ಭಾರತ- ಆಸೀಸ್ ನಡುವೆ ಮೊದಲ ಬಾರಿಗೆ ಸೆಮೀಸ್ ಫೈಟ್; ಹೇಗಿದೆ ಉಭಯ ತಂಡಗಳ ಬಲಾಬಲ?
India vs Australia Semifinal: 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಭಾರತದ ಬಲಿಷ್ಠ ಬ್ಯಾಟಿಂಗ್ ವಿರುದ್ಧ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗ ಕೊಂಚ ದುರ್ಬಲವಾಗಿ ಕಾಣುತ್ತಿದೆ. ಆದಾಗ್ಯೂ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗ ಅನುಭವಿಗಳಿಂದ ಕೂಡಿದ್ದು, ಅವರನ್ನು ಹಣಿಯಲ್ಲಿ ರೋಹಿತ್ ಪಡೆ ವಿಶೇಷ ಯೋಜನೆಯನ್ನೇ ಸಿದ್ಧಪಡಿಸಿಬೇಕಿದೆ.

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಮೊದಲ ಸೆಮಿಫೈನಲ್ ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವೆ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆದರೆ ಐಸಿಸಿ ಟೂರ್ನಿಗಳಲ್ಲಿ ಭಾರತ ಹಾಗೂ ಆಸೀಸ್ ನಡುವಿನ ಕಾಳಗದಲ್ಲಿ ಆಸೀಸ್ ತಂಡವೇ ಮೇಲುಗೈ ಸಾಧಿಸಿರುವ ಕಾರಣ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕೊಂಚ ಆತಂಕ ಮನೆ ಮಾಡಿದೆ. ಆದಾಗ್ಯೂ ಆಸೀಸ್ ತಂಡದಲ್ಲಿ ಇಂಜುರಿಗಳ ಸಮಸ್ಯೆ ಹೆಚ್ಚಿರುವ ಕಾರಣ, ಇದರ ಜೊತೆಗೆ ದುಬೈನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಇದು ಮೊದಲ ಪಂದ್ಯವಾಗಿರುವ ಕಾರಣ, ಕಾಂಗರೂಗಳಿಗಿಂತ ಟೀಂ ಇಂಡಿಯಾವೇ ಕೊಂಚ ಬಲಿಷ್ಠವಾಗಿ ಕಾಣುತ್ತಿದೆ. ಆದಾಗ್ಯೂ ಉಭಯ ತಂಡಗಳಲ್ಲಿ ಪಂದ್ಯವನ್ನೇ ಬದಲಿಸುವ ಆಟಗಾರರಿರುವ ಕಾರಣ ಈ ಪಂದ್ಯ ಈಗಾಗಲೇ ರೋಚಕತೆ ಮೂಡಿಸಿದೆ. ಆದರೆ ಅದಕ್ಕೂ ಮುನ್ನ ಎರಡು ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು? ಎಂಬುದನ್ನು ನೋಡೋಣ
ಉಭಯ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳು
ಭಾರತ
ಭಾರತ ತಂಡವು ತನ್ನ ಗುಂಪು ಹಂತದ ಮೂರು ಪಂದ್ಯಗಳಲ್ಲೂ ಜಯಗಳಿಸಿದೆ. ಭಾರತ ವಿಶ್ವದಲ್ಲೇ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ತಂಡದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಶುಭ್ಮನ್ ಗಿಲ್ ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದದರು. ರೋಹಿತ್ ಶರ್ಮಾ ಕೂಡ ತಂಡಕ್ಕೆ ವೇಗದ ಆರಂಭ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ.
ಆದರೆ ತಂಡದ ಚಿಂತೆಯೆಂದರೆ ಅದು ಬೌಲಿಂಗ್ ವಿಭಾಗ. ಅನುಭವಿ ವೇಗಿ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಷ್ಟು ಪರಿಣಾಮಕಾರಿಯಾಗಿಲ್ಲ. ಬಾಂಗ್ಲಾದೇಶ ವಿರುದ್ಧ ಶಮಿ ಐದು ವಿಕೆಟ್‌ಗಳನ್ನು ಕಬಳಿಸಿದ್ದರಾದರೂ ಆ ಬಳಿಕ ನಡೆದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ನಿಷ್ಪರಿಣಾಮಕಾರಿಯಾಗಿದ್ದರು. ಈ ಎರಡೂ ಪಂದ್ಯಗಳಲ್ಲಿ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಮೊಹಮ್ಮದ್ ಶಮಿ ಫಾರ್ಮ್‌ನಲ್ಲಿಲ್ಲದಿದ್ದರೆ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸಮಸ್ಯೆಗಳು ಎದುರಾಗಬಹುದು.
ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಂಡ ಈಗಾಗಲೇ ತುಂಬಾ ದುರ್ಬಲವಾಗಿ ಕಾಣುತ್ತಿದೆ. ಏಕೆಂದರೆ ಅನುಭವಿ ಆಟಗಾರರಾದ ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ಮತ್ತು ಪ್ಯಾಟ್ ಕಮ್ಮಿನ್ಸ್ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗರೂ ತಂಡದ ಬೌಲಿಂಗ್‌ನಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳು 351 ರನ್‌ಗಳನ್ನು ಬಿಟ್ಟುಕೊಟ್ಟರು. ಹಾಗೆಯೇ ಅಫ್ಘಾನಿಸ್ತಾನದಂತಹ ದುರ್ಬಲ ತಂಡದ ವಿರುದ್ಧವೂ 273 ರನ್‌ಗಳನ್ನು ಬಿಟ್ಟುಕೊಟ್ಟರು. ಆಸ್ಟ್ರೇಲಿಯಾದ ಅತಿದೊಡ್ಡ ದೌರ್ಬಲ್ಯವೆಂದರೆ ಅದರ ಬೌಲಿಂಗ್. ಇದರ ಹೊರತಾಗಿ ತಂಡದ ಬಲವನ್ನು ನೋಡಿದರೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಬ್ಯಾಟ್ಸ್‌ಮನ್‌ಗಳು ಇದ್ದಾರೆ, ಅವರು ಯಾವುದೇ ಸಮಯದಲ್ಲಿ ಆಟದ ದಿಕ್ಕನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
ಇದನ್ನೂ ಓದಿ: Champions Trophy 2025: ಭಾರತ- ಆಸೀಸ್ ಸೆಮೀಸ್ ಪಂದ್ಯ ರದ್ದಾದರೆ ಯಾವ ತಂಡ ಫೈನಲ್ಗೇರಲಿದೆ?
ದುಬೈ ಪಿಚ್ ಯಾರಿಗೆ ಸಹಕಾರಿ?
ಭಾರತ ತಂಡವು ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಮೂರು ಪಂದ್ಯಗಳಲ್ಲಿಯೂ ಪಿಚ್ ಬೌಲರ್ಗಳಿಗೆ ಹೆಚ್ಚು ಸಹಕಾರಿಯಾಗಿದ್ದು ಈ ಪಿಚ್‌ನಲ್ಲಿ ಇದುವರೆಗೆ 250 ರನ್ ದಾಟಲು ಸಾಧ್ಯವಾಗಿಲ್ಲ. ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಸೆಮಿಫೈನಲ್ ಪಂದ್ಯದಲ್ಲೂ ಪಿಚ್‌ನಲ್ಲಿ ಇದೇ ರೀತಿಯ ಸ್ಥಿತಿ ಕಂಡುಬರುವ ನಿರೀಕ್ಷೆಯಿದೆ. ದುಬೈನ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಲಿದೆ. ಇದರಿಂದಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಮಸ್ಯೆಗಳು ಉಂಟಾಗಬಹುದು. ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ ಸ್ಪಿನ್ನರ್‌ಗಳು ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ವೇಗದ ಬೌಲರ್‌ಗಳು ಆರಂಭದಲ್ಲಿ ಸಹಾಯ ಪಡೆಯಲ್ಲಿದ್ದು, ಆಟ ಮುಂದುವರೆದಂತೆ, ದುಬೈ ಪಿಚ್ ನಿಧಾನವಾಗಲು ಪ್ರಾರಂಭಿಸುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:44 pm, Mon, 3 March 25
