ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು (India vs Srilanka) ಪ್ರಕಟಿಸಲಾಗಿದೆ. ಈ ತವರು ಸರಣಿಯಿಂದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ (Rohit Sharma , Virat Kohli) ವಿಶ್ರಾಂತಿ ನೀಡಲಾಗಿದೆ. ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡ ಶ್ರೀಲಂಕಾ ವಿರುದ್ಧ ಮೈದಾನಕ್ಕಿಳಿಯಲಿದೆ. ಅಲ್ಲದೆ ಈ ಸರಣಿಯಲ್ಲಿ ಅನುಭವಿ ಬ್ಯಾಟರ್ಗಳ ಜೊತೆಗೆ ಅನುಭವಿ ಬೌಲರ್ಗಳು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಅದರಲ್ಲಿ ಪ್ರಮುಖ ಎರಡು ಹೆಸರುಗಳೆಂದರೆ, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ (Shivam Mavi, Mukesh Kumar). ಅದರಲ್ಲೂ ಕಳೆದ 5 ದಿನಗಳಿಂದ ಕ್ರಿಕೆಟ್ ಲೋಕದಲ್ಲಿ ಸಖತ್ ಸಂಚಲನ ಮೂಡಿಸುತ್ತಿರುವ ಮುಖೇಶ್ ಕುಮಾರ್ ಒಂದರ ಮೇಲೊಂದು ಸಿಹಿ ಸುದ್ದಿ ಪಡೆಯುತ್ತಿದ್ದಾರೆ.
ಸರಿಯಾಗಿ 5 ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನಲ್ಲಿ ಕೋಟಿ ಕೋಟಿಗೆ ದೆಹಲಿ ಸೇರಿಕೊಂಡಿದ್ದ ಮುಖೇಶ್‌ಗೆ ಇದೀಗ ಟೀಂ ಇಂಡಿಯಾಕ್ಕೆ ಎಂಟ್ರಿ ಸಿಕ್ಕಿದೆ. ಇದೇ 23 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಮುಖೇಶ್‌ಗೆ ಭಾರಿ ಬೇಡಿಕೆ ಕಂಡು ಬಂದಿತ್ತು. ಬಹುತೇಕ ಎಲ್ಲಾ ಫ್ರಾಂಚೈಸಿಗಳು ಈ ಆಟಗಾರನ ಖರೀದಿಗಾಗಿ ಮುಗಿಬಿದ್ದಿದ್ದವು. 20 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿಗಿಳಿದಿದ್ದ ಮುಖೇಶ್ ಅವರನ್ನು ಬರೋಬ್ಬರಿ 5.50 ಕೋಟಿ ರೂ.ನೀಡಿ ದೆಹಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು.
IND vs SL: ಟೀಂ ಇಂಡಿಯಾದಿಂದ ರಿಷಬ್ ಪಂತ್ ಹೊರಬಿದ್ದಿದ್ಯಾಕೆ? ಇಲ್ಲಿದೆ ಶಾಕಿಂಗ್ ನ್ಯೂಸ್
ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಮಾರಾಟವಾಗದೇ ಉಳಿದಿದ್ದ ಮುಖೇಶ್‌ಗೆ ಒಂದೇ ವರ್ಷದಲ್ಲಿ ತನ್ನ ಬದುಕು ಈ ರೀತಿಯ ಟರ್ನಿಂಗ್ ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎನಿಸುತ್ತದೆ. ಐಪಿಎಲ್‌ನಲ್ಲಿ ಕೋಟಿಗೆ ಹರಾಜಾದ ಸಂಭ್ರಮದಲ್ಲಿರುವ ಮುಖೇಶ್‌ಗೆ ಬಿಸಿಸಿಐ ಪಾಳಯದಿಂದ ಮತ್ತೊಂದು ಸಂತಸ ಸುದ್ದಿ ಸಿಕ್ಕಿದೆ. 29ರ ಹರೆಯದ ಮುಕೇಶ್‌ರನ್ನು ಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.
#TeamIndia squad for three-match T20I series against Sri Lanka.#INDvSL @mastercardindia pic.twitter.com/iXNqsMkL0Q
— BCCI (@BCCI) December 27, 2022
ಬಿಹಾರದಲ್ಲಿ ಜನಿಸಿದ ಮುಖೇಶ್ ಬಂಗಾಳ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಕ್ರಿಕೆಟ್ನಲ್ಲಿ ತನ್ನ ಬದುಕನ್ನು ಕಂಡುಕೊಳ್ಳುವ ಮುನ್ನ ಸೇನಾ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದ ಮುಖೇಶ್ ನೌಕರಿ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ ಕಠಿಣ ಶ್ರಮದಿಂದ ಕ್ರಿಕೆಟ್ನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿರುವ ಮುಕೇಶ್ ಅವರ ತಂದೆ ವೃತ್ತಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ಬಂಗಾಳದ ಎರಡನೇ ದರ್ಜೆಯ ಕ್ಲಬ್‌ಗೆ ಸೇರುವ ಮೂಲಕ ಕ್ರಿಕೆಟ್ ಆಡಲು ಪ್ರಾರಂಭಿಸಿದ ಮುಖೇಶ್, ಸತತ ಪರಿಶ್ರಮದ ಆಧಾರದ ಮೇಲೆ 2015ರಲ್ಲಿ ಬಂಗಾಳದ ರಣಜಿ ತಂಡಕ್ಕೂ ಆಯ್ಕೆಯಾದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 33 ಪಂದ್ಯಗಳನ್ನಾಡಿರುವ ಮುಖೇಶ್, 123 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಲಿಸ್ಟ್ ಎ ನಲ್ಲಿ 26 ವಿಕೆಟ್ ಹಾಗೂ ಟಿ20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:21 am, Wed, 28 December 22