IND vs SL: 3 ವರ್ಷಗಳಲ್ಲಿ ಎರಡನೇ ಸಲ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಟೀಂ ಇಂಡಿಯಾದ ತ್ರಿಮೂರ್ತಿಗಳು..!
IND vs SL: 14 ಜುಲೈ 2022 ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಮೂವರೂ ಕೊನೆಯ ಬಾರಿ ಒಟ್ಟಿಗೆ ಆಡಿದ್ದರು.
ಭಾರತ ಮತ್ತು ಶ್ರೀಲಂಕಾ (India Vs Sri Lanka) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಅಂತ್ಯಗೊಂಡಿದ್ದು, ಉಭಯ ದೇಶಗಳ ನಡುವಿನ ಏಕದಿನ ಸರಣಿ ಜನವರಿ 10 ರಿಂದ ಆರಂಭವಾಗಲಿದೆ. ಏಕದಿನ ಸರಣಿಯೂ 3 ಪಂದ್ಯಗಳನ್ನು ಒಳಗೊಂಡಿದ್ದು, ಈ ಸರಣಿಯೊಂದಿಗೆ ಟೀಂ ಇಂಡಿಯಾ (Team India) ಈ ವರ್ಷ ನಡೆಯಲ್ಲಿರುವ ಏಕದಿನ ವಿಶ್ವಕಪ್ನ ತಯಾರಿ ಆರಂಭಿಸಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ 3 ವರ್ಷಗಳಲ್ಲಿ ಎರಡನೇ ಬಾರಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ (Rohit Sharma , Virat Kohli and Jasprit Bumrah) ಒಟ್ಟಿಗೆ ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. ಈ ಮೂವರು ಆಟಗಾರರು ಒಂದಿಲ್ಲೊಂದು ಕಾರಣದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಒಟ್ಟಾಗಿ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಆದರೆ ಲಂಕಾ ವಿರುದ್ಧದ ಸರಣಿಯಲ್ಲಿ ಈ ಮೂವರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
14 ಜುಲೈ 2022 ರಂದು ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಮೂವರೂ ಕೊನೆಯ ಬಾರಿ ಒಟ್ಟಿಗೆ ಆಡಿದ್ದರು. ಅದಕ್ಕೂ ಮೊದಲು, 2020 ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯಲ್ಲಿ ಮೂವರು ಒಟ್ಟಿಗೆ ಆಡಿದ್ದರು. ಅದರಲ್ಲೂ ಈ ಪಂದ್ಯದ ವಿಶೇಷವೆನೆಂದರೆ, 2019ರ ಸೆಪ್ಟೆಂಬರ್ನಲ್ಲಿ ಇಂಜುರಿಗೆ ತುತ್ತಾಗಿದ್ದ ಬುಮ್ರಾ ಕೆಲವು ತಿಂಗಳುಗಳ ಕಾಲ ಟೀಂ ಇಂಡಿಯಾದಿಂದ ಹೊರಗಿದ್ದರು. ಆದರೆ 2020 ರಲ್ಲಿ ಮತ್ತೆ ತಂಡಕ್ಕೆ ಮರಳಿದ್ದ ಬುಮ್ರಾ, ಕೊಹ್ಲಿ ಹಾಗೂ ರೋಹಿತ್ ಜೊತೆಗೂಡಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನಾಡಿದ್ದರು.
IND vs SL: ಬಾಲ್ ಅಲ್ಲ, ಬುಲೆಟ್; ಉಮ್ರಾನ್ ಬೆಂಕಿ ಚೆಂಡಿಗೆ ಮೀಟರ್ ದೂರ ಹಾರಿದ ಸ್ಟಂಪ್! ವಿಡಿಯೋ ನೋಡಿ
ಸತತ ಇಂಜುರಿಗೆ ತುತ್ತಾಗಿದ್ದ ಬುಮ್ರಾ
ಅದೊಂದು ಪಂದ್ಯವನ್ನಾಡಿದ ಬಳಿಕ ಮತ್ತೆ ಇಂಜುರಿಗೊಳಗಾದ ಬುಮ್ರಾ ಅವರನ್ನು 2021 ರ ಜನವರಿಯಲ್ಲಿ ಮತ್ತೆ ತಂಡದಿಂದ ಕೈಬಿಡಲಾಯಿತು. ಇದರ ನಂತರ, ಬುಮ್ರಾ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದು, 2022ರ ಜುಲೈನಲ್ಲಿ. ಇಂಗ್ಲೆಂಡ್ನ ಈ ಪ್ರವಾಸದಲ್ಲಿ ರೋಹಿತ್ ಕೊಹ್ಲಿಯೊಂದಿಗೆ 4 ಪಂದ್ಯಗಳನ್ನು ಆಡಿದ ಬುಮ್ರಾ ಬೆನ್ನಿನಲ್ಲಿ ಕಾಣಿಸಿಕೊಂಡ ನೋವಿನಿಂದಾಗಿ ಮತ್ತೆ ತಂಡದಿಂದ ಹೊರಗುಳಿಯಬೇಕಾಯಿತು. ಆ ಬಳಿಕ 2022 ರ ಸೆಪ್ಟೆಂಬರ್ನಲ್ಲಿ ಚೇತರಿಸಿಕೊಂಡು ತಂಡಕ್ಕೆ ಮರಳಿದ ಬುಮ್ರಾ, ಆಸ್ಟ್ರೇಲಿಯಾ ವಿರುದ್ಧ 2 ಟಿ20 ಪಂದ್ಯಗಳನ್ನು ಆಡಿ ಮತ್ತೆ ಇಂಜುರಿಗೊಂಡರು. ಇದೀಗ 5 ತಿಂಗಳ ನಂತರ ಬುಮ್ರಾ ಮತ್ತೆ ತಂಡಕ್ಕೆ ವಾಪಸ್ ಬರಲು ಸಿದ್ಧತೆ ನಡೆಸಿದ್ದಾರೆ.
ಏಕದಿನ ಸರಣಿಯಲ್ಲಿ ಮೂವರು ಒಟ್ಟಿಗೆ
ಇತ್ತೀಚೆಗಷ್ಟೇ ಬಿಸಿಸಿಐ ಶ್ರೀಲಂಕಾ ವಿರುದ್ಧದ ಏಕದಿನ ತಂಡಕ್ಕೆ ಬುಮ್ರಾ ಅವರನ್ನು ಕೊನೆಯ ಗಳಿಗೆಯಲ್ಲಿ ತಂಡಕ್ಕೆ ಆಯ್ಕೆ ಮಾಡಿತು. ಹೀಗಿರುವಾಗ ಬುಮ್ರಾ ಮೈದಾನಕ್ಕೆ ಇಳಿಯುವುದು ನಿಶ್ಚಿತ ಎಂಬ ನಂಬಿಕೆ ಇದೆ. ಅಲ್ಲದೆ ಎನ್ಸಿಎ ಕೂಡ ಬುಮ್ರಾ ಪುರ್ಣ ಫಿಟ್ ಆಗಿದ್ದಾರೆ ಎಂಬ ಸಿಗ್ನಲ್ ನೀಡಿರುವುದು ಕೂಡ ಬಿಸಿಸಿಐಗೆ ಕೊಂಚ ನಿರಾಳತೆ ತಂದಿದೆ. ಬುಮ್ರಾ ಅವರೊಂದಿಗೆ ರೋಹಿತ್ ಮತ್ತು ಕೊಹ್ಲಿ ಕೂಡ ಈ ಸರಣಿಯಿಂದ ತಂಡಕ್ಕೆ ಮರಳಲಿದ್ದಾರೆ. ಈ ಹಿಂದೆ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಗಾಯಗೊಂಡಿದ್ದರು. ಹೀಗಾಗಿ ಅವರನ್ನುಟೆಸ್ಟ್ ಹಾಗೂ ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗಿಡಲಾಗಿತ್ತು. ಇತ್ತ ಬಾಂಗ್ಲಾ ಪ್ರವಾಸ ಮುಗಿಸಿ ಬಂದಿದ್ದ ಕೊಹ್ಲಿಗೂ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಇಂಜುರಿಯಿಂದ ಚೇತರಿಸಿಕೊಂಡು ಬಂದಿರುವ ರೋಹಿತ್ ಹಾಗೂ ಬುಮ್ರಾ, ಇತ್ತ ವಿಶ್ರಾಂತಿ ಪಡೆದು ತಂಡಕ್ಕೆ ಎಂಟ್ರಿಕೊಟ್ಟಿರುವ ಕೊಹ್ಲಿ ಈ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sun, 8 January 23