IND vs WI: ಅಭ್ಯಾಸ ಪಂದ್ಯದಲ್ಲೂ ಅದೇ ತಪ್ಪು; ಕೇವಲ 3 ರನ್​ಗಳಿಗೆ ಸುಸ್ತಾದ ಕೊಹ್ಲಿ! ವಿಡಿಯೋ ನೋಡಿ

Virat Kohli: ಜುಲೈ 5 ರಿಂದ ಆರಂಭವಾಗಿರುವ ಈ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವೇ ಅಖಾಡಕ್ಕಿಳಿದಿದ್ದ ವಿರಾಟ್ ಕೊಹ್ಲಿ ತನ್ನ ಅದೇ ಹಳೆಯ ತಪ್ಪನ್ನು ಮತ್ತೊಮ್ಮೆ ಪುನರಾವರ್ತಿಸಿ ವಿಕೆಟ್ ಕೈಚೆಲ್ಲಿದ್ದಾರೆ.

IND vs WI: ಅಭ್ಯಾಸ ಪಂದ್ಯದಲ್ಲೂ ಅದೇ ತಪ್ಪು; ಕೇವಲ 3 ರನ್​ಗಳಿಗೆ ಸುಸ್ತಾದ ಕೊಹ್ಲಿ! ವಿಡಿಯೋ ನೋಡಿ
ವಿರಾಟ್ ಕೊಹ್ಲಿ (ಪ್ರಾತಿನಿಧಿಕ ಚಿತ್ರ)
Follow us
ಪೃಥ್ವಿಶಂಕರ
|

Updated on: Jul 06, 2023 | 10:58 AM

ಒಂದು ತಿಂಗಳಿಗೂ ಅಧಿಕ ಸಮಯ ಮೋಜು ಮಸ್ತಿಯಲ್ಲಿ ತೊಡಗಿದ್ದ ಟೀಂ ಇಂಡಿಯಾ (Team India) ಇದೀಗ ಮೈದಾನದಲ್ಲಿ ಬೆವರು ಹರಿಸಲು ಆರಂಭಿಸಿದೆ. ಇದೇ ಜುಲೈ 12 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಟೆಸ್ಟ್ ಸರಣಿಗಾಗಿ ಅಭ್ಯಾಸ ಆರಂಭಿಸಿರುವ ಭಾರತ ತಂಡ ನಿನ್ನೆಯಿಂದ ಅಂದರೆ ಜುಲೈ 5 ರಿಂದ ಎರಡು ದಿನಗಳ ಅಭ್ಯಾಸ ಪಂದ್ಯವನ್ನು (warm-up match ಆಡುತ್ತಿದೆ. ವಿಂಡೀಸ್ ಪ್ರವಾಸಕ್ಕೆ ತೆರಳಿರುವ ಭಾರತ ತಂಡವನ್ನೇ ಎರಡು ಭಾಗಗಳಾಗಿ ವಿಂಗಡಿಸಿ ಅಭ್ಯಾಸ ಪಂದ್ಯವನ್ನಾಡಲಾಗುತ್ತಿದೆ. ಈ ಅಭ್ಯಾಸ ಪಂದ್ಯದಲ್ಲಿ 8 ವಿಂಡೀಸ್ ಕ್ರಿಕೆಟಿಗರು ಕೂಡ ಉಭಯ ತಂಡಗಳ ಭಾಗವಾಗಿದ್ದಾರೆ.

ಆದರೆ ಜುಲೈ 5 ರಿಂದ ಆರಂಭವಾಗಿರುವ ಈ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನವೇ ಅಖಾಡಕ್ಕಿಳಿದಿದ್ದ ವಿರಾಟ್ ಕೊಹ್ಲಿ ತನ್ನ ಅದೇ ಹಳೆಯ ತಪ್ಪನ್ನು ಮತ್ತೊಮ್ಮೆ ಪುನರಾವರ್ತಿಸಿ ವಿಕೆಟ್ ಕೈಚೆಲ್ಲಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ವಾಸ್ತವವಾಗಿ ಈ ಅಭ್ಯಾಸ ಪಂದ್ಯ ಆರಂಭಕ್ಕೂ ಮುನ್ನ ನೆಟ್ಸ್​ನಲ್ಲಿ ಭಾರಿ ಬೆವರು ಹರಿಸಿದ್ದ ಕೊಹ್ಲಿ, ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ ಎಂದು ತೋರುತ್ತಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ಬೀಸಿದ್ದನ್ನು ಕಂಡು ಅಭಿಮಾನಿಗಳು ನಿರಾಸೆಕೊಂಡಿದ್ದಾರೆ.

IND vs WI: ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ

ಪದೇಪದೇ ಒಂದೇ ತಪ್ಪಿಗೆ ವಿಕೆಟ್ ಪತನ

ವಾಸ್ತವವಾಗಿ ವಿರಾಟ್ ಕೊಹ್ಲಿಗೆ ಬಹಳ ವರ್ಷಗಳಿಂದ ಐದು, ಆರನೇ ಸ್ಟಂಪ್​ನಿಂದ ಹೊರಹೋಗುವ ಚೆಂಡನ್ನು ಎದುರಿಸುವ ವೀಕ್ನೆಸ್ ಇದೆ. ಇದು ಸಾಕಷ್ಟು ಭಾರಿ ಸಾಭೀತು ಸಹ ಆಗಿದೆ. ಪ್ರಮುಖ ಪಂದ್ಯಗಳಲ್ಲಿ ಎದುರಾಳಿ ತಂಡದ ಬೌಲರ್​ಗಳು ವಿರಾಟ್​ ಕೊಹ್ಲಿಯ ವಿಕೆಟ್ ಉರುಳಿಸಲು ಈ ತಂತ್ರವನ್ನು ಬಳಸುತ್ತಾರೆ. ಇದರಲ್ಲಿ ಅವರು ಹಲವು ಬಾರಿ ಯಶಸ್ವಿ ಕೂಡ ಆಗಿದ್ದಾರೆ. ಆದರೆ ಈ ಬಾರಿ ಕಥೆ ಕೊಂಚ ಭಿನ್ನವಾಗಿದೆ. ಏಕೆಂದರೆ ಕೊಹ್ಲಿ ಈ ಬಾರಿ ವಿಕೆಟ್ ಒಪ್ಪಿಸಿದ್ದು ವಿದೇಶಿ ಬೌಲರ್​ಗಲ್ಲ. ಬದಲಿಗೆ ಟೀಂ ಇಂಡಿಯಾದ ಎಡಗೈ ವೇಗಿ ಜಯದೇವ್ ಉನದ್ಕಟ್ ಅವರಿಗೆ.

ಬೇಗ ಈ ತಪ್ಪನ್ನು ತಿದ್ದಿಕೊಳ್ಳಬೇಕಿದೆ

ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ನಲ್ಲೂ ಕೊಹ್ಲಿ ಇದೇ ರೀತಿಯ ತಪ್ಪನ್ನು ಎಸಗಿ ತಮ್ಮ ವಿಕೆಟ್ ಕೈ ಚೆಲ್ಲಿದ್ದರು. ಇಷ್ಟೇ ಅಲ್ಲ, ಇದಕ್ಕೂ ಮುನ್ನ ವಿರಾಟ್ ಹಲವು ಸಂದರ್ಭಗಳಲ್ಲಿ ಸ್ಲಿಪ್‌ನಲ್ಲಿ ಕ್ಯಾಚ್ ನೀಡುವ ಮೂಲಕ ತಮ್ಮ ವಿಕೆಟ್ ನೀಡುವುದನ್ನು ನಾವು ನೋಡಿದ್ದೇವೆ. ಹೀಗಾಗಿ ವಿರಾಟ್ ಆದಷ್ಟು ಬೇಗ ಈ ತಪ್ಪನ್ನು ತಿದ್ದಿಕೊಳ್ಳುವುದು ಅವಶ್ಯಕವಾಗಿದೆ.

ಇನ್ನು ಟೆಸ್ಟ್ ಸರಣಿಯ ವಿಚಾರಕ್ಕೆ ಬಂದರೆ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ಜುಲೈ 12 ರಿಂದ ವಿಂಡ್ಸರ್ ಪಾರ್ಕ್ ಡೊಮಿನಿಕಾದಲ್ಲಿ ಆರಂಭವಾಗಲಿದೆ. ಹಾಗೆಯೇ ಎರಡನೇ ಟೆಸ್ಟ್ ಪಂದ್ಯ ಜುಲೈ 20 ರಂದು ಕ್ವೀನ್ಸ್ ಪಾರ್ಕ್ ಓವಲ್​ನಲ್ಲಿ ಪ್ರಾರಂಭವಾಗಲಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್‌ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ