IND vs AFG: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಹರ್ಷ್ ದುಬೆ, ಗುರ್ನೂರ್ ಬ್ರಾರ್

Gurnoor Brar and Harsh Dubey Shine: ಧರ್ಮಶಾಲಾದಲ್ಲಿ ನಡೆದ ಭಾರತ-ಅಫ್ಘಾನ್ ಮೊದಲ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಮಳೆಯಿಂದಾಗಿ 25 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ, ಬ್ರಾರ್ 27 ರನ್‌ಗಳಿಗೆ 3 ವಿಕೆಟ್ ಕಬಳಿಸಿ ಭಾರತದ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದರು. ದುಬೆ ಕೂಡ 3 ವಿಕೆಟ್‌ಗಳೊಂದಿಗೆ ಉತ್ತಮ ಕೊಡುಗೆ ನೀಡಿದರು.

IND vs AFG: ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಹರ್ಷ್ ದುಬೆ, ಗುರ್ನೂರ್ ಬ್ರಾರ್
Gurnoor Brar & Harsh Dubey

Updated on: Jun 13, 2026 | 8:58 PM

ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೊದಲ ಏಕದಿನ ಪಂದ್ಯವನ್ನು ಮಳೆಯಿಂದಾಗಿ ತಲಾ 25 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 195 ರನ್​ಗಳ ಗುರಿ ನೀಡಿತು. ಅದಾಗ್ಯೂ ಅಫ್ಘನ್ ತಂಡವನ್ನು ಆರಂಭದಲ್ಲಿ ಮತ್ತು ಡೆತ್ ಓವರ್​ಗಳಲ್ಲಿ ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಇದರಲ್ಲಿ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ (Gurnoor Brar) ಮತ್ತು ಹರ್ಷ್​ ದುಬೆ (Harsh Dubey) ಅವರ ಕೊಡುಗೆ ಅಪಾರವಾಗಿತ್ತು. ಈ ಇಬ್ಬರು ಬೌಲರ್​ಗಳು ತಲಾ 3 ವಿಕೆಟ್ ಪಡೆಯುವ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಸ್ಮರಣೀಯ ಆರಂಭ ನೀಡಿದರು.

3 ವಿಕೆಟ್ ಉರುಳಿಸಿದ ಗುರ್ನೂರ್ ಬ್ರಾರ್

ಮೊದಲನೆಯದಾಗಿ ಅರ್ಷದೀಪ್ ಸಿಂಗ್ ಜೊತೆಗೆ ಭಾರತದ ಬೌಲಿಂಗ್ ಆರಂಭಿಸುವ ಜವಾಬ್ದಾರಿ ಹೊತ್ತಿದ್ದ ಪಂಜಾಬ್‌ ವೇಗಿ ಗುರ್ನೂರ್ ಬ್ರಾರ್ ಅಫ್ಘಾನಿಸ್ತಾನ ವಿರುದ್ಧ 4.5 ಓವರ್‌ಗಳನ್ನು ಬೌಲಿಂಗ್ ಮಾಡಿ ಕೇವಲ 27 ರನ್‌ ನೀಡಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದರು. ಈ ಅದ್ಭುತ ಪ್ರದರ್ಶನದ ಮೂಲಕ ಚೊಚ್ಚಲ ಏಕದಿನ ಪಂದ್ಯದಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು.

ಭಾರತದ ಪರ ಚೊಚ್ಚಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೆಸರಿನಲ್ಲಿದೆ. ಪ್ರಸಿದ್ಧ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 54 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಗುರ್ನೂರ್ ಬ್ರಾರ್ 27 ರನ್​ಗಳಿಗೆ 3 ವಿಕೆಟ್ ಕಬಳಿಸುವ ಮೂಲಕ ಈ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಅತ್ಯುತ್ತಮ ಬೌಲಿಂಗ್ ಪ್ರದರ್ಶನ

  • ಪ್ರಸಿದ್ಧ್ ಕೃಷ್ಣ: 4/54 vs ಇಂಗ್ಲೆಂಡ್ (ಪುಣೆ, 2021)
  • ನೋಯೆಲ್ ಡೇವಿಡ್: 3/21 vs ವೆಸ್ಟ್ ಇಂಡೀಸ್ (ಪೋರ್ಟ್ ಆಫ್ ಸ್ಪೇನ್, 1997)
  • ವರುಣ್ ಆರನ್: 3/24 vs ಇಂಗ್ಲೆಂಡ್ (ಮುಂಬೈ, 2011)
  • ಗುರ್ನೂರ್ ಬ್ರಾರ್: 3/27 vs ಅಫ್ಘಾನಿಸ್ತಾನ (ಧರ್ಮಶಾಲಾ, 2026)
  • ಸುಬ್ರೊಟೊ ಬ್ಯಾನರ್ಜಿ: 3/30 vs ವೆಸ್ಟ್ ಇಂಡೀಸ್ (ಪರ್ತ್, 1991)

ಸ್ಪಿನ್ನರ್ ಹರ್ಷ್ ದುಬೆಗೂ 3 ವಿಕೆಟ್

ಗುರ್ನೂರ್ ಬ್ರಾರ್ ಜೊತೆಗೆ, ಚೊಚ್ಚಲ ಪಂದ್ಯವನ್ನಾಡಿದ ಹರ್ಷ್ ದುಬೆ ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಎಡಗೈ ಸ್ಪಿನ್ನರ್ ಮಧ್ಯಮ ಓವರ್‌ಗಳಲ್ಲಿ ಭಾರತಕ್ಕೆ ನಿರ್ಣಾಯಕ ವಿಕೆಟ್​ಗಳನ್ನು ತಂದುಕೊಟ್ಟರು. ಹರ್ಷ್ ದುಬೆ ತಾವು ಬೌಲ್ ಮಾಡಿದ ಐದು ಓವರ್‌ಗಳಲ್ಲಿ 47 ರನ್‌ ನೀಡಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಈ ಇಬ್ಬರು ಯುವ ಬೌಲರ್‌ಗಳು ಒಟ್ಟಾಗಿ ಆರು ಆಫ್ಘನ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಪರಿಣಾಮವಾಗಿ, ಭಾರತ ತಂಡವು ಅಫ್ಘಾನಿಸ್ತಾನವನ್ನು 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ಆಲೌಟ್ ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us