IND vs WI: ಶಿಖರ್, ಶ್ರೇಯಸ್ ಕಂಬ್ಯಾಕ್: 2ನೇ ಪಂದ್ಯದಲ್ಲಿ ಸಿಗಲಿದೆಯಾ ಚಾನ್ಸ್?
IND vs WI: 2ನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್.ರಾಹುಲ್ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿರುವುದು ಭಾರತ ತಂಡದ ಬಲ ಹೆಚ್ಚಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ . ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ತಂಡದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಸೇರಿದಂತೆ ಕೆಲ ಆಟಗಾರರು ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಧವನ್ ಮತ್ತು ಶ್ರೇಯಸ್ ಅಯ್ಯರ್ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೋನಾ ಟೆಸ್ಟ್ನಲ್ಲಿ ಇಬ್ಬರ ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ ಅಯ್ಯರ್ ಹಾಗೂ ಧವನ್ ತಂಡದ ತರಬೇತಿಗೆ ಮರಳಲಿದ್ದಾರೆ. ಇದಾಗ್ಯೂ ಮತ್ತೋರ್ವ ಆಟಗಾರ ರುತುರಾಜ್ ಗಾಯಕ್ವಾಡ್ ಕ್ವಾರಂಟೈನ್ನಲ್ಲಿದ್ದು, ಇನ್ನೂ ಕೂಡ ಸಂಪೂರ್ಣ ಗುಣಮುಖರಾಗಿಲ್ಲ ಎಂದು ತಿಳಿದು ಬಂದಿದೆ.
ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ , ಧವನ್ ಮತ್ತು ಅಯ್ಯರ್ ಅವರು ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಹೀಗಾಗಿ ತಂಡದೊಂದಿಗೆ ತರಬೇತಿಯಲ್ಲಿ ಭಾಗವಹಿಸಲು ಇಬ್ಬರಿಗೂ ಅವಕಾಶ ನೀಡಲಾಗಿದೆ. ಮಂಗಳವಾರದ ತಂಡದ ತರಬೇತಿಗೆ ಇಬ್ಬರೂ ಆಟಗಾರರು ಹಾಜರಾಗಲಿದ್ದಾರೆ. ಆದರೆ, ಉಳಿದ ಆಟಗಾರರಿಗೆ ಹೋಲಿಸಿದರೆ ಧವನ್ ಹಾಗೂ ಅಯ್ಯರ್ ಲಘು ತರಬೇತಿಯನ್ನು ಮಾತ್ರ ಮಾಡಲಿದ್ದಾರೆ. ಹೀಗಿರುವಾಗ ಎರಡನೇ ಏಕದಿನ ಪಂದ್ಯಕ್ಕೆ ಇಬ್ಬರ ಆಯ್ಕೆ ಸಾಧ್ಯತೆ ತುಂಬಾ ಕಡಿಮೆ ಎನ್ನಬಹುದು. ಮೊದಲ ಪಂದ್ಯದಲ್ಲಿ ಧವನ್ ಮತ್ತು ಶ್ರೇಯಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಮತ್ತು ದೀಪಕ್ ಹೂಡಾ ತಂಡದಲ್ಲಿ ಸ್ಥಾನ ಪಡೆದಿದ್ದರು.
ಟೀಮ್ ಇಂಡಿಯಾಗೆ ಸುಲಭ ಜಯ: ಮೊದಲ ಏಕದಿನ ಪಂದ್ಯದಲ್ಲಿ ಭಾರತ ಈ ಇಬ್ಬರು ಆಟಗಾರರನ್ನು ಮಿಸ್ ಮಾಡಿಕೊಳ್ಳಲಿಲ್ಲ. ಏಕೆಂದರೆ ಟೀಮ್ ಇಂಡಿಯಾ ಬೌಲರ್‌ಗಳು ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ನಂತರ ನಾಯಕ ರೋಹಿತ್ ಶರ್ಮಾ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು. ಅಂತಿಮವಾಗಿ ಚೊಚ್ಚಲ ಪಂದ್ಯವನ್ನಾಡಿದ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಜೊತೆಗೂಡಿ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ದರು.
ರಾಹುಲ್ ಮತ್ತು ಮಯಾಂಕ್ ಕಂಬ್ಯಾಕ್? 2ನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್.ರಾಹುಲ್ ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿರುವುದು ಭಾರತ ತಂಡದ ಬಲ ಹೆಚ್ಚಿಸಿದೆ. ಅಕ್ಕನ ಮದುವೆಯ ಕಾರಣದಿಂದ ಮೊದಲ ಏಕದಿನ ಪಂದ್ಯಕ್ಕೆ ರಾಹುಲ್ ಅಲಭ್ಯರಾಗಿದ್ದರು. ಹಾಗೆಯೇ, ಧವನ್ ಮತ್ತು ಗಾಯಕ್ವಾಡ್ ಕೊರೋನಾ ಸೋಂಕಿಗೆ ಒಳಗಾಗಿರುವ ಕಾರಣ, ತಂಡಕ್ಕೆ ಮಯಾಂಕ್ ಅಗರ್ವಾಲ್ ಅವರನ್ನು ಕರೆಸಿಕೊಳ್ಳಲಾಗಿತ್ತು. ಇದೀಗ ಮಯಾಂಕ್ ಅವರ ಕ್ವಾರಂಟೈನ್ ಕೂಡ ಪೂರ್ಣಗೊಂಡಿದೆ. ಹೀಗಾಗಿ 2ನೇ ಏಕದಿನ ಪಂದ್ಯಕ್ಕೆ ರಾಹುಲ್, ಮಯಾಂಕ್ ಲಭ್ಯರಿರಲಿದ್ದಾರೆ. ಇದೀಗ ಕೆಎಲ್ ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಿರುವ ಕಾರಣ ತಂಡದಲ್ಲಿ 2ನೇ ಪಂದ್ಯದಲ್ಲಿ ತಂಡದಲ್ಲಿ ಕೆಲ ಬದಲಾವಣೆ ಕಂಡು ಬರಲಿದೆ. ಅದರಲ್ಲೂ ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ
ಇದನ್ನೂ ಓದಿ: Yuzvendra Chahal: ವಿಕೆಟ್ಗಳ ಶತಕ ಪೂರೈಸಿದ ಚಹಾಲ್
ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!
(IND vs WI: Shikhar Dhawan and Shreyas Iyer recover from covid 19 but unlikely to play 2nd ODI)