ಸ್ವಾತಂತ್ರ್ಯದ ಶುಭಾಶಯ ತಿಳಿಸಿದ ವಾರ್ನರ್: ಆಧಾರ್ ಕಾರ್ಡ್ ಕೊಡಿ ಎಂದ ನೆಟ್ಟಿಗರು..!
Independence Day: ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್ ಇದೀಗ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರುವ ಮೂಲಕ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಸ್ವಾತಂತ್ರ್ಯದ ಅಮೃತೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ಕ್ರಿಕೆಟಿಗರೂ ಪಾಲ್ಗೊಂಡು ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾರೆ. ವಿಶೇಷ ಎಂದರೆ ವಿದೇಶಿ ಕ್ರಿಕೆಟಿಗರೂ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಭಾರತೀಯರಿಗೆ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಶುಭಕೋರುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತೀಯ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದಲ್ಲಿ ಇರುವ ಎಲ್ಲಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಡೇವಿಡ್ ವಾರ್ನರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಐಪಿಎಲ್ ಮೂಲಕ ಭಾರತೀಯರಿಗೆ ಚಿರಪರಿಚಿತರಾಗಿರುವ ಡೇವಿಡ್ ವಾರ್ನರ್ ಈ ಹಿಂದೆ ಕೂಡ ಹಲವು ಬಾರಿ ಭಾರತದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದರು. ಅದರಲ್ಲೂ ಇತ್ತೀಚೆಗೆ ಪಿವಿ ಸಿಂಧು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಾಗ ವಾರ್ನರ್ ಕೂಡ ಶುಭಾಶಯ ತಿಳಿಸಿ ಸಂಭ್ರಮಿಸಿದ್ದರು. ಹೀಗೆ ಸದಾ ಭಾರತೀಯ ಸಂಭ್ರಮದಲ್ಲೂ ವಾರ್ನರ್ ಕುಟುಂಬ ಕೂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದರ ಮುಂದುವರೆದ ಭಾಗವಾಗಿ ಇದೀಗ ಸ್ವಾತಂತ್ರ್ಯದ ಶುಭಾಶಯ ತಿಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ವಾರ್ನರ್ ಆ ಬಳಿಕ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಈ ವೇಳೆ ತೆಲುಗು, ತಮಿಳು ಜನಪ್ರಿಯ ಗೀತೆಗಳ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದ್ದರು. ಅಷ್ಟೇ ಅಲ್ಲದೆ ಭಾರತದ ಹಬ್ಬ-ಹರಿದಿನಗಳ ಸಂದರ್ಭಗಳಲ್ಲೂ ವಿಶೇಷವಾಗಿ ಶುಭಕೋರಿ ಗಮನ ಸೆಳೆದಿದ್ದರು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಡೇವಿಡ್ ವಾರ್ನರ್ ಇದೀಗ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರುವ ಮೂಲಕ ಮತ್ತೊಮ್ಮೆ ಮನಗೆದ್ದಿದ್ದಾರೆ. ವಿಶೇಷ ಎಂದರೆ ಸದಾ ಭಾರತೀಯರಿಗೆ ಶುಭ ಹಾರೈಸುವ ಹಾಗೂ ಭಾರತೀಯ ಚಿತ್ರರಂಗದ ಕ್ರೇಜ್ ಬೆಳೆಸಿಕೊಂಡಿರುವ ವಾರ್ನರ್ಗೂ ಒಂದು ಆಧಾರ್ ಕಾರ್ಡ್ ನೀಡಬೇಕೆಂದು ಕೆಲ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
View this post on Instagram
ಕೇವಲ ಐಪಿಎಲ್ ಮೂಲಕ ಹಣಗಳಿಸಿ ಹೋಗುವ ಆಟಗಾರರ ನಡುವೆ ವಾರ್ನರ್ ವಿಶೇಷ ವ್ಯಕ್ತಿ. ಡೇವಿಡ್ ವಾರ್ನರ್ಗೂ ಒಂದು ಆಧಾರ್ ಕಾರ್ಡ್ ನೀಡಿ. ಈ ಮೂಲಕ ಭಾರತೀಯ ಆಧಾರ್ ಕಾರ್ಡ್ ಹೊಂದಿದ್ದ ವಿದೇಶಿ ಆಟಗಾರ ಎಂದು ಪರಿಗಣಿಸಿ ಎಂದು ಹಲವರು ಡೇವಿಡ್ ವಾರ್ನರ್ಗೆ ಭಾರತದ ಮೇಲಿನ ಪ್ರೀತಿಯನ್ನು ಕೊಂಡಾಡಿದ್ದಾರೆ.