AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CWG 2022: ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಚಿನ್ನ; ಕ್ರಿಕೆಟ್​ನಿಂದ ಟೇಬಲ್ ಟೆನ್ನಿಸ್​ವರೆಗೆ ಇವತ್ತಿನ ಪ್ರದರ್ಶನ ಹೀಗಿತ್ತು

CWG 2022: ಜೆರೆಮಿ ಲಾಲ್ರಿನ್ನುಂಗಾ ಚಿನ್ನ ಗೆಲ್ಲುವ ಮೂಲಕ ಭಾರತದ ಪದಕಗಳನ್ನು ಹೆಚ್ಚಿಸಿದರು. ವೇಟ್‌ಲಿಫ್ಟರ್‌ಗಳು ಇದುವರೆಗೆ ಒಟ್ಟು 5 ಪದಕಗಳನ್ನು ಭಾರತದ ಬ್ಯಾಗ್‌ನಲ್ಲಿ ಇರಿಸಿದ್ದಾರೆ.

CWG 2022: ವೇಟ್​ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಚಿನ್ನ; ಕ್ರಿಕೆಟ್​ನಿಂದ ಟೇಬಲ್ ಟೆನ್ನಿಸ್​ವರೆಗೆ ಇವತ್ತಿನ ಪ್ರದರ್ಶನ ಹೀಗಿತ್ತು
Jeremy Lalrinnunga
TV9 Web
| Updated By: ಪೃಥ್ವಿಶಂಕರ|

Updated on:Jul 31, 2022 | 8:44 PM

Share

2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games 2022) ಭಾರತೀಯ ವೇಟ್‌ಲಿಫ್ಟರ್‌ಗಳ ಸಾಧನೆ ಭಾನುವಾರವೂ ಮುಂದುವರೆಯಿತು. ಜೆರೆಮಿ ಲಾಲ್ರಿನ್ನುಂಗಾ ಚಿನ್ನ ಗೆಲ್ಲುವ ಮೂಲಕ ಭಾರತದ ಪದಕಗಳನ್ನು ಹೆಚ್ಚಿಸಿದರು. ವೇಟ್‌ಲಿಫ್ಟರ್‌ಗಳು ಇದುವರೆಗೆ ಒಟ್ಟು 5 ಪದಕಗಳನ್ನು ಭಾರತದ ಬ್ಯಾಗ್‌ನಲ್ಲಿ ಇರಿಸಿದ್ದಾರೆ. ಅದೇ ಸಮಯದಲ್ಲಿ, ಭಾರತೀಯರು ಭಾರತೀಯ ಟೇಬಲ್ ಟೆನ್ನಿಸ್ ತಂಡ, ಕ್ರಿಕೆಟ್ ಮತ್ತು ಲಾನ್ ಬಾಲ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್ ಅವರ ಪಯಣ ಮುಂದುವರೆದಿದೆ.

300 ಕೆಜಿ ಭಾರ ಎತ್ತಿದ ಜೆರೆಮಿ

ಜೆರೆಮಿ 67 ಕೆಜಿ ತೂಕ ವಿಭಾಗದಲ್ಲಿ ಒಟ್ಟು 300 ಕೆಜಿ ಎತ್ತಿದರು. ಅವರು ಸ್ನ್ಯಾಚ್‌ನಲ್ಲಿ 140 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 160 ಕೆಜಿ ಎತ್ತಿದರು. ಮೂರನೇ ಪ್ರಯತ್ನದಲ್ಲಿ 165 ಕೆಜಿ ಎತ್ತಲು ಬಯಸಿದ್ದರು, ಆದರೆ ಜೆರೆಮಿಗೆ ಅದು ಸಾಧ್ಯವಾಗಲಿಲ್ಲ.

ಟೇಬಲ್ ಟೆನಿಸ್ ಸೆಮಿಫೈನಲ್‌ನಲ್ಲಿ ಭಾರತ

ಭಾರತದ ಪುರುಷರ ಟೇಬಲ್ ಟೆನಿಸ್ ತಂಡ ಸೆಮಿಫೈನಲ್ ತಲುಪಿದೆ. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸತ್ಯನ್ ಗೆಲುವು ಸಾಧಿಸಿದರು. ಸತ್ಯನ್ ಮತ್ತು ಹರ್ಮೀತ್ ಮೊದಲ ಪಂದ್ಯದಲ್ಲಿ 11-8, 11-6, 11-2 ಅಂತರದಲ್ಲಿ ಗೆದ್ದರು. ಇದಾದ ಬಳಿಕ ಶರತ್ ಕಮಲ್ 11-4, 11-7, 11-2ರಲ್ಲಿ ರಿಫತ್ ಶಬ್ಬೀರ್ ಅವರನ್ನು ಮಣಿಸಿದರು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಸತ್ಯನ್ 11-2, 11-3, 11-5 ಅಂತರದಲ್ಲಿ ಜಯ ಸಾಧಿಸಿದರು.

ಭಾರತಕ್ಕೆ ಬಾಕ್ಸಿಂಗ್​ನಲ್ಲಿ ಮಿಶ್ರ ಪಲಿತಾಂಶ

ಬಾಕ್ಸಿಂಗ್‌ನಲ್ಲಿ ಭಾರತ ನಿರಾಸೆ ಅನುಭವಿಸಿತು. 16ರ ಸುತ್ತಿನ ಪಂದ್ಯದಲ್ಲಿ ಶಿವ ಥಾಪಾ ಸೋತರು. ಅದೇ ಸಮಯದಲ್ಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ 50 ಕೆಜಿ ವಿಭಾಗದಲ್ಲಿ ಹೆಲೆನಾ ಇಸ್ಮಾಯಿಲ್ ಅವರನ್ನು ಸೋಲಿಸುವ ಮೂಲಕ ಮುಂದಿನ ಸುತ್ತು ತಲುಪಿದ್ದಾರೆ.

ಈಜಿನಲ್ಲಿ ಪ್ರಗತಿ ಸಾಧಿಸಿದ ನಟರಾಜ್

ಶ್ರೀಹರಿ ನಟರಾಜ್ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಹೀಟ್-6ರಲ್ಲಿ 25.52 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಸಜನ್ ಪ್ರಕಾಶ್ 200 ಮೀಟರ್ ಬಟರ್‌ಫ್ಲೈನ ಹೀಟ್-3 ರಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.

ಲಾನ್ ಬಾಲ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಭಾರತ ಪುರುಷ ಜೋಡಿ

ಪುರುಷರ ಜೋಡಿ ವಿಭಾಗದ ಪಂದ್ಯದಲ್ಲಿ ಭಾರತ 18-15 ಅಂಕಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಲೀಗ್ ಸುತ್ತಿನ ನಂತರ ಭಾರತ, ಇಂಗ್ಲೆಂಡ್ ಮತ್ತು ಮಲೇಷ್ಯಾ 9 ಅಂಕಗಳನ್ನು ಹೊಂದಿದ್ದವು, ಆದರೆ ಭಾರತದ ಪಾಯಿಂಟ್ ವ್ಯತ್ಯಾಸವು ಉತ್ತಮವಾಗಿತ್ತು.

ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಜಯ

ಭಾರತ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಭಾರತಕ್ಕೆ ಪಾಕಿಸ್ತಾನ ನೀಡಿದ್ದ 100 ರನ್ ಗುರಿಯನ್ನು ಭಾರತ 2 ವಿಕೆಟ್ ನಷ್ಟದಲ್ಲಿ 38 ಎಸೆತಗಳಲ್ಲಿ ಸಾಧಿಸಿತು.

ಕ್ವಾರ್ಟರ್‌ಫೈನಲ್‌ನಲ್ಲಿ ಜೋಷ್ನಾ

ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನಪ್ಪ ಅವರು ನ್ಯೂಜಿಲೆಂಡ್‌ನ ಕೈಟ್ಲಿನ್ ವಾಟ್ಸ್ ಅವರನ್ನು 3-1 ಅಂತರದಿಂದ ಸೋಲಿಸಿ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ ತಲುಪಿದ್ದಾರೆ.

Published On - 8:44 pm, Sun, 31 July 22