ಭಾರತ-ವೆಸ್ಟ್ ಇಂಡೀಸ್ (India vs West Indies) ನಡುವಣ ಸರಣಿ ಮುಂದಿನ ಫೆಬ್ರವರಿ 6 ರಿಂದ ಶುರುವಾಗಲಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ (Team India) ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ಕೊರೋನಾಂತಕದ ಕಾರಣ ಸಂಪೂರ್ಣ ಏಕದಿನ ಸರಣಿಯನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಆಯೋಜಿಸಲಾಗುತ್ತಿದ್ದು, ಹಾಗೆಯೇ ಟಿ20 ಸರಣಿಯನ್ನು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂ ನಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಇತ್ತ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ವೆಸ್ಟ್ ಇಂಡೀಸ್ ವಿರುದ್ದದ ಗೆಲ್ಲುವ ಮೂಲಕ ಜಯದ ಲಯಕ್ಕೆ ಮರಳಬೇಕಾದ ಅನಿವಾರ್ಯತೆ ಇದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಂಡದಿಂದ ಹೊರಗುಳಿದಿದ್ದಾರೆ.
ಕೆಲ ಮೂಲಗಳ ಮಾಹಿತಿ ಪ್ರಕಾರ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಗಾಯದ ಕಾರಣ ಸುಮಾರು ಮೂರು ವಾರಗಳ ಕಾಲ ಹೊರಗುಳಿಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 5 ವರ್ಷಗಳ ಬಳಿಕ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡಿದ್ದ ಅಶ್ವಿನ್, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದೀಗ ಗಾಯದ ಕಾರಣ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅಶ್ವಿನ್ ಅನುಪಸ್ಥಿತಿಯಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಅವಕಾಶ ಸಿಗಬಹುದು.
ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾ ಸೀಮಿತ ಓವರ್ಗಳ ತಂಡದಲ್ಲಿ ಕುಲದೀಪ್ ಮತ್ತು ಯುಜ್ವೇಂದ್ರ ಚಹಾಲ್ ಜೋಡಿಯು ಸಾಕಷ್ಟು ಯಶಸ್ವಿಯಾಗಿತ್ತು. ಹೀಗಾಗಿ ಮತ್ತೊಮ್ಮೆ ಕುಲ್ಚ ಜೋಡಿಯನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಮತ್ತೊಂದೆಡೆ ಸೌತ್ ಆಫ್ರಿಕಾ ವಿರುದ್ದ ನೀರಸ ಪ್ರದರ್ಶನ ನೀಡಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರನ್ನೂ ಕೂಡ ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಇನ್ನು ಜಸ್ಪ್ರೀತ್ ಬುಮ್ರಾ ಅವರು ವಿಶ್ರಾಂತಿ ಬಯಸಿದ್ದಾರೆ ಎಂದು ವರದಿಯಾಗಿದ್ದು, ಹೀಗಾಗಿ ಬುಮ್ರಾ ಸ್ಥಾನದಲ್ಲಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಬಹುದು. ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿ ಆಡಿದ್ದ ಶಮಿ ಅವರಿಗೆ ಏಕದಿನ ಸರಣಿ ವೇಳೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಬುಮ್ರಾ ಆಡದಿದ್ದರೆ ಶಮಿ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಬಹುದು.
ಒಟ್ಟಿನಲ್ಲಿ ಸೌತ್ ಆಫ್ರಿಕಾ ವಿರುದ್ದದ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾಗೆ ಭರ್ಜರಿ ಗೆಲುವಿನ ಅನಿವಾರ್ಯತೆ ಇದೆ. ಏಕೆಂದರೆ ಕಳೆದ ಕೆಲ ತಿಂಗಳಿಂದ ಕೇಳಿ ಬಂದ ವಿವಾದ ಹಾಗೂ ನಾಯಕನ ಬದಲಾವಣೆಯಿಂದ ಬಿಸಿಸಿಐ ಮುಜುಗರಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕ್ವೀನ್ ಸ್ವೀಪ್ ಮಾಡಿ ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವು ದಾಖಲಿಸಿದೆ. ಹೀಗಾಗಿ ಸೋಲಿನ ಕಹಿಯನ್ನು ಮರೆಯಲು ವೆಸ್ಟ್ ಇಂಡೀಸ್ ವಿರುದ್ದ ಭರ್ಜರಿ ಜಯ ಸಾಧಿಸಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ.
ಭಾರತ-ವೆಸ್ಟ್ ಇಂಡೀಸ್ ಸರಣಿ ವೇಳಾಪಟ್ಟಿ ಹೀಗಿದೆ:
ಏಕದಿನ ಸರಣಿ ವೇಳಾಪಟ್ಟಿ
6 ಫೆಬ್ರವರಿ: 1ನೇ ODI, ಅಹಮದಾಬಾದ್
ಫೆಬ್ರವರಿ 9: 2ನೇ ODI, ಅಹಮದಾಬಾದ್
ಫೆಬ್ರವರಿ 11: 3ನೇ ODI, ಅಹಮದಾಬಾದ್
ಟಿ20 ಸರಣಿ ವೇಳಾಪಟ್ಟಿ:
16 ಫೆಬ್ರವರಿ: 1ನೇ ಟಿ20, ಕೋಲ್ಕತ್ತಾ
ಫೆಬ್ರವರಿ 18: ಎರಡನೇ ಟಿ20, ಕೋಲ್ಕತ್ತಾ
ಫೆಬ್ರವರಿ 20: ಮೂರನೇ ಟಿ20, ಕೋಲ್ಕತ್ತಾ
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(R Ashwin to miss West Indies series)