರತ ತಂಡ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು. ಇದು ಟಿ20 ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಗರಿಷ್ಠ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 109 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ ಕೂಡ 18 ಎಸೆತಗಳಲ್ಲಿ 36 ರನ್ ಕೊಡುಗೆ ನೀಡಿದರು. ದಕ್ಷಿಣ ಆಫ್ರಿಕಾ ಪರ ಲುಥೋ ಸಿಪಾಮ್ಲಾ ಮಾತ್ರ ಏಕೈಕ ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ