IND vs WI 4th Day: 4ನೇ ದಿನದಾಟ ಅಂತ್ಯ; ಕೊನೆಯ ದಿನ ವಿಂಡೀಸ್ ಗೆಲುವಿಗೆ ಬೇಕು 289 ರನ್

|

Updated on: Jul 24, 2023 | 5:41 AM

India vs West Indies 2nd Test: ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ಭಾರತ ನೀಡಿದ 365 ರನ್‌ಗಳ ಗುರಿಗೆ ಉತ್ತರವಾಗಿ ವಿಂಡೀಸ್ ತಂಡ ಆಟದ ಅಂತ್ಯದವರೆಗೆ 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ.

IND vs WI 4th Day: 4ನೇ ದಿನದಾಟ ಅಂತ್ಯ; ಕೊನೆಯ ದಿನ ವಿಂಡೀಸ್ ಗೆಲುವಿಗೆ ಬೇಕು 289 ರನ್
ಭಾರತ- ವೆಸ್ಟ್ ಇಂಡೀಸ್
Follow us on

ವೆಸ್ಟ್ ಇಂಡೀಸ್ ವಿರುದ್ಧ ಸತತ 9ನೇ ಟೆಸ್ಟ್ ಸರಣಿ ಗೆಲ್ಲುವತ್ತ ಭಾರತ (India vs West Indies) ಮತ್ತೊಂದು ಹೆಜ್ಜೆ ಇಟ್ಟಿದೆ. ಸರಣಿಯ ಮೊದಲ ಪಂದ್ಯದಲ್ಲಿ ಅನಾಯಾಸವಾಗಿ ಗೆದ್ದಿದ್ದ ಟೀಂ ಇಂಡಿಯಾ (Team India) ಎರಡನೇ ಟೆಸ್ಟ್​ನಲ್ಲೂ ಮೇಲುಗೈ ಸಾಧಿಸಿದೆ. ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ ಭಾರತ ನೀಡಿದ 365 ರನ್‌ಗಳ ಗುರಿಗೆ ಉತ್ತರವಾಗಿ ವಿಂಡೀಸ್ ತಂಡ ಆಟದ ಅಂತ್ಯದವರೆಗೆ 2 ವಿಕೆಟ್ ಕಳೆದುಕೊಂಡು 76 ರನ್ ಕಲೆಹಾಕಿದೆ. ಹೀಗಾಗಿ ಪಂದ್ಯದ ಕೊನೆಯ ದಿನ ಭಾರತ ಗೆಲುವು ಸಾಧಿಸಬೇಕೆಂದರೆ 8 ವಿಕೆಟ್ ಪಡೆಯಬೇಕಿದೆ. ಇತ್ತ ವಿಂಡೀಸ್ ತಂಡ ಪಂದ್ಯ ಗೆದ್ದು ಸರಣಿಯನ್ನು ಡ್ರಾದಲ್ಲಿ ಅಂತ್ಯಗೊಳಿಸಬೇಕೆಂದರೆ, ಐದನೇ ದಿನದಾಟದಲ್ಲಿ 289 ರನ್ ಬಾರಿಸಬೇಕಿದೆ.

ಪಂದ್ಯದ ಮೂರನೇ ದಿನದಂತೆಯೇ ನಾಲ್ಕನೇ ದಿನವಾದ ಭಾನುವಾರವೂ ಮಳೆಯಿಂದಾಗಿ ಸಾಕಷ್ಟು ಸಮಯ ನಷ್ಟವಾಯಿತು. ಇದು ಟೀಂ ಇಂಡಿಯಾದ ಹಲವು ಓವರ್‌ಗಳನ್ನು ಕಸಿದುಕೊಂಡಿತು. ಹೀಗಾಗಿ ರೋಹಿತ್ (Rohit Sharma) ಪಡೆ ಟೆಸ್ಟ್​ನಲ್ಲಿ ಟಿ20 ರೀತಿಯಲ್ಲಿ ಬ್ಯಾಟಿಂಗ್ ಮಾಡಬೇಕಾಯಿತು.

55 ನಿಮಿಷಗಳಲ್ಲಿ ವಿಂಡೀಸ್ ಇನ್ನಿಂಗ್ಸ್ ಮುಗಿಸಿದ ಸಿರಾಜ್

ಮೂರನೇ ದಿನದ ಮಳೆಯಿಂದ ಆದ ನಷ್ಟವನ್ನು ಸರಿದೂಗಿಸಲು ನಾಲ್ಕನೇ ದಿನದ ಆರಂಭ ಅರ್ಧ ಗಂಟೆ ಮೊದಲೇ ಆಯಿತು. ಇದರ ಲಾಭ ಪಡೆದ ಟೀಂ ಇಂಡಿಯಾ ಕೇವಲ 55 ನಿಮಿಷದಲ್ಲಿ ವೆಸ್ಟ್ ಇಂಡೀಸ್ ತಂಡದ ಉಳಿದ 5 ವಿಕೆಟ್​ಗಳನ್ನು ಕಬಳಿಸಿತು. ದಿನದ ಮೊದಲ ಎರಡು ಓವರ್‌ಗಳಲ್ಲಿ ಮುಕೇಶ್ ಕುಮಾರ್ ಮತ್ತು ಮೊಹಮ್ಮದ್ ಸಿರಾಜ್ ಯಶಸ್ಸು ಸಾಧಿಸಿದರು. ಸಿರಾಜ್ ಹೊಸ ಚೆಂಡಿನೊಂದಿಗೆ ಸ್ವಿಂಗ್ ದಾಳಿ ನಡೆಸಿ, ಉಳಿದಿದ್ದ 5 ವಿಕೆಟ್​ಗಳಲ್ಲಿ 4 ವಿಕೆಟ್​ಗಳನ್ನು ತನ್ನ ಖಾತೆಗೆ ಹಾಕಿಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಸಿರಾಜ್ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ, ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದರು.

IND vs WI Test 3rd Day: ವಿಂಡೀಸ್ ಪಡೆಯಿಂದ ದಿಟ್ಟ ಪ್ರತ್ಯುತ್ತರ; ನಿರ್ಜೀವ ಪಿಚ್​ನಲ್ಲಿ ಭಾರತದ ಬೌಲರ್​ಗಳು ಹೈರಾಣ

ಭಾರತದ ಸ್ಫೋಟಕ ಬ್ಯಾಟಿಂಗ್

ವೆಸ್ಟ್ ಇಂಡೀಸ್ ತಂಡವನ್ನು 255 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ ಮೊದಲನೇ ಇನ್ನಿಂಗ್ಸ್​ನಲ್ಲಿ 183 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಇದಾದ ಬಳಿಕ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ರೋಹಿತ್ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಹೀಗಾಗಿ ಭಾರತ ಕೇವಲ 12.2 ಓವರ್‌ಗಳಲ್ಲಿ 100 ರನ್ ಪೂರೈಸಿತು, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಕೂಡ ಆಯಿತು.

ಆದರೆ, ಇದೆಲ್ಲದರ ನಡುವೆ ಮಳೆಯಿಂದಾಗಿ ಎರಡು ಬಾರಿ ಆಟಕ್ಕೆ ಅಡ್ಡಿಯಾಯಿತು.ಮೂರನೇ ಸೆಷನ್ ಆಟ ಆರಂಭವಾದಾಗ ನಾಲ್ಕನೇ ಕ್ರಮಾಂಕದಲ್ಲಿ ಬಡ್ತಿ ಪಡೆದ ಇಶಾನ್ ಕಿಶನ್ ಆರಂಭಿಕರ ಚುರುಕಿನ ಬ್ಯಾಟಿಂಗ್ ಮುಂದುವರಿಸಿದರು. ಈ ವೇಳೆ ಇಶಾನ್ ಕೇವಲ 33 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವನ್ನು ಸಿಡಿಸಿದರು. ಅಂತಿಮವಾಗಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 24 ಓವರ್‌ ಬ್ಯಾಟಿಂಗ್ ಮಾಡಿ 2 ವಿಕೆಟ್‌ ಕಳೆದುಕೊಂಡು 181 ರನ್​ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಮತ್ತೆ ಹೋರಾಟದ ಮನೋಭಾವ ತೋರಿದ ವಿಂಡೀಸ್

ಮೊದಲ ಇನಿಂಗ್ಸ್‌ನಲ್ಲಿ ವಿಪರೀತ ರಕ್ಷಣಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ವಿಂಡೀಸ್ ತಂಡ, ಎರಡನೇ ಇನಿಂಗ್ಸ್‌ನಲ್ಲಿ ಸ್ವಲ್ಪ ಉತ್ತಮ ಆರಂಭ ನೀಡಿತು. ನಾಯಕ ಕ್ರೇಗ್ ಬ್ರಾಥ್‌ವೈಟ್ ರನ್ ವೇಗವನ್ನು ಕಾಯ್ದುಕೊಂಡರು ಆದರೆ ಮತ್ತೊಂದೆಡೆ, ತೇಜ್​ನಾರಾಯಣ್ ಚಂದ್ರಪಾಲ್ ರನ್ ಗಳಿಸಲು ಹೆಣಗಾಡುತ್ತಿರುವುದು ಕಂಡುಬಂತು. ಆದರೆ ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ ಮತ್ತೊಮ್ಮೆ ಬ್ರಾಥ್‌ವೈಟ್ ವಿಕೆಟ್ ಪಡೆದು ಭಾರತಕ್ಕೆ ಮೊದಲ ಯಶಸ್ಸನ್ನು ತಂದುಕೊಟ್ಟರು.

ಬಳಿಕ ಮುಂದಿನ ಓವರ್‌ನಲ್ಲಿಯೇ ಕಿರ್ಕ್ ಮೆಕೆಂಜಿ ಖಾತೆ ತೆರೆಯಲು ಸಾಧ್ಯವಾಗದೆ ಅಶ್ವಿನ್​ಗೆ ಬಲಿಯಾದರು. ಹೀಗಾಗಿ ಕೇವಲ 44 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ವಿಂಡೀಸ್‌ ತಂಡ ಬೇಗ ಆಲೌಟ್​ ಆಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಚಂದ್ರಪಾಲ್ ಮತ್ತು ಜೆರ್ಮೈನ್ ಬ್ಲಾಕ್‌ವುಡ್ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಇಬ್ಬರೂ 12 ಓವರ್‌ಗಳಲ್ಲಿ ಅಜೇಯ 32 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು 76 ರನ್‌ಗಳಿಗೆ ಕೊಂಡೊಯ್ಯುವ ಮೂಲಕ ಕೊನೆಯ ದಿನ ಗೆಲುವಿಗಾಗಿ ಹೋರಾಡುವ ಸೂಚನೆ ನೀಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:39 am, Mon, 24 July 23