ಹರಾರೆಯ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ದದ 3ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯರಿಗೆ 290 ರನ್ಗಳ ಟಾರ್ಗೆಟ್ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಸ್ಪರ್ಧಾತ್ಮಕ ಪೇರಿಸಲು ನೆರವಾದರು. ಇದಕ್ಕೂ ಮುನ್ನ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 63 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಬ್ರಾಡ್ ಇವಾನ್ಸ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ರಾಹುಲ್ (30) ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ಇನ್ನು 40 ರನ್ಗಳಿಸಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದ ಶಿಖರ್ ಧವನ್ ಅವರನ್ನೂ ಕೂಡ ಔಟ್ ಮಾಡುವ ಮೂಲಕ ಇವಾನ್ಸ್ ಜಿಂಬಾಬ್ವೆಗೆ 2ನೇ ಯಶಸ್ಸು ತಂದುಕೊಟ್ಟರು. 21 ಓವರ್ನಲ್ಲಿ 84 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾಗೆ ಈ ಹಂತದಲ್ಲಿ ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆಸರೆಯಾದರು.
3ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ಶುಭ್ಮನ್ ಗಿಲ್ ಹಾಗೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಈ ವೇಳೆ 51 ಎಸೆತಗಳಲ್ಲಿ ಗಿಲ್ ಅರ್ಧಶತಕ ಬಾರಿಸಿದ ಬ್ಯಾಟ್ ಮೇಲೆಕ್ಕೆತ್ತಿದ್ದರು. ಅಷ್ಟೇ ಅಲ್ಲದೆ 40ನೇ ಓವರ್ನಲ್ಲಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಇನ್ನು 61 ಎಸೆತಗಳಲ್ಲಿ ಇಶಾನ್ ಕಿಶನ್ ಅರ್ಧಶತಕ ಪೂರೈಸಿ ಮಿಂಚಿದರು. ಆದರೆ ಹಾಫ್ ಸೆಂಚುರಿಯ ಬೆನ್ನಲ್ಲೇ ರನೌಟ್ ಆಗುವ ಮೂಲಕ ಕಿಶನ್ (50) ಹೊರನಡೆಯಬೇಕಾಯಿತು. ಆ ಬಳಿಕ ಬಂದ ದೀಪಕ್ ಹೂಡ ಕೇವಲ 1 ರನ್ಗಳಿಸಿ ಇವಾನ್ಸ್ ಎಸೆತದಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು. ಇನ್ನೊಂದೆಡೆ ಬಿರುಸಿನ ಆಟಕ್ಕೆ ಒತ್ತು ನೀಡಿದ್ದ ಶುಭ್ಮನ್ ಗಿಲ್ 82 ಎಸೆತಗಳಲ್ಲಿ 12 ಫೋರ್ನೊಂದಿಗೆ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ಇನ್ನು ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 15 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಕ್ಷರ್ ಪಟೇಲ್ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಶುಭ್ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಬಾರಿಸಿದರು. ಈ ಭರ್ಜರಿ ಇನಿಂಗ್ಸ್ನಲ್ಲಿ 15 ಫೋರ್ ಹಾಗೂ 1 ಸಿಕ್ಸ್ ಒಳಗೊಂಡಿತ್ತು. ಇನ್ನು 50ನೇ ಓವರ್ನಲ್ಲಿ ಬ್ರಾಡ್ ಇವಾನ್ಸ್ಗೆ ವಿಕೆಟ್ ಒಪ್ಪಿಸುವ ಮೂಲಕ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ಶತಕದ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಶತಕದ ನೆರವಿನಿಂದ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಕಲೆಹಾಕಿದೆ. ಈ ಮೂಲಕ ಜಿಂಬಾಬ್ವೆಗೆ ಗೆಲ್ಲಲು 290 ರನ್ಗಳ ಕಠಿಣ ಗುರಿ ನೀಡಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ಶಿಖರ್ ಧವನ್ , ಕೆಎಲ್ ರಾಹುಲ್ (ನಾಯಕ) , ಶುಭಮನ್ ಗಿಲ್ , ಇಶಾನ್ ಕಿಶನ್ , ದೀಪಕ್ ಹೂಡಾ , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಅಕ್ಷರ್ ಪಟೇಲ್ , ಶಾರ್ದೂಲ್ ಠಾಕೂರ್ , ದೀಪಕ್ ಚಾಹರ್ , ಕುಲದೀಪ್ ಯಾದವ್ , ಅವೇಶ್ ಖಾನ್
ಜಿಂಬಾಬ್ವೆ ಪ್ಲೇಯಿಂಗ್ ಇಲೆವೆನ್: ತಕುದ್ಜ್ವಾನಾಶೆ ಕೈಟಾನೊ, ಇನೋಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ(ನಾಯಕ), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನಾಗರವಾ
Published On - 4:23 pm, Mon, 22 August 22