Mark Chapman: ಸಿಕ್ಸ್-ಫೋರ್ಗಳ ಸುರಿಮಳೆ: ಚಾಪ್ಮನ್ ಸಿಡಿಲಬ್ಬರದ ಶತಕ..!
Mark Chapman: ವಿಶೇಷ ಎಂದರೆ ಎಡಗೈ ದಾಂಡಿಗನಾಗಿರುವ ಮಾರ್ಕ್ ಚಾಪ್ಮನ್ ಅವರ ಬ್ಯಾಟಿಂಗ್ ಶೈಲಿಯು ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರ ಬ್ಯಾಟಿಂಗ್ ಅನ್ನು ಹೋಲುತ್ತದೆ.
ಸ್ಕಾಟ್ಲೆಂಡ್ ವಿರುದ್ದ ನಡೆದ ಏಕೈಕ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ (Scotland vs New Zealand) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಜಯದ ರೂವಾರಿ ಯುವ ಎಡಗೈ ಬ್ಯಾಟ್ಸ್ಮನ್ ಮಾರ್ಕ್ ಚಾಪ್ಮನ್. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಕಾಟಿಷ್ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಿದ್ದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಎಂ ಕ್ರಾಸ್ (53) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು. ಇನ್ನು ಮೈಕೆಲ್ ಲೀಸ್ಕ್ 55 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 9 ಫೋರ್ನೊಂದಿಗೆ 85 ರನ್ ಸಿಡಿಸಿದರು. ಪರಿಣಾಮ ಸ್ಕಾಟ್ಲೆಂಡ್ ತಂಡವು 49.4 ಓವರ್ಗಳಲ್ಲಿ 306 ರನ್ಗಳಿಸಿ ಆಲೌಟ್ ಆಯಿತು.
ಈ ಬೃಹತ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಮಾರ್ಟಿನ್ ಗಪ್ಟಿಲ್ (47) ಹಾಗೂ ಫಿನ್ ಅಲೆನ್ (50) ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ ಈ ಇಬ್ಬರ ನಿರ್ಗಮನದ ಬಳಿಕ ನ್ಯೂಜಿಲೆಂಡ್ ತಂಡವು 23 ಓವರ್ಗಳಲ್ಲಿ ಕಲೆಹಾಕಿದ್ದು 125 ರನ್ ಮಾತ್ರ. ಹೀಗಾಗಿಯೇ ಪಂದ್ಯವು ಸ್ಕಾಟ್ಲೆಂಡ್ ಕೈಯಲ್ಲೇ ಇತ್ತು. ಆದರೆ ಈ ಹಂತದಲ್ಲಿ ಕಣಕ್ಕಿಳಿದ ಮಾರ್ಕ್ ಚಾಪ್ಮನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.
7 ಭರ್ಜರಿ ಸಿಕ್ಸರ್ ಹಾಗೂ 6 ಫೋರ್ನೊಂದಿಗೆ ಕೇವಲ 75 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸಿ ಚಾಪ್ಮನ್ ಅಬ್ಬರಿಸಿದ್ದರು. ಮತ್ತೊಂದೆಡೆ ಡೇರಿಲ್ ಮಿಚೆಲ್ 62 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಇವರಿಬ್ಬರ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡವು 45.5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 307 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ ಚಾಪ್ಮನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
View this post on Instagram
ವಿಶೇಷ ಎಂದರೆ ಎಡಗೈ ದಾಂಡಿಗನಾಗಿರುವ ಮಾರ್ಕ್ ಚಾಪ್ಮನ್ ಅವರ ಬ್ಯಾಟಿಂಗ್ ಶೈಲಿಯು ಟೀಮ್ ಇಂಡಿಯಾದ ಮಾಜಿ ಆಟಗಾರ ಸೌರವ್ ಗಂಗೂಲಿ ಅವರ ಬ್ಯಾಟಿಂಗ್ ಅನ್ನು ಹೋಲುತ್ತದೆ. ಅದರಲ್ಲೂ ಚಾಪ್ಮನ್ ಮುನ್ನುಗ್ಗಿ ಬಂದು ಸಿಕ್ಸ್ ಬಾರಿಸುವ ಕಲೆಯು ಹಳೆಯ ಗಂಗೂಲಿಯನ್ನು ನೆನಪಿಸುತ್ತದೆ. ಹೀಗಾಗಿಯೇ ಇದೀಗ ಚಾಪ್ಮನ್ ಅವರನ್ನು ಹಳೆಯ ಸೌರವ್ ಗಂಗೂಲಿಗೆ ಹೋಲಿಸಲಾಗುತ್ತಿದೆ.
Published On - 11:23 am, Mon, 1 August 22