ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಕ್ಲೀನ್ಸ್ವೀಪ್ ಮಾಡಿದ ಬಳಿಕ ಟಿ20 ಸರಣಿಯಲ್ಲೂ ಮೊದಲ ಪಂದ್ಯ ಗೆದ್ದ ಭಾರತ ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಸ್ಯಾಂಟ್ ಕಿಟ್ಸ್ನ ವಾರ್ನರ್ ಪಾರ್ಕ್ ಮೈದಾನದಲ್ಲಿ ಇಂಡೋ– ವಿಂಡೀಸ್ (India vs West Indies) ಎರಡನೇ ಟಿ20 ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ 68 ರನ್ಗಳ ಅಮೋಘ ಗೆಲುವು ಕಂಡಿದ್ದ ಭಾರತ ಮತ್ತೊಂದು ಜಯವನ್ನು ಎದುರು ನೋಡುತ್ತಿದ್ದರೆ ಅತ್ತ ಕೆರಿಬಿಯನ್ನರು ಟೀಮ್ ಇಂಡಿಯಾ (Team India) ವಿರುದ್ಧ ಖಾತೆ ತೆರೆಯುವ ಪ್ಲಾನ್ನಲ್ಲಿದೆ. ಈಗಾಗಲೇ ತವರಿನಲ್ಲಿ ಭಾರೀ ಮುಖಭಂಗಕ್ಕೆ ಒಳಗಾಗಿರುವ ವೆಸ್ಟ್ ಇಂಡೀಸ್ಗೆ ಗೆಲುವು ಅನಿವಾರ್ಯವಾಗಿದೆ. ರೋಹಿತ್ (Rohit Sharma) ಪಡೆ ಇಂದಿನ ಪಂದ್ಯವನ್ನೂ ಗೆದ್ದು ಸರಣಿ ಗೆಲುವಿನ ಸನಿಹ ಬರುವ ಯೋಜನೆ ಹಾಕಿಕೊಂಡಿದೆ.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಮುಖ್ಯವಾಗಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡಿತಾದರೂ ಮಧ್ಯಮ ಕ್ರಮಾಂಕದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು. ಆರಂಭದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಹಾಗೂ ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕಾರಣ ತಂಡದ ಮೊತ್ತ 190ಕ್ಕೆ ಬಂದು ನಿಂತಿತು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ನಿರ್ಗಮಿಸಿದರೆ, ರಿಷಭ್ ಪಂತ್ (14) ಹಾಗೂ ಹಾರ್ದಿಕ್ ಪಾಂಡ್ಯ (1) ಆಟ ಕೂಡ ನಡೆಯಲಿಲ್ಲ. ಸೂರ್ಯಕುಮಾರ್ ಯಾದವ್ ಓಪನರ್ ಆಗಿ ಕಣಕ್ಕಿಳಿದಿದ್ದರು.
ಸೂರ್ಯ ಅವರಿಗೆ ಆರಂಭಿಕನಾಗಿ ಆಡಿ ಅಷ್ಟೊಂದು ಅನುಭವವಿಲ್ಲ. ಅವರು ಮಧ್ಯಮ ಕ್ರಮಾಂಕಕ್ಕೆ ಫಿಟ್ ಆಗಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿ ರೋಹಿತ್ ಜೊತೆ ಕಣಕ್ಕಿಳಿಸುವ ಸಾಧ್ಯತೆ ಇದೆ. ಉಳಿದಂತೆ ರವೀಂದ್ರ ಜಡೇಜಾ ಕಡೆಯಿಂದ ತಂಡಕ್ಕೆ ಇನ್ನಷ್ಟು ಕೊಡುಗೆ ಬೇಕಿದೆ.
ಬೌಲಿಂಗ್ನಲ್ಲಿ ಭಾರತ ಮಾರಕವಾಗಿದೆ. ಯುವ ವೇಗಿ ಅರ್ಶ್ದೀಪ್ ಸಿಂಗ್ ಅಂತೂ ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಾಜಿಕೊಳ್ಳುತ್ತಿದ್ದಾರೆ. ಮೊದಲ ಟಿ20 ಯಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 24 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಟಿ20 ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿರುವ ರವಿಚಂದ್ರನ್ ಅಶ್ವಿನ್ ಕೂಡ ಮೋಡಿ ಮಾಡಿದ್ದಾರೆ. ರವಿ ಬಿಷ್ಟೋಯಿ ಕೂಡ 2 ವಿಕೆಟ್ ಪಡೆದು ಮಿಂಚಿದ್ದರು.
ಇತ್ತ ಮೇಲ್ನೋಟಕ್ಕೆ ವೆಸ್ಟ್ ಇಂಡೀಸ್ ಟಿ20 ಸ್ಪೆಷಲಿಸ್ಟ್‌ಗಳ ತಂಡವಾಗಿ ಗೋಚರಿಸುತ್ತಿದೆಯಷ್ಟೆ. ತಂಡದಲ್ಲಿ ಜವಾಬ್ಧಾರಿ ಹೊತ್ತು ಪಂದ್ಯವನ್ನು ಮುನ್ನಡೆಸುವ ಕೈ ಕಾಣುತ್ತಿಲ್ಲ. ಭಾರತದ ಬೌಲಿಂಗ್ ಯೂನಿಟ್, ಅದರಲ್ಲೂ ತ್ರಿವಳಿ ಸ್ಪಿನ್ ವಿಭಾಗ ಘಾತಕ ಪ್ರದರ್ಶನ ನೀಡಿತ್ತು. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ನಿಭಾಯಿಸಿದರಷ್ಟೇ ವೆಸ್ಟ್ ಇಂಡೀಸ್ ಮೇಲುಗೈ ಸಾಧಿಸೀತು. ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಎರಡೂ ವಿಭಾಗಗಳಲ್ಲಿ ಲಯಕ್ಕೆ ಮರಳಿದರೆ ಭಾರತಕ್ಕೆ ಸವಾಲೊಡ್ಡಬಹುದು.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ ಕಾಣಲಿದೆ. ಫ್ಯಾನ್ಕೋಡ್ ಆ್ಯಪ್ನಲ್ಲಿ ಕೂಡ ಲೈವ್ ಸ್ಟ್ರೀಮ್ ವೀಕ್ಷಿಸಬಹುದು.
ಭಾರತ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ರವಿ ಬಿಷ್ಟೋಯಿ, ಅರ್ಶ್ದೀಪ್ ಸಿಂಗ್.
Published On - 9:14 am, Mon, 1 August 22